ಮುಂಬಯಿ: ಕಲ್ಯಾಣ್ ಪರಿಸರದ ಹಿರಿಯ ಮಹಿಳಾ ಸಂಘಟನೆಗಳಲ್ಲೊಂದಾದ ಸ್ತ್ರೀ ಶಕ್ತಿ ಮಹಿಳಾ ಘಟಕ ಕಲ್ಯಾಣ್ ವತಿಯಿಂದ ಜು. 23ರಂದು ಕಲ್ಯಾಣ್ ಪಶ್ಚಿಮದ ವಾಮನ್‌ರಾವ್ ಪೈ ಸಭಾಗೃಹದಲ್ಲಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಶಾಲಾ ಪರಿಕರಗಳು, ವಿದ್ಯಾರ್ಥಿ ವೇತನ ವಿತರಣೆ ಮತ್ತು 2016-2017ನೇ ಶೈಕ್ಷಣಿಕ ಸಾಲಿನ ಎಸ್‌ಎಸ್‌ಸಿ, ಎಚ್‌ಎಸ್‌ಸಿ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಜರಗಿತು.
ಕಲ್ಯಾಣ್ ಪರಿಸರದ ಹೆಸರಾಂತ ಸಮಾಜ ಸೇವಕಿ ಗೀತಾ ಚಂದ್ರಹಾಸ ಪೂಜಾರಿ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲ್ಯಾಣ್ ಕರ್ನಾಟಕ ಸಂಘದ ಉಪಾಧ್ಯಕ್ಷೆ ಅಹಲ್ಯಾ ರಮೇಶ್ ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸ್ಥಳೀಯ ನಗರ ಸೇವಕಿ ನೀಲೀಮಾ ಸಂಜಯ್ ಪಾಟೀಲ್ ಮತ್ತು ಗೌರವ ಅತಿಥಿಯಾಗಿ ಕಲ್ಯಾಣ್ ಕರ್ನಾಟಕ ಸಂಘದ ಸ್ಥಾಪಕ ಅಧ್ಯಕ್ಷ ನಂದಾ ಶೆಟ್ಟಿ ಅವರು ಆಗಮಿಸಿದ್ದರು.
ಅತಿಥಿಗಳ ಹಸ್ತದಿಂದ ಈ ಆರ್ಥಿಕ ನೆರವು ಮತ್ತು ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಕಲ್ಯಾಣ್ ಪರಿಸರದಲ್ಲಿ ಹಿಂದಿ, ಮರಾಠಿ, ತುಳು, ಕನ್ನಡ ಭಾಷೆಯ ಭಜನ ಶಿಬಿರವನ್ನು ಆಯೋಜಿಸಿ ಹೆಚ್ಚಿನವರಲ್ಲಿ ಸಂಗೀತದ ಅಭಿರುಚಿಯನ್ನು ಹುಟ್ಟಿಸುವ ಕೈಂಕರ್ಯದಲ್ಲಿ ತೊಡಗಿರುವ ಭಜನೆ ಶ್ರೀಧರ ರೈ ಎಂದೇ ಪ್ರಸಿದ್ಧಿಯಲ್ಲಿರುವ ಶ್ರೀಧರ ರೈ ಅವರ ಅನುಪಸ್ಥಿತಿಯಲ್ಲಿ ಅವರ ಪತ್ನಿ ಪ್ರಸನ್ನಿ ಎಸ್. ರೈ ಅವರನ್ನು ಗೌರವಿಸಲಾಯಿತು.
ಸಂಗೀತ ಕಾರ್ಯಕ್ರಮವನ್ನು ನೀಡಿದ ಡೊಂಬಿವಲಿಯ ಗಾಯಕ ಭರತ್ ಶೆಟ್ಟಿ ಮತ್ತು ಅವರ ಮಾತೃಶ್ರೀ ಅವರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಗೌರವ ಅತಿಥಿಗಳಾಗಿ ಬಿಲ್ಲವರ ಅಸೋಸಿಯೇಶನ್ ಕಲ್ಯಾಣ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ, ಶಾಹಡ್ ಶ್ರೀ ಮೂಕಾಂಬಿಕಾ ಮಂದಿರದ ಅಧ್ಯಕ್ಷ ಕೃಷ್ಣ ಪೂಜಾರಿ ಅವರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನಿತ್ತು ಶುಭಹಾರೈಸಿದರು.
ಕಾರ್ಯಕ್ರಮಕ್ಕೆ ಸಹಕರಿಸಿದ ಸಮಾಜ ಸೇವಕ ದಾನಿ ಡಾ| ಸುರೇಂದ್ರ ವಿ. ಶೆಟ್ಟಿ, ಎಂಜಿನಿಯರ್ ಟಿ. ಎಸ್. ಉಪಾಧ್ಯಾಯ, ಗುರುದೇವ್ ಭಾಸ್ಕರ್ ಶೆಟ್ಟಿ, ಮತ್ತಿತರ ದಾನಿಗಳನ್ನು ಅಭಿನಂದಿಸಲಾಯಿತು.
ಉಲ್ಲಾಸ್ ನಗರದ ಭಾರತಿ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಘಟಕದ ಅಧ್ಯಕ್ಷೆ ಗೀತಾ ಚಂದ್ರಹಾಸ ಪೂಜಾರಿ ಸ್ವಾಗತಿಸಿ, ಅತಿಥಿಗಳನ್ನು ಗೌರವಿಸಿದರು.
ಸಂಸ್ಥೆಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.