Advertisement

ಕಲ್ಸಂಕ ಸೇತುವೆ: ತಾತ್ಕಾಲಿಕ ತೋಡು ದುರಸ್ತಿಯೂ ಅಪೂರ್ಣ

06:15 AM May 26, 2018 | Team Udayavani |

ಉಡುಪಿ: ಉಡುಪಿ – ಮಣಿಪಾಲ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಕಲ್ಸಂಕ ಜಂಕ್ಷನ್‌ನಲ್ಲಿರುವ ಸೇತುವೆಯ ವಿಸ್ತರಣೆ ಕಾಮಗಾರಿಗೆ ನಗರಸಭೆಯಿಂದ ಅನುದಾನ ಮಂಜೂರಾಗಿದ್ದರೂ, ಇದೀಗ ತಾತ್ಕಾಲಿಕ ಕಾಮಗಾರಿ ಅಪೂರ್ಣಗೊಂಡಿದೆ.ಆದರೆ ಯಾವ ಕಾರಣಕ್ಕಾಗಿ ಕಾಮಗಾರಿ ಅಪೂರ್ಣಗೊಂಡಿದೆ ಎಂಬುದು ಉತ್ತರ ಸಿಗದ ಪ್ರಶ್ನೆಯಾಗಿದೆ. 

Advertisement

ಮಣ್ಣು ತೆಗೆಯಲು ಬಾಕಿ 
ತೋಡಿನಲ್ಲಿರುವ ಮಣ್ಣನ್ನು ಪೂರ್ಣವಾಗಿ ತೆಗೆಯದೆ ಹಾಗೆಯೇ ಬಿಡಲಾಗಿದೆ. ತೋಡಿನ ಇಕ್ಕೆಲಗಳಲ್ಲಿ ನೀರಿನ ರಭಸಕ್ಕೆ ಮಣ್ಣು ಜರಿಯದಂತೆ ತಾತ್ಕಾಲಿಕವಾಗಿ ಶಿಲೆಕಲ್ಲು ಕಟ್ಟುವ ಕೆಲಸ ಅಪೂರ್ಣವಾಗಿದೆ. ಈ ಹಿಂದೆ ಕಟ್ಟಿದ ತಡೆಗೋಡೆ ಅಲ್ಲಲ್ಲಿ ಬೀಳುವ ಪರಿಸ್ಥಿತಿಯಲ್ಲಿದೆ. ಇನ್ನು  ಕೃಷ್ಣಮಠಕ್ಕೆ ತೆರಳುವ ರಸ್ತೆಯ ಎಡಪಾರ್ಶ್ವದಲ್ಲಿ ನೀರಿನ ತೋಡು ಬಾಯ್ದೆರೆದುಕೊಂಡಿದೆ. ಇಲ್ಲಿನ ರಸ್ತೆ ಇಕ್ಕಟ್ಟಾಗಿದ್ದು, ತಿರುವಿನಿಂದ ಕೂಡಿದೆ. ರಸ್ತೆಯ ಆರಂಭದಲ್ಲಿಯೇ ಬಲ ಪಾರ್ಶ್ವದಲ್ಲಿ ರಿಕ್ಷಾ ನಿಲ್ದಾಣವಿದೆ. ಸದಾ ಕಾಲ ಪಾದಾಚಾರಿಗಳು ನಡೆದಾಡುವ, ಕೃಷ್ಣಮಠಕ್ಕೆ ಪ್ರವಾಸಿಗರು ಸಾಗಿ ಬರುವ ಈ ಜನನಿಬಿಡ ಪ್ರದೇಶದಲ್ಲಿ ಬಾಯ್ದೆರೆದ ತೋಡು ಅಪಾಯದ ಕರೆ ಗಂಟೆ ಬಾರಿಸುತ್ತಿದೆ.

ಕಾಮಗಾರಿಯ ಉದ್ದೇಶ
ನಗರಸಭೆ ಅನುದಾನದಡಿ ಕಲ್ಸಂಕ ಸೇತುವೆ ಕಾಮಗಾರಿಗೆ 75 ಲ.ರೂ. ಮಂಜೂರಾಗಿದೆ. ಮಳೆಗಾಲದ ಪೂರ್ವದಲ್ಲಿ ತೋಡಿನಲ್ಲಿದ್ದ ಮಣ್ಣನ್ನು ಹಿಟಾಚಿ ಮೂಲಕ ಮೇಲಕ್ಕೆತ್ತಿ ಸರಾಗ ನೀರು ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಅಂಬಾಗಿಲಿನಿಂದ ಬರುವ ವಾಹನಗಳಿಗೆ ನೇರವಾಗಿ ಕೃಷ್ಣಮಠಕ್ಕೆ ತೆರಳುವಂತೆ ಮತ್ತು ಮಣಿಪಾಲದಿಂದ ಬರುವ ವಾಹನಗಳಿಗೆ ಫ್ರೀ ಲೆಫ್ಟ್ (ಮುಕ್ತ ಎಡ ರಸ್ತೆ) ದೊರಕಬೇಕೆನ್ನುವ ಉದ್ಧೇಶದಿಂದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇದ್ದ ಸ್ಥಳಾವಕಾಶದಲ್ಲಿಯೇ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ನೆಲೆಯಲ್ಲಿ “ಕ್ಯೂ’ ಮಾದರಿಯಲ್ಲಿ ಸೇತುವೆ ನಿರ್ಮಿಸಲಾಗುವುದು’ ಎಂದು ನಗರಸಭೆ ಮೂಲಗಳು ತಿಳಿಸಿವೆ.  

ಮಳೆಗಾಲಕ್ಕೂ ಮುನ್ನ ಕಾಮಗಾರಿ
ಕಾಮಗಾರಿಯನ್ನು ಮರು ವಿನ್ಯಾಸಗೊಳಿಸಿ ಇನ್ನಷ್ಟು ವ್ಯವಸ್ಥಿತವಾಗಿ ಸೇತುವೆ ನಿರ್ಮಿಸಲಾಗುವುದು. ಕಳೆದೆರಡು ದಿನಗಳಿಂದ ಕಾರ್ಮಿಕರ ಕೊರತೆಯಿಂದಾಗಿ ಕಾಮಾಗಾರಿ ನಿಲ್ಲಿಸಲಾಗಿದ್ದು, ಕಾಮಗಾರಿ ಮುಂದುವರಿಯಲಿದೆ. ಸೇತುವೆಗೆ ಸಂಬಂಧಿಸಿದಂತೆ ಯಾವುದೇ ಅಪಾಯವಾಗದ ರೀತಿಯಲ್ಲಿ ಮಳೆ ಬರುವ ಮುನ್ನವೇ ತಾತ್ಕಾಲಿಕ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.   ನನ್ನ ವ್ಯಾಪ್ತಿಗೆ ಎಷ್ಟು ಕಾಮಗಾರಿ ಬಂದಿದೆಯೋ ಅಷ್ಟನ್ನು ಮಾಡಿ ಮುಗಿಸಿದ್ದೇನೆ ಎಂದು ಗುತ್ತಿಗೆದಾರರು ಹೇಳುತ್ತಾರೆ. 

ಮಳೆಗಾಲ ಅನಂತರ ಮತ್ತೆ ಕಾಮಗಾರಿ ಶುರು
ತೋಡಿನಲ್ಲಿ ತೆಗೆಯದೆ ಬಿಟ್ಟ ಮಣ್ಣು ನೀರಿನ ರಭಸಕ್ಕೆ ಕೊಚ್ಚಿ ಹೋಗಿ ಸೇತುವೆ ಬಳಿಯಲ್ಲಿರುವ ಹೊಂಡವನ್ನು ಮುಚ್ಚುತ್ತದೆ ಎನ್ನುವ ಕಾರಣಕ್ಕೆ ಸ್ವಲ್ಪ ಮಣ್ಣನ್ನು ಬಿಡಲಾಗಿದೆ. ನೀರು ಸರಾಗವಾಗಿ ಹರಿಯಬೇಕೆನ್ನುವ ಉದ್ದೇಶದಿಂದ ತೋಡು ಅಗಲ ಮಾಡಿದ ಭಾಗಕ್ಕೆ ನೆಲದಡಿಯಿಂದಲೇ ತಾತ್ಕಾಲಿಕವಾಗಿ ತಡೆಗೋಡೆ ಕಟ್ಟಲಾಗಿದೆ. ಇಲ್ಲಿ ಎರಡೂ ಕಡೆಯೂ ರಸ್ತೆ ಇರುವುದರಿಂದ ನೀರನ್ನು ಡೈವರ್ಶನ್‌ ಮಾಡಲು ಅವಕಾಶವಿಲ್ಲ. ಮಳೆಗಾಲದ ಪೂರ್ವವೇ ಮಳೆ ಬಂದ ನೆಲೆಯಲ್ಲಿ  ಕಾಮಗಾರಿಯಲ್ಲಿ ಸ್ವಲ್ಪಮಟ್ಟಿಗೆ ಹಿನ್ನೆಡೆಯಾಗಿದೆ. ಈಗ ಕಾಮಗಾರಿ ತಾತ್ಕಾಲಿಕ ಸ್ಥಗಿತ ಮಾಡಲಾಗಿದ್ದು, ಮಳೆಗಾಲ ಅನಂತರ ಕಾಮಗಾರಿ ಶುರುವಾಗಲಿದೆ.  
– ಕೆಮೂ¤ರು ಕೃಷ್ಣಮೂರ್ತಿ ಭಟ್‌,ಗುತ್ತಿಗೆದಾರ

Advertisement
Advertisement

Udayavani is now on Telegram. Click here to join our channel and stay updated with the latest news.

Next