Advertisement

ಕಲ್ಲೂರ ಗ್ರಾಮ ಸೀಲ್‌ಡೌನ್‌

10:09 AM May 23, 2020 | Suhan S |

ರಾಮದುರ್ಗ: ತಾಲೂಕಿನ ಮುಳ್ಳೂರ ಗ್ರಾಮ ಪಂಚಾಯತ ವ್ಯಾಪ್ತಿಯ ಕಲ್ಲೂರ ಗ್ರಾಮದಲ್ಲಿ 7 ತಿಂಗಳ ಹೆಣ್ಣು ಮಗುವಿಗೆ ಗುರುವಾರ ಕೊವೀಡ್‌ -19 ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಕಲ್ಲೂರ ಗ್ರಾಮವನ್ನು ಕಂಟೈನ್‌ಮೆಂಟ್‌ ಝೋನ್‌ ಎಂದು ಜಿಲ್ಲಾಧಿಕಾರಿಗಳು ಘೋಷಿಸಿದ್ದು, ಅಧಿಕಾರಿಗಳು ಶುಕ್ರವಾರ ಗ್ರಾಮಕ್ಕೆ ಭೇಟಿ ನೀಡಿ ಕಟ್ಟು ನಿಟ್ಟಿನ ಕ್ರಮಗಳನ್ನು ಜಾರಿ ಮಾಡಿದ್ದಾರೆ.

Advertisement

ಸಹಾಯಕ ಪೊಲೀಸ್‌ ಅಧೀಕ್ಷಕ ಅಮರನಾಥ ರೆಡ್ಡಿ, ಉಪ ವಿಭಾಗಾಧಿಕಾರಿ ಶಿವಾನಂದ ಭಜಂತ್ರಿ, ತಹಶೀಲ್ದಾರ್‌ ಗಿರೀಶ್‌ ಸ್ವಾದಿ, ಡಿವೈಎಸ್‌ಪಿ ಶಂಕರಗೌಡ ಪಾಟೀಲ, ಸಿಪಿಐ ಲಖನ್‌ಮಸಗುಪ್ಪಿ, ಪಿಎಸ್‌ಐ ಆನಂದ ಡೋಣಿ, ತಾಲೂಕಾ ವೈದ್ಯಾಧಿಕಾರಿ ಮಹೇಶ ಚಿತ್ತರಗಿ ಗ್ರಾಮಕ್ಕೆ ಭೇಟಿ ನೀಡಿ ಸಭೆ ನಡೆಸಿದರು. ಗ್ರಾಮವನ್ನು ಸಂಪೂರ್ಣ ಸೀಲ್‌ಡೌನ್‌ ಮಾಡಿ ಮನೆ ಬಿಟ್ಟು ಹೊರಗೆ ಬರದಂತೆ ಅಧಿಕಾರಿಗಳು ಗ್ರಾಮಸ್ಥರಿಗೆ ತಾಕೀತು ಮಾಡಿದರು.

ಕಲ್ಲೂರ ಗ್ರಾಮದಿಂದ ಬೇರೆ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳನ್ನು ಬಂದ್‌ ಮಾಡಲಾಗಿದೆ. ಗ್ರಾಮದ ಮೂಲಕ ಹಾಯ್ದು ಹೋಗುವ ವಾಹನಗಳಿಗೂ ಅಧಿಕಾರಿಗಳು ನಿರ್ಬಂಧ ಹೇರಿದ್ದಾರೆ. ಕಂಟೈನ್‌ಮೆಂಟ್‌ ಝೋನ್‌ ಘೋಷಣೆ ಕಾರಣದಿಂದಾಗಿ ಗ್ರಾಮದಲ್ಲಿ ಈಗಾಗಲೇ ನಡೆಸಲು ಉದ್ದೇಶಿಸಿರುವ ಎಲ್ಲ ಕಾರ್ಯಕ್ರಮಗಳು, ಮದುವೆ, ಸಭೆ, ಸಮಾರಂಭಗಳನ್ನು ರದ್ದುಗೊಳಿಸಬೆಕು ಎಂದು ಅಧಿಕಾರಿಗಳು ಸೂಚಿಸಿದರು. ಗ್ರಾಮಸ್ಥರಿಗೆ ಅಗತ್ಯ ವಸ್ತುಗಳನ್ನು ತಲುಪಿಸುವ ನಿಟ್ಟಿನಲ್ಲಿ ಮೂರು ದಿನಕ್ಕೊಮ್ಮೆ ತರಕಾರಿ, ಹಾಲು ವಿತರಣೆ ಆಗಲಿದೆ.

ಇದರ ಜೊತೆಗೆ ಅಂಗನವಾಡಿ ಮಕ್ಕಳಿಗೆ ಮನೆ ಮನೆಗೆ ಕಿಟ್‌ ನೀಡಲು ಅಧಿಕಾರಿಗಳು ಸೂಚನೆ ನೀಡಿದರು. ಹಳ್ಳಿಯ ಜನ ಹೊಲ ಗದ್ದೆಗಳಿಗೆ ಹೋಗಲು ಅವಕಾಶ ಮಾಡಿಕೊಡಬೇಕು ಎಂದು ಜಿಲ್ಲಾ ಪಂಚಾಯತ ಸದಸ್ಯ ರೇಣಪ್ಪ ಸೋಮಗೊಂಡ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next