ಮಲಯಾಳಿ ನಟಿ ಅಪಹರಣ, ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಇದೀಗ ದಕ್ಷಿಣ ಭಾರತದ ಶ್ರೇಷ್ಠ ನಟ ಕಮಲ್ ಹಾಸನ್ ಅವರಿಗೂ ಸಂಕಟ ಎದುರಾಗಿದೆ. ಏನೋ ಮಾಡಲು ಹೋಗಿ ಏನೋ ಆಯಿತು ಎಂಬಂತಾಗಿದೆ ಕಮಲ್ ಸ್ಥಿತಿ.
ಮಲಯಾಳಂ ನಟಿ ಅಪಹರಣ ಹಾಗೂ ದೌರ್ಜನ್ಯ ಪ್ರಕರಣ ದೇಶವ್ಯಾಪಿ ತಲ್ಲಣ ಸೃಷ್ಟಿಸಿದ್ದು ನಟ ದಿಲೀಪ್ ಬಂಧನ ನಂತರವಂತೂ ಈ ವಿಚಾರದಲ್ಲಿ ಭಾರೀ ಚರ್ಚೆಗಳು ಸಾಗಿವೆ. ಅದೇ ಹೊತ್ತಿಗೆ ಸಂತ್ರಸ್ತ ನಟಿಯ ಹೆಸರು ಬಹಿರಂಗಪಡಿಸಿರುವ ಕಮಲ್ ಹಾಸನ್ ಅವರು ಇದೀಗ ರಾಷ್ಟ್ರೀಯ ಮಹಿಳಾ ಆಯೋಗದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಅಪಹರಣ, ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಮಲಯಾಳಂ ನಟಿಯ ಹೆಸರನ್ನು ಬಹಿರಂಗಪಡಿಸಿದ ನಟನ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲು ರಾಷ್ಟ್ರೀಯ ಮಹಿಳಾ ಆಯೋಗ ನಿರ್ಧರಿಸಿದೆ.
ಕೆಲ ದಿನಗಳ ಹಿಂದೆ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ಸಂತ್ರಸ್ತ ನಟಿಯ ಹೆಸರನ್ನು ಕಮಲ್ ಹಾಸನ್ ಬಹಿರಂಗಪಡಿಸಿದ್ದರು. ಅಷ್ಟೇ ಅಲ್ಲ ಈ ಬಗ್ಗೆ ವ್ಯಾಪಕ ಆಕ್ಷೇಪ ವ್ಯಕ್ತವಾದಾಗ ಅವರು ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದರು. ಈ ಬೆಳವಣಿಗೆಯನ್ನು ಗಮನಿಸಿರುವ ಮಹಿಳಾ ಆಯೋಗ ಕಮಲ್ ಹಾಸನ್ ಅವರ ವಿರುದ್ಧ ದೂರು ದಾಖಲಿಸಲು ತೀರ್ಮಾನಿಸಿದೆ.
ಸದ್ಯವೇ ದೂರು ದಾಖಲಿಸಿ ಕಮಲ್ ಹಾಸನ್ ಅವರನ್ನು ವಿಚಾರಣೆ ನಡೆಸಲೂ ರಾಷ್ಟ್ರೀಯ ಮಹಿಳಾ ಆಯೋಗದ ದ ಮುಖ್ಯಸ್ಥೆ ಲಲಿತಾ ಕುಮಾರಮಂಗಲಂ ನಿರ್ಧರಿಸಿದ್ದಾರೆ.