Advertisement

ಕಲ್ಯಾಣಪುರ ಸಂತೆ ಮಾರುಕಟ್ಟೆ; ಸುಡು ಬಿಸಿಲಲ್ಲೇ ಒಣಮೀನು ಮಾರಾಟ

03:02 PM Jan 21, 2023 | Team Udayavani |

ಮಲ್ಪೆ: ಕಲ್ಯಾಣಪುರ ಸಂತೆ ಮಾರುಕಟ್ಟೆಯಲ್ಲಿ ಒಣ ಮೀನು ಮಾರಾಟ ಮಾಡುವ ಮಹಿಳೆಯರಿಗಾಗಿ ಸರಿಯಾದ ಮಾಡಿನ ವ್ಯವಸ್ಥೆ ಇಲ್ಲದೆ ಸುರಿಯುವ ಮಳೆಗೆ, ಬೇಸಗೆಯಲ್ಲಿ ಸುಡುವ ಬಿಸಿಲಿಗೆ ಮೈಯೊಡ್ಡಿ ಕುಳಿತು ಮೀನು ಮಾರಾಟ ಮಾಡಬೇಕಾದ ಸ್ಥಿತಿ ಎದುರಾಗಿದೆ. ಸಂಬಂಧಪಟ್ಟ ಆಡಳಿತ ಇವರಿಗೆ ಸೂಕ್ತ ವ್ಯವಸ್ಥೆ ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದೆಯಾದರೂ ಇದುವರೆಗೂ ಅದು ಕೈಗೂಡಿಲ್ಲ.

Advertisement

ಕೋಡಿಬೆಂಗ್ರೆ, ಪಡುತೋನ್ಸೆ ಮತ್ತು ಮಲ್ಪೆಯ ಸುಮಾರು 30ಕ್ಕೂ ಅಧಿಕ ಮಂದಿ ಇಲ್ಲಿ ಒಣಮೀನು ಮಾರುವ ಮಹಿಳೆಯರು ಇದ್ದಾರೆ. ಬಹುತೇಕ ಕೋಡಿಬೆಂಗ್ರೆ ಪ್ರದೇಶದವರು. ವಾರಕ್ಕೆ ಒಂದು ದಿನ ಮಾತ್ರ ಇಲ್ಲಿ ಸಂತೆ ನಡೆಯುತ್ತದೆ. ಆ ದಿನ ಇಲ್ಲಿ ಮಹಿಳೆಯರು ಒಣಮೀನನ್ನು ತಂದು ದಿನವಿಡೀ ಮಾರಾಟ ಮಾಡುತ್ತಾರೆ.

ಈ ಹಿಂದೆ ರಾಷ್ಟ್ರೀಯ ಹೆದ್ದಾರಿ ಬಳಿ ಸಂತೆ ಮಾರುಕಟ್ಟೆ ನಡೆಯುತ್ತಿದ್ದಾಗ, ಇಲ್ಲಿ ಮೀನು ಮಾರಾಟ ಮಾಡುವವರಿಗೆ ಸೂಕ್ತ ವ್ಯವಸ್ಥೆ ಇತ್ತು. ಇದೀಗ ಸಂತೆ ಮಾರುಕಟ್ಟೆ ರಾಷ್ಟ್ರೀಯ ಹೆದ್ದಾರಿಯ ಪಶ್ಚಿಮ ದಿಕ್ಕಿನಲ್ಲಿರುವ ವೀರಭದ್ರ ದೇವಸ್ಥಾನದ ಸಮೀಪವಿರುವ ಎಪಿಎಂಸಿ ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡ ಬಳಿಕ ಅದರಲ್ಲಿ ಒಣಮೀನು ಮಾರಾಟದ ಮಹಿಳೆಯರು ಕುಳಿತುಕೊಳ್ಳಲು ಅವಕಾಶ ವಂಚಿತರಾಗಿದ್ದರು ಎನ್ನಲಾಗಿತ್ತು.

ಆ ವೇಳೆ ಮಹಿಳೆಯರು ಕೋಡಿಬೆಂಗ್ರೆ ನಾಗರಿಕರ ಸಹಕಾರದಲ್ಲಿ ಉಡುಪಿ ನಗರಸಭೆಗೆ ಮನವಿಯನ್ನು ಮಾಡಿದ್ದರು. ಬಳಿಕ ಮೀನುಮಾರಾಟ ಮಾಡಲು ಹೊರಗಡೆ ಜಾಗದ ವ್ಯವಸ್ಥೆಯನ್ನು ಮಾಡಿದ್ದರೂ ಬಿಸಿಲಿಗೆ ಮೈಯೊಡ್ಡಿ ಕುಳಿತು ಮೀನು ಮಾರಾಟ ಮಾಡಬೇಕಾಯಿತು. ಹಾಗಾಗಿ ಅಂದಿನಿಂದಲೂ ಸರಿಯಾದ ನೆರಳಿನ ವ್ಯವಸ್ಥೆ ಇಲ್ಲದೆ ಬಿಸಿಲಿಗೆ ಕೊಡೆ ಹಿಡಿದುಕೊಂಡೆ ವ್ಯಾಪಾರ ಮಾಡಬೇಕಾದ ಸ್ಥಿತಿ ಎದುರಾಗಿದೆ.

ಜನಪ್ರತಿನಿಧಿಗಳಿಗೆ ಮನವಿ ಮಾಡಲಾಗಿದೆ ಸುಡು ಬಿಸಿಲಿನಿಂದ ಇಲ್ಲಿ ಕುಳಿತು ಕೊಳ್ಳುವದೇ ಕಷ್ಟಕರವಾಗಿದೆ. ನೆರಳಿಗಾಗಿ ಒಂದು ಸಣ್ಣ ಮಾಡನ್ನು ನಿರ್ಮಿಸಿ ಕೊಡಬೇಕೆಂದು ಕಳೆದ ಎರಡೂವರೆ ವರ್ಷಗಳಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಮಾಡುತ್ತಲೇ ಇದ್ದೇವೆ. ಆದರೆ ಯಾರೂ ಕೂಡ ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ.
-ಕಮಲಾಕ್ಷಿ ಕೋಡಿಬೇಂಗ್ರೆ, ಮೀನು ಮಾರುವ ಮಹಿಳೆ

Advertisement

ಬೇಡಿಕೆ ಪರಿಶೀಲಿಸಿ ಕ್ರಮ ಕೈಗೊಳಲಾಗುವುದು
ಸಂತೆ ಮಾರುಕಟ್ಟೆಯಲ್ಲಿ ತರಕಾರಿ ಮಾರಾಟಕ್ಕೆ ಮಾತ್ರ ಅವಕಾಶ ಇದೆ. ನಗರಸಭೆಯಿಂದ ಯಾವುದೇ ಶೆಡ್‌ನ್ನು ನಿರ್ಮಿಸುವಾಗ ಸೂಕ್ತ ವ್ಯವಸ್ಥೆಯೊಂದಿಗೆ ಮಾಡಬೇಕು. ಒಣಮೀನು ಮಾರಾಟಗಾರರು ಇಟ್ಟಿರುವ ಬೇಡಿಕೆಯನ್ನು ಪರಿಶೀಲನೆ ನಡೆಸಿ ಮುಂದಿನ ಕ್ರಮಕೈಗೊಳ್ಳಲಾಗುವುದು.
-ಸುಮಿತ್ರಾ ಆರ್‌. ನಾಯಕ್‌, ಅಧ್ಯಕ್ಷರು ಉಡುಪಿ ನಗರಸಭೆ

Advertisement

Udayavani is now on Telegram. Click here to join our channel and stay updated with the latest news.

Next