ಕಾರ್ಕಳ: ಮಕ್ಕಳ ಪ್ರತಿಭೆಯನ್ನು ತೋರ್ಪಡಿಸಲು ಪ್ರತಿಭಾ ಕಾರಂಜಿ-ಕಲೋತ್ಸವ ಉತ್ತಮ ವೇದಿಕೆ. ಮಕ್ಕಳಿಗೆ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಯಲ್ಲೂ ಅವಕಾಶ ನೀಡಿದಂತಾಗುತ್ತದೆ. ಆ ಮೂಲಕ ನಮ್ಮ ಜನಪದ ಸಂಸ್ಕೃತಿಯನ್ನೂ ಬೆಳೆಸಿದಂತಾಗುತ್ತದೆ ಎಂದು ಜಿ.ಪಂ. ಕೃಷಿ ಮತ್ತು ಕೈಗಾರಿಕಾ ಸ್ಥಾಯೀ ಸಮಿತಿ ಅಧ್ಯಕ್ಷ ಉದಯ ಎಸ್. ಕೋಟ್ಯಾನ್ ಹೇಳಿದರು. ಜಿ.ಪಂ., ಸಾರ್ವಜನಿಕ ಶಿಕ್ಷಣ ಇಲಾಖೆ, ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆ ಕಾರ್ಕಳದ ವತಿಯಿಂದ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೆ. 18ರಂದು ನಡೆದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ 2018-19ನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾ.ಪಂ. ಅಧ್ಯಕ್ಷೆ ಮಾಲಿನಿ ಜೆ. ಶೆಟ್ಟಿ ಮಾತನಾಡಿ, ನಮ್ಮ ದೇಶದ ಹಿಂದಿನ ಕಾಲದ ಕೆಲವು ಪದ್ದತಿಗಳು, ಆಚರಣೆಗಳು ಉಳಿಯಬೇಕಾದರೆ ಇಂತಹ ಕಾರ್ಯಕ್ರಮಗಳು ನಡೆಯಬೇಕಾದ ಅವಶ್ಯಕತೆ ಇದೆ ಎಂದರು. ತಾಲೂಕಿನ ಸುಮಾರು 55 ಶಾಲೆಗಳ 944 ವಿದ್ಯಾರ್ಥಿಗಳು ವಿವಿಧ ಸ್ಫರ್ಧೆಗಳಲ್ಲಿ ಭಾಗವಹಿಸಿದ್ದರು.
ಉದ್ಯಮಿ ಮುನಿಯಾಲ್ ಉದಯ ಕುಮಾರ್ ಶೆಟ್ಟಿ, ಜಿ.ಪಂ. ಸದಸ್ಯೆ ರೇಶ್ಮಾ ಶೆಟ್ಟಿ, ಜಿ.ಪಂ. ಸದಸ್ಯರಾದ ಸುಮಿತ್ ಶೆಟ್ಟಿ ಕೌಡೂರು, ದಿವ್ಯಶ್ರೀ ಅಮೀನ್, ಜ್ಯೋತಿ ಹರೀಶ್ ಹಾಗೂ ಸುಹಾಸ್ ಹೆಗ್ಡೆ ನಂದಳಿಕೆ, ರವೀಂದ್ರ ಶೆಟ್ಟಿ, ಚಿತ್ತರಂಜನ್ ಶೆಟ್ಟಿ, ಸುಧಾಕರ ಶೆಟ್ಟಿ, ನಾರಾಯಣ ಶೆಣೈ, ಪ್ರಭಾಕರ ಶೆಟ್ಟಿ, ಅಶೋಕ್ ಶೆಟ್ಟಿ, ಪ್ರವೀಣ್ ಸಾಲ್ಯಾನ್, ಸೌಭಾಗ್ಯಾ ಉಪಸ್ಥಿತರಿದ್ದರು. ಶಿವಾನಂದ ಪ್ರಸ್ತಾವನೆಗೈದರು. ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಾಲಕ್ಷ್ಮೀ ಎಂ. ಪಾಟೀಲ್ ಸ್ವಾಗತಿಸಿದರು. ಮುಖ್ಯೋಪಾಧ್ಯಾಯಿನಿ ಸುಧಾರಾಣಿ ಭಟ್ ವಂದಿಸಿದರು. ಮಾಧವಿ ನಿರೂಪಿಸಿದರು.
ಗ್ರಾಮೀಣ ಕಲಾ ವಸ್ತುಗಳ ಪ್ರದರ್ಶನ
ಕಲೋತ್ಸವದ ಪ್ರಯುಕ್ತ ಅನೇಕ ಗ್ರಾಮೀಣ ಕಲಾ ವಸ್ತುಗಳು, ದೇಶ – ವಿದೇಶಗಳ ನಾಣ್ಯಗಳ ಸಂಗ್ರಹದ ಪ್ರದರ್ಶನ ನಡೆಯಿತು. ಹಳೇ ಮಾದರಿಯ ಕಾಯಿನ್‌ಗಳು, ಚಿನ್ನ-ಹಣದ ಪೆಟ್ಟಿಗೆ, ಮರದ ಪೆಟ್ಟಿಗೆ, ಕುಬಲ್ ಪೆಟ್ಟಿಗೆ, ಉರ್ಲಿ, ಗಿಂಡೆ, ಕೈಸಟ್ಟಿ, ಅಡಕೆ ಕತ್ತರಿಗಳು, ಬರ್ಚಿ, ಖಡ್ಗ, ದೈವಗಳ, ಮೊಗಗಳು, ವಿಭೂತಿ, ಕಂಚಿನ ಲೋಟ, ಗ್ರಾಮಫೋನ್, ಮರಾಯಿ, ಚೆನ್ನೆಮಣೆ, ಹಳೆಯ ದೀಪಗಳನ್ನು ಇಡಲಾಗಿತ್ತು. ಉಪನ್ಯಾಸಕ ಸುಧಾಕರ ಶೆಟ್ಟಿ ಹಾಗೂ ಆಶಿತಾ ಎಸ್. ಕಡಂಬ ಅವರು ನೇತೃತ್ವ ವಹಿಸಿಕೊಂಡಿದ್ದರು.