Advertisement
2008ರಿಂದ 2013ರ ವರೆಗಿನ ರಾಜ್ಯ ರಾಜಕೀಯದಲ್ಲಿ ಜನಾರ್ದನ ರೆಡ್ಡಿ ಅವರ ಅಬ್ಬರ, ರಾಜಕೀಯ ಪ್ರಾಬಲ್ಯ, ಬಳ್ಳಾರಿ ಜಿಲ್ಲೆ ಮಟ್ಟಿಗೆ ಅವರು ಹೇಳಿದ್ದೆ ಶಾಸನ ಎನ್ನುವಂತಹ ವಾತಾವರಣ, ಅನಂತರದಲ್ಲಿ ಆತ್ಮಸ್ನೇಹಿತ ಶ್ರೀರಾಮುಲು ನೇತೃತ್ವದಲ್ಲಿ ಬಿಎಸ್‌ಆರ್ ಕಾಂಗ್ರೆಸ್ ಸ್ಥಾಪನೆಯೊಂದಿಗೆ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದನ್ನು ಕಂಡಿದ್ದ ಜನರಿಗೆ ಜನಾರ್ದನ ರೆಡ್ಡಿ ಏನೇ ಮಾಡಲು ಮುಂದಾದರೂ ನಿರೀಕ್ಷೆ ದೊಡ್ಡದಾಗಿರುತ್ತದೆ. ಕಳೆ ದೊಂದು ದಶಕದಿಂದ ರಾಜಕೀಯವಾಗಿ ತೆರೆಯ ಹಿಂದೆ ಸರಿದಿದ್ದ ಅವರು ಇದೀಗ ಮತ್ತೆ ರಾಜಕೀಯ ಮುಖ್ಯವಾಹಿನಿಗೆ ಹಿಂದಿರುಗಿದ್ದಲ್ಲದೆ, ಸ್ವಂತ ಪಕ್ಷ ಕಟ್ಟುತ್ತಾರೆ ಎಂದಾಗಲೇ ದೊಡ್ಡ ನಿರೀಕ್ಷೆ ಸೃಷ್ಟಿಯಾಗಿತ್ತು. “ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ ಘೋಷಣೆ ಮಾಡಿದಾಗ ಹಲವು ನಾಯಕರನ್ನು ಸೆಳೆಯಬಹುದು ಎಂಬ ಮಾತು ಕೇಳಿಬಂದಿತ್ತು.
Related Articles
ಜನಾರ್ದನ ರೆಡ್ಡಿಯವರು ಗಂಗಾ ವತಿ ಕ್ಷೇತ್ರದಿಂದ ಸ್ಪರ್ಧಿಸುವು ದಾಗಿ ಹಾಗೂ ಪತ್ನಿ ಅರುಣಾ ರೆಡ್ಡಿ ಅವರನ್ನು ಬಳ್ಳಾರಿ ನಗರ ಕ್ಷೇತ್ರದಿಂದ ಸ್ಪರ್ಧೆಗಿಳಿಸುವುದಾಗಿ ಘೋಷಿಸಿದ್ದಾರೆ. ಕಲಬುರಗಿ ಜಿಲ್ಲೆಯ ಸೇಡಂ ಕ್ಷೇತ್ರದಿಂದ ತಮ್ಮ ಅಳಿಯನನ್ನು ಕಣಕ್ಕಿಳಿಸಲಿದ್ದಾರೆ ಎನ್ನಲಾಗಿದೆ. ರೆಡ್ಡಿಯವರು ಮುಖ್ಯವಾಗಿ ದಲಿತರು, ರೆಡ್ಡಿಗಳು ಹಾಗೂ ಮುಸ್ಲಿಮರಿಗೆ ಆದ್ಯತೆಯೊಂದಿಗೆ ಮತಬೇಟೆಗೆ ಮುಂದಾಗಿರುವುದು ಕಂಡು ಬರುತ್ತಿದೆ. ಗಂಗಾವತಿ ಇನ್ನಿತರ ಕಡೆ ದೇವಸ್ಥಾನಗಳಿಗಿಂತ ಮಸೀದಿಗಳಿಗೆ ಹೆಚ್ಚಿನ ನೆರವಿನ ಭರವಸೆ ನೀಡಿದ್ದಾರೆ ಎನ್ನಲಾಗುತ್ತಿದೆ. ಬಳ್ಳಾರಿ ನಗರ ಕ್ಷೇತ್ರದಲ್ಲಿ ಪತ್ನಿಯನ್ನು ಕಣಕ್ಕಿಳಿಸಲು ಯೋಜಿಸಿರುವ ರೆಡ್ಡಿಯವರು ಮುಖ್ಯವಾಗಿ ಅಲ್ಲಿನ ಮುಸ್ಲಿಂ ಮತದಾರರನ್ನು ಸೆಳೆಯುವ ಯತ್ನಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ಮತಬುಟ್ಟಿಗೆ ರೆಡ್ಡಿ ಎಷ್ಟು ಕೈ ಹಾಕುತ್ತಾರೋ ಅಷ್ಟು ಬಿಜೆಪಿಗೆ ಲಾಭ ಆಗುವುದು ಖಚಿತವಾಗಿದೆ.ಕಲ್ಯಾಣ ಕರ್ನಾಟಕದ ಇತರ ಕ್ಷೇತ್ರಗಳಲ್ಲಿಯೂ ಸಹ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ನಡೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ರೆಡ್ಡಿ ಮೊದಲ ಹೊಡೆತ ಕೊಡುವುದು ಬಿಜೆಪಿಗಲ್ಲ ಬದಲಾಗಿ ಕಾಂಗ್ರೆಸ್‌ಗೆ ಎನ್ನುವ ಅನುಮಾನ ಕಾಂಗ್ರೆಸಿಗರನ್ನು ಕಾಡತೊಡಗಿದೆ.
Advertisement
ಇದೊಂದು ರೀತಿಯಲ್ಲಿ ರೆಡ್ಡಿ ಯವರದ್ದು ಗೇಮ್ ಪ್ಲಾನಾ ಎಂಬ ಶಂಕೆಯನ್ನು ಕೆಲವರು ವ್ಯಕ್ತ ಪಡಿಸುತ್ತಿದ್ದಾರೆ. ರಾಜಕೀಯ ಮೂಲ ಗಳ ಪ್ರಕಾರ ಸ್ವತಃ ರೆಡ್ಡಿ ಸಹಿತ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿಗಳು ಗೆಲ್ಲುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ಮತ ಕಸಿಯುವ ಮೂಲಕ ಕೆಲವರ ಗೆಲುವು-ಸೋಲಿಗೆ ಖಂಡಿತವಾ ಗಿಯೂ ಕಾರಣವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಚುನಾವಣೆಗೆ ಫುಟ್ಬಾಲ್‌ನ್ನು ಪಕ್ಷದ ಚಿಹ್ನೆಯನ್ನಾಗಿ ಪಡೆದಿರುವ ರೆಡ್ಡಿಯವರು ಚುನಾವಣೆಯಲ್ಲಿ ಯಾರನ್ನು ಫುಟ್ಬಾಲ್ ಆಗಿಸಿಕೊಳ್ಳಲು ಮುಂದಾಗಿದ್ದಾರೋ ಕಾದು ನೋಡಬೇಕು.
ನಿಧಾನವಾಗಿ ಕರಗುತ್ತಿದೆಯೇ ರೆಡ್ಡಿ ಪಡೆ ?ಕಲ್ಯಾಣ ಕರ್ನಾಟಕದ ಕೆಲವು ಕ್ಷೇತ್ರಗಳಲ್ಲಿ ಬಿಜೆಪಿ-ಕಾಂಗ್ರೆಸ್ ಸಹಿತ ವಿವಿಧ ಪಕ್ಷಗಳ ಕೆಳ ಹಂತದ ಕೆಲವು ಕಾರ್ಯಕರ್ತರು, ಮುಖಂಡರು ರೆಡ್ಡಿ ಪಕ್ಷಕ್ಕೆ ಹೋಗಿದ್ದು ಬಿಟ್ಟರೆ ಪ್ರಮುಖರೆನ್ನು ವವರು ಇಲ್ಲವಾಗಿದೆ. ಹೋಗಿದ್ದ ಕೆಲವರು ನಿಧಾನಕ್ಕೆ ದೂರವಾಗುತ್ತಿ ದ್ದಾರೆ ಎನ್ನಲಾ ಗುತ್ತಿದೆ. ಸದ್ಯದ ಸ್ಥಿತಿಯಲ್ಲಿ ಜನಾರ್ದನ ರೆಡ್ಡಿ ಹಾಗೂ ಅವರ ಪತ್ನಿಯೇ ಸ್ಟಾರ್ ಕ್ಯಾಂಪೇನರ್ ಎನ್ನುವಂತಾಗಿದೆ. ಪಕ್ಷ ಆರಂಭಕ್ಕೂ ಮೊದಲು ದೊಡ್ಡ ಸಂಚಲನದ ನಿರೀಕ್ಷೆ ಮೂಡಿಸಿದ್ದ ರೆಡ್ಡಿ ಅವರು, ಮಾರ್ಚ್ ವೇಳೆಗೆ ಬಳ್ಳಾರಿ ಮಹಾನಗರ ಪಾಲಿಕೆ ವಶಪಡಿಸಿಕೊಳ್ಳುವುದಾಗಿ ಹೇಳಿದ್ದರಲ್ಲದೆ, ಹಲವು ಪ್ರಮುಖರು ಪಕ್ಷ ಸೇರುವುದು ಖಚಿತ ಎಂದು ಘೋಷಿಸಿದ್ದರು. ಇಲ್ಲಿವರೆಗೆ ಇದಾವುದೂ ಸಾಧ್ಯವಾಗಿಲ್ಲ. ಬಳ್ಳಾರಿ ಮಹಾನಗರ ಪಾಲಿಕೆ ವಶಪಡಿಸಿಕೊಳ್ಳುವುದಿರಲಿ, ಕನಿಷ್ಠ ಪಾಲಿಕೆ ಸದಸ್ಯರು ಸಹ ರೆಡ್ಡಿ ಅವರ ಜತೆ ಗುರುತಿಸಿಕೊಂಡಿಲ್ಲ. ಅವರದ್ದೇ ಹಿಡಿತ ಇರುವ ಬಳ್ಳಾರಿಯಲ್ಲಿಯೂ ಸಹ ಹೇಳಿಕೊಳ್ಳುವ ಯಾವ ನಾಯಕರು ಪಕ್ಷ ಸೇರಿಲ್ಲದಿರುವುದು ರೆಡ್ಡಿಯವರಿಗೆ ಹಿನ್ನಡೆಯಾದಂತಾಗಿದೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಕಾಂಗ್ರೆಸ್-ಬಿಜೆಪಿಯಲ್ಲಿ ಟಿಕೆಟ್ ದೊರೆಯದವರು ಯಾರಾದರೂ ಸ್ಪರ್ಧೆ ಮಾಡಲೇಬೇಕು ಎಂದು ಬಯಸಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕಡೆ ವಾಲಬಹುದೇನೋ ಎಂಬ ನಿರೀಕ್ಷೆ ಇದೆ. ಜನಾರ್ದನ ರೆಡ್ಡಿ ಎಂದರೇನೆ ಒಂದು ರೀತಿಯ ಹವಾ ಇದೆ. ಅದರಲ್ಲೂ ಕಲ್ಯಾಣ ಕರ್ನಾಟಕದಲ್ಲಿ ಇದು ಒಂದಿಷ್ಟು ಹೆಚ್ಚಿನ ಪ್ರಮಾಣದಲ್ಲಿದ್ದು, ಅದೇ ನಿರೀಕ್ಷೆ-ದೃಷ್ಟಿ ಯಿಂದಲೂ ಹಲವರು ಪಕ್ಷ ಸೇರಿರಬಹುದು. ಹವಾಕ್ಕೂ ವಾಸ್ತವಕ್ಕೂ ವ್ಯತ್ಯಾಸವಿದ್ದು, ಹವಾ ವಾಸ್ತವವಾದರೆ ನಿರೀಕ್ಷೆ ಹುಸಿಯಾಗದು ಇಲ್ಲವಾದರೆ ಸೇರಿದ ಸಂಖ್ಯೆಯೂ ನಿಧಾನಕ್ಕೆ ಕರಗಬಹುದಾಗಿದೆ. -ಅಮರೇಗೌಡ ಗೋನವಾರ