ಪುಣೆ: ಕನ್ನಡ ಸಂಘ ಪುಣೆಯ ಕಾವೇರಿ ವಿದ್ಯಾ ಸಮೂಹ ಔಂದ್‌ನಲ್ಲಿ ಪ್ರಸ್ತುತ ನಡೆಸುತ್ತಿರುವ ಪುಣೆ ನಗರಪಾಲಿಕೆಯ ಕಟ್ಟಡದಲ್ಲಿರುವ ಪ್ರಾಥಮಿಕ ಶಾಲೆಯನ್ನು ನಗರದ ಬಾನೇರಿನಲ್ಲಿ ಸ್ವಂತ ಕಟ್ಟಡಕ್ಕೆ ಸ್ಥಳಾಂತರಿಸುವ ನಿಮಿತ್ತ ಜೂ. 1ರಂದು ಶಾಸ್ತ್ರೋಕ್ತವಾಗಿ ಪೂಜೆಗೈದು ಸ್ಥಳಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಗಣಹೋಮ ಹಾಗೂ ಸತ್ಯನಾರಾಯಣ ಮಹಾಪೂಜೆಯನ್ನು ಆಯೋಜಿಸುವುದರ ಮೂಲಕ ಶಾಲೆಯನ್ನು ಶುಭಾರಂಭ ಗೊಳಿಸಲಾಯಿತು. ವೇದಮೂರ್ತಿ ಹರೀಶ್ ಐತಾಳ್ ಧಾರ್ಮಿಕ ಪೂಜಾ ಕಾರ್ಯ ಕ್ರಮಗಳನ್ನು ನಡೆಸಿಕೊಟ್ಟರು. ಸುಧಾಕರ್ ರಾವ್ ದಂಪತಿ ಹಾಗೂ ವಿಶ್ವಸ್ತರು ಪೂಜಾ ವಿಧಿಗಳಲ್ಲಿ ಭಾಗವಹಿಸಿದರು.
ಕನ್ನಡ ಸಂಘದ ಉಪಾಧ್ಯಕ್ಷ ಡಾ| ನಾರಾಯಣ ಹೆಗ್ಡೆ, ಉಪಾಧ್ಯಕ್ಷೆ ಇಂದಿರಾ ಸಾಲ್ಯಾನ್, ಕಾರ್ಯದರ್ಶಿ ಮಾಲತಿ ಕಲ್ಮಾಡಿ, ಕೋಶಾಧಿಕಾರಿ ಶ್ರೀನಿವಾಸ ಆಳ್ವ, ವಿಶ್ವಸ್ತರಾದ ಡಾ| ಬಾಲಾಜಿತ್ ಶೆಟ್ಟಿ, ಲಯನ್ ಚಂದ್ರಹಾಸ್ ಶೆಟ್ಟಿ, ಜನಸಂಪರ್ಕಾಧಿಕಾರಿ ರಾಮದಾಸ್ ಆಚಾರ್ಯ, ಆಡಳಿತಾಧಿಕಾರಿ ಪ್ರಸಾದ್ ಅಕೊಲ್ಕರ್, ಮುಖ್ಯ ಶಿಕ್ಷಕಿ ಲಕ್ಷ್ಮೀ ಗಾಂಧಿ, ದೇವಿಕಾ ಶೆಟ್ಟಿ ಮತ್ತಿತರ ಅಧ್ಯಾಪಕ ಮತ್ತು ಆಡಳಿತ ವರ್ಗದ ಸದಸ್ಯರು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಬೆಳೆಯುತ್ತಿರುವ ಮಹಾನಗರ ಪುಣೆಯಲ್ಲಿ ಸಾಂಸ್ಕೃತಿಕ, ವಿದ್ಯಾ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ಕಳೆದ ಆರು ದಶಕಗಳಿಂದ ನಿರಂತರ ತನ್ನನ್ನು ತೊಡಗಿಸಿಕೊಂಡಿರುವ ಕನ್ನಡ ಸಂಘ ಮತ್ತು ಕಾವೇರಿ ವಿದ್ಯಾ ಸಮೂಹ ವಿದ್ಯಾನಗರಿ ಪುಣೆಯಲ್ಲಿ ಇನ್ನೊಂದು ಉತ್ತಮ ವಿದ್ಯಾಲಯವನ್ನು ಆರಂಭಿಸುತ್ತ ಈ ನಿಟ್ಟಿನಲ್ಲಿ ಒಂದು ಆದರ್ಶ ವಿದ್ಯಾಲಯವನ್ನು ಸ್ಥಾಪಿಸಿ ಪ್ರಗತಿ ಪರ ಮಾರ್ಗದಲ್ಲಿ ಮುನ್ನಡೆಯುತ್ತಿದೆ. ಪೂಜೆಯ ಅನಂತರ ಪ್ರಸಾದ ವಿತರಣೆ ಮತ್ತು ಲಘು ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.
ಚಿತ್ರ-ವರದಿ: ಕಿರಣ್ ಬಿ. ರೈ ಕರ್ನೂರು