Advertisement

ಕಲ್ಯಾಣ್‌ ಕರ್ನಾಟಕ ಸಂಘ: ಮರಾಠಿ ಸಾಧಕರಿಗೆ ಸಮ್ಮಾನ

05:01 PM May 04, 2017 | Team Udayavani |

ಕಲ್ಯಾಣ್‌: ಕಲ್ಯಾಣ್‌ ಕರ್ನಾಟಕ ಸಂಘದ ವತಿಯಿಂದ ಮಹಾರಾಷ್ಟ್ರ ದಿನಾಚರಣೆಯು ಮೇ 1ರಂದು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಕಲ್ಯಾಣ್‌ ಪಶ್ಚಿಮದ ಗಿರಿಜಾ ಪಯ್ಯಡೆ ಸಭಾಗೃಹದಲ್ಲಿ ನಡೆಯಿತು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಮನೀಯ ಸಾಧನೆಗೈದ ಮರಾಠಿ ಭಾಷಿಕ ಸಾಧಕರನ್ನು ಗಣ್ಯರ ಸಮ್ಮುಖದಲ್ಲಿ ಗೌರವಿಸಲಾಯಿತು.

Advertisement

ಸಮಾರಂಭದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಗಮನೀಯ ಸಾಧನೆಗೈದ ಡಾ| ಸಾಯಿನಾಥ ಭೈರಾಗಿ, ಔದ್ಯೋಗಿಕ ಕ್ಷೇತ್ರದ ಸಾಧಕ ಧನಂಜಯ ಪಾಠಕ್‌, ಅವಿನಾಶ್‌ ಲಕ್ಷ್ಮಣ್‌ ಮೇಹರ, ಶಿಕ್ಷಣ ಕ್ಷೇತ್ರದ ಸಾಧಕ ಸುನೀತಾ ಅವ್ಹಾಡ್‌ ಅವರನ್ನು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಿ ಗೌರವಿಸಲಾಯಿತು.

ಸಮ್ಮಾನ ಸ್ವೀಕರಿಸಿ ಮಾತನಾಡಿದ ಡಾ| ಸಾಯಿನಾಥ್‌ ಭೈರಾಗಿ ಅವರು, ದೇಶ-ವಿದೇಶಗಳಲ್ಲಿ ಪಡೆದ ಸಮ್ಮಾನಕ್ಕಿಂತ ಕನ್ನಡಿಗರ ನೀಡಿದ ಈ ಸಮ್ಮಾನ ದಿಂದ ನನ್ನ ಹೃದಯ ತುಂಬಿ ಬಂದಿದೆ. ಕರ್ನಾಟಕ-ಮಹಾರಾಷ್ಟ್ರ ಬೇರೆ ಬೇರೆ ರಾಜ್ಯಗಳಲ್ಲಿದ್ದರೂ ಸಹಿತ ನಮ್ಮ  ಶ್ವಾಸ  ಒಂದೇ ಆಗಿದ್ದು, ಮರಾಠಿ ಬಾಂಧವರು ಸಹಿತ ಕನ್ನಡಿಗರನ್ನು ಗೌರವಿಸುವ ಕಾರ್ಯ ಮಾಡಬೇಕು ಎಂದು ಕರೆ ನೀಡಿದರು.

ಉದ್ಯೋಗ ಕ್ಷೇತ್ರದಲ್ಲಿ ಗಮನೀಯ ಸಾಧನೆಗೈದ ಧನಂ ಜಯ ಪಾಠಕ್‌ ಮಾತನಾಡಿ, ಮಹಾ ರಾಷ್ಟ್ರದ ಆರಾಧ್ಯ ದೈವ ಪಂಢರಾಪುರದ ವಿಟuಲ ಕರ್ನಾಟಕದವನಾಗಿದ್ದು, ಕನ್ನಡಿಗರ ಈ ಸಮ್ಮಾನ ಸಾಕ್ಷಾತ್‌ ವಿಟuಲನ ಆಶೀರ್ವಾದ ಎಂದು ಹೃದಯಪೂರ್ವಕವಾಗಿ ಸ್ವೀಕರಿಸುತ್ತಿದ್ದೇನೆ ಎಂದರು.

2008ರಲ್ಲಿ ಮುಂಬಯಿ ದಾಳಿಯ ಸಂದರ್ಭದಲ್ಲಿ ತಮ್ಮ ಜೀವವನ್ನು ಲೆಕ್ಕಿಸದೆ ತಾಜ್‌ಹೊಟೇಲ್‌ನಿಂದ 26 ಮಂದಿಯನ್ನು ರಕ್ಷಿಸಿದ ಮುಂಬಯಿ ಅಗ್ನಿಶಾಮಕ ದಳದ ಅಧಿಕಾರಿ ಅವಿನಾಶ್‌ ಲಕ್ಷ್ಮಣ್‌ ಮೇಹರ ಅವರು ಮಾತನಾಡಿ, ಕಲ್ಯಾಣ್‌ ಕರ್ನಾಟಕ ಸಂಘವು ನೀಡಿದ ಸಮ್ಮಾನ ಮುಂಬಯಿಯ ಅಗ್ನಿಶಾಮಕ ದಳದ ಸಮಸ್ತ ಸಿಬಂದಿಗಳಿಗೆ ಸಂದ ಗೌರವವಾಗಿದೆ ಎಂದರು.

Advertisement

ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಸೇವೆಗೈದ ಸುನೀತಾ ಆವ್ಹಾಡ್‌, ಜೀವನ ಸಂವರ್ಧನ ಫೌಂಡೇಷನ್‌ನ ಸದಾಶಿವ ಚವಾಣ್‌, ಅಭ್ಯುದಯ ಪ್ರತಿಷ್ಠಾನದ ಲಲಿತಾ ಸಾರಂಗ ಅವರು ಸಮ್ಮಾನ ಸ್ವೀಕರಿಸಿ ತಮ್ಮ ಮನದಾಳದ ಮಾತುಗಳನ್ನು ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಕನ್ನಡ ಹಾಗೂ ಮರಾಠಿ ಬಾಂಧವರಿಂದ ಮರಾಠಿ ಭಾಷೆಯಲ್ಲಿ ನೃತ್ಯ ರೂಪಕ, ಕೋಳಿ ನೃತ್ಯ, ಲೇಜಿಮ್‌ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.

ಶಾಸಕ ನರೇಂದ್ರ ಪವಾರ್‌ ಮುಖ್ಯ ಅತಿಥಿಗಳಾಗಿ ಹಾಗೂ ಕಲ್ಯಾಣ್‌ ಡೊಂಬಿವಲಿಯ ಮಹಾನಗರ ಪಾಲಿಕೆಯ ಶಿಕ್ಷಣ ವಿಭಾಗದ ಸಭಾಪತಿ ವೈಜಯಂತಿ ಗುಜರ ಘೊಲಪ್‌ ಅವರು ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಕಲ್ಯಾಣ್‌ ಕರ್ನಾಟಕ ಸಂಘದ ಅಧ್ಯಕ್ಷ ಗೋಪಾಲ್‌ ಶೆಟ್ಟಿ, ಉಪಾಧ್ಯಕ್ಷ ಕೆ. ಎನ್‌. ಸತೀಶ್‌, ಗೌರವ ಕಾರ್ಯದರ್ಶಿ ನೂತನ ಹೆಗಡೆ, ಖ್ಯಾತ ಶಿಕ್ಷಣ ಪ್ರೇಮಿ ಡಾ| ಸುರೇಂದ್ರ ಶೆಟ್ಟಿ, ಮಹಿಳಾ ವಿಭಾಗದ ದರ್ಶನಾ ಸೊನ್ಕರ, ಅಹಲ್ಯಾ ಶೆಟ್ಟಿ, ಸುರೇಶ್‌ ಶೆಟ್ಟಿ, ಮಾಜಿ ಅಧ್ಯಕ್ಷ ನಂದಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಸ್ವಾತಿ ನಾತು ಕಾರ್ಯಕ್ರಮ ನಿರ್ವಹಿಸಿದರು. ಗೀತಾ ಪೂಜಾರಿ ಸಮ್ಮಾನಿತರನ್ನು ಪರಿಚಯಿಸಿದರು. ನೂತನಾ ಹೆಗಡೆ ವಂದಿಸಿದರು. 

   ಚಿತ್ರ-ವರದಿ: ಗುರುರಾಜ ಪೋತನೀಸ

Advertisement

Udayavani is now on Telegram. Click here to join our channel and stay updated with the latest news.

Next