ಬೆಂಗಳೂರು: ನಟ ಕಮಲ್ ಹಾಸನ್ ಮತ್ತು ಪ್ರಕಾಶ್ ರೈ ನೀಡಿರುವ ಹೇಳಿಕೆ ಮೂರ್ಖತನದ್ದು ಎಂದು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.
ಹೊಸ ರಾಜಕೀಯ ಪಕ್ಷ ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷ (ಬಿಪಿಕೆಪಿ)ವನ್ನು ನಗರದ ಚಾಮರಾಜಪೇಟೆಯ ಜಂಗಮ ಕ್ಷೇತ್ರ ಪ್ರಾರ್ಥನಾ ಮಂದಿರದಲ್ಲಿ ಉದ್ಘಾಟಿಸಿ ಬಳಿಕ ಮಾತನಾಡಿದ ಅವರು, ಪ್ರಸ್ತುತ ಇರುವ ರಾಜಕೀಯ ಪಕ್ಷಗಳು ಮತ್ತು ರಾಜಕಾರಣಿಗಳ ಬಗ್ಗೆ ದೇಶದ ಜನ ಬೇಸತ್ತು ಹೋಗಿದ್ದಾರೆ. ಹೀಗಾಗಿ ಕಲುಷಿತವಾದ ದೇಶದ ರಾಜಕಾರಣವನ್ನು ಶುದ್ಧೀಕರಿಸಲು ಬಿಪಿಕೆಪಿ ಪಕ್ಷ ಆರಂಭವಾಗಿದೆ ಎಂದರು.
ಮೂರ್ಖತನದ ಹೇಳಿಕೆ: ಚಿತ್ರನಟರಾದ ಕಮಲ್ ಹಾಸನ್ ಮತ್ತು ಪ್ರಕಾಶ್ ರೈ ಅತ್ಯಂತ ಶ್ರೇಷ್ಠ ನಟರು. ಆದರೆ ಹಿಂದೂಗಳು ಭಯೋತ್ಪಾದನೆ ಮಾಡಿದಲ್ಲಿ ಈ ದೇಶದಲ್ಲಿ ಅಲ್ಪಸಂಖ್ಯಾತ ಸಮುದಾಯದವರು ಇದುವರೆಗೆ ಜೀವನ ನಡೆಸಲು ಆಗುತ್ತಿರಲಿಲ್ಲ. ಹೀಗಾಗಿ ಹಿಂದೂ ಭಯೋತ್ಪಾದನೆ ಎಂಬ ಹೇಳಿಕೆ ಮೂರ್ಖತನದ್ದು ಮತ್ತು ಅಷ್ಟೇ ಬಾಲಿಷವಾದದ್ದು ಎಂದು ಮುತಾಲಿಕ್ ಕಿಡಿಕಾರಿದರು.
ಸ್ಪರ್ಧೆ ಖಚಿತ: ಮುಂಬರುವ ವಿಧಾನಸಭೆ ಚುನಾವಣೆಗೆ ತಾವು ಸ್ಪರ್ಧಿಸುವುದು ಶತಃಸಿದ್ಧ. ಯಾವ ಪಕ್ಷದಿಂದ ಸ್ಪರ್ಧಿಸುವುದು ಎಂಬುದು ಇನ್ನೂ ಅಂತಿಮವಾಗಿಲ್ಲ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಮುತಾಲಿಕ್ ಪ್ರತಿಕ್ರಿಯಿಸಿದರು.
ವಿಶ್ವ ಒಕ್ಕಲಿಗರ ಸಂಸ್ಥಾನದ ಚಂದ್ರಶೇಖರ ಸ್ವಾಮೀಜಿ, ಕೊಳದ ಮಠದ ಶಾಂತವೀರ ಮಹಾಸ್ವಾಮೀಜಿ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಿರಂಜನ್ ಸಿ.ಜೈನ್, ಖಜಾಂಚಿ ಬಾಲಸುಬ್ರಮಣಿಯಮ್, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ರೇಣುಕಾ ಇತರರಿದ್ದರು.