Advertisement

ಕಲ್ಲಾಜೆ ಸಂಪರ್ಕ ರಸ್ತೆ ಕುಸಿತ : ಪರ್ಯಾಯ ವ್ಯವಸ್ಥೆಗೆ ಸೂಚನೆ

02:25 AM Jul 02, 2018 | Karthik A |

ಬೆಳ್ತಂಗಡಿ: ಇಂದಬೆಟ್ಟು ಗ್ರಾ.ಪಂ. ವ್ಯಾಪ್ತಿಯ ಕಲ್ಲಾಜೆ ಶಾಲೆ ಸಂಪರ್ಕ ರಸ್ತೆಯ ಕಡಂಬಿಲದಲ್ಲಿ ರಸ್ತೆ ಬದಿ ಮಣ್ಣು ಕುಸಿತದ ಪರಿಣಾಮ ಸಂಪರ್ಕ ಕಡಿತದ ಭೀತಿ ಎದುರಾಗಿದ್ದು, ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಅನಿವಾರ್ಯ ಎಂಬ ಸ್ಥಿತಿ ನಿರ್ಮಾಣವಾಗಿದೆ. ರವಿವಾರ ಶಾಸಕ ಹರೀಶ್‌ ಪೂಂಜ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪರ್ಯಾಯ ವ್ಯವಸ್ಥೆಗೆ ಗ್ರಾ.ಪಂ.ಗೆ ಸೂಚನೆ ನೀಡಿದ್ದಾರೆ. ಪ್ರಸ್ತುತ ರಸ್ತೆಯಲ್ಲಿ ದೊಡ್ಡ ವಾಹನಗಳ ಸಂಚಾರ ಕಷ್ಟಕರವಾಗಿದ್ದು, ಸಣ್ಣ ಪುಟ್ಟ ವಾಹನಗಳು ಚಲಿಸುತ್ತಿವೆ. ಆದರೆ ರಸ್ತೆ ಇನ್ನಷ್ಟು ಕುಸಿಯುವ ಸಾಧ್ಯತೆ ಇದ್ದು, ಎಚ್ಚರಿಕೆ ಅಗತ್ಯವಾಗಿದೆ. ಈ ಭಾಗದಲ್ಲಿ ಸುಮಾರು 300ಕ್ಕೂ ಅಧಿಕ ಕುಟುಂಬಗಳು ವಾಸಿಸುತ್ತಿದ್ದು, ಸಂಪರ್ಕಕ್ಕೆ ಇರುವ ಏಕೈಕ ರಸ್ತೆ ಇದಾಗಿದೆ. ಕಲ್ಲಾಜೆ ಕ್ರಾಸ್‌ನಿಂದ ಈ ರಸ್ತೆ ಸುಮಾರು 3 ಕಿ.ಮೀ. ಉದ್ದವಿದ್ದು, ಶಾಲೆ, ಅಂಗನವಾಡಿಯನ್ನು ಸಂಪರ್ಕಿಸುತ್ತಿದೆ. ಸ್ಥಳಕ್ಕೆ ಜಿ.ಪಂ. ಸಹಾಯಕ ಎಂಜಿನಿಯರ್‌ ಮೊಹಮ್ಮದ್‌ ಅವರು ಭೇಟಿ ನೀಡಿ ಈಗಾಗಲೇ ಪರಿಶೀಲನೆ ನಡೆಸಿದ್ದಾರೆ.

Advertisement

ಪರ್ಯಾಯ ವ್ಯವಸ್ಥೆ ಏನು?
ಪ್ರಸ್ತುತ ಇರುವ ರಸ್ತೆಯನ್ನು ಉಳಿಸಬೇಕಾದರೆ ಕುಸಿದಿರುವ ಸ್ಥಳದಲ್ಲಿ ತಡೆಗೋಡೆ ನಿರ್ಮಾಣ ಮಾಡಬೇಕಿದೆ. ಆದರೆ ಪ್ರಸ್ತುತ ಮಳೆಗಾಲದಲ್ಲಿ ಅದು ಕಷ್ಟಸಾಧ್ಯವಾಗಿದ್ದು, ಜತೆಗೆ ಸಾಕಷ್ಟು ಪ್ರಮಾಣದ ಅನುದಾನದ ಅಗತ್ಯವೂ ಇದೆ. ಹೀಗಾಗಿ ತಾತ್ಕಾಲಿಕ ವ್ಯವಸ್ಥೆಯಾಗಿ ಹತ್ತಿರದ ಗುಡ್ಡದ ಭಾಗದಲ್ಲಿ ಮಣ್ಣು ತೆಗೆದು ಪರ್ಯಾಯ ವ್ಯವಸ್ಥೆ ಮಾಡುವಂತೆ ಶಾಸಕರು ಸೂಚನೆ ನೀಡಿದ್ದಾರೆ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಪರ್ಯಾಯ ವ್ಯವಸ್ಥೆ ಮಾಡುವಂತೆ ಶಾಸಕರು ಗ್ರಾ.ಪಂ. ಅಧ್ಯಕ್ಷೆ ನೇತ್ರಾವತಿ ಹಾಗೂ ಅಭಿವೃದ್ಧಿ ಅಧಿಕಾರಿ ಕೊರಗಪ್ಪ ನಾಯ್ಕ ಅವರಿಗೆ ಸಲಹೆ ನೀಡಿದ್ದಾರೆ. ಗ್ರಾ.ಪಂ. ಸದಸ್ಯ ಸಂಜೀವ ಗೌಡ, ಮಾಜಿ ಸದಸ್ಯರಾದ ವೆಂಕಪ್ಪ ಕೋಟ್ಯಾನ್‌, ರಮೇಶ್‌ ಕೆಂಗಾಜೆ, ಉಮೇಶ್‌ ಕೊಪ್ಪದ ಕೋಡಿ, ಸ್ಥಳೀಯರಾದ ಆನಂದ ಅಡೀಲ್‌, ಯೋಗೀಶ್‌ ಕೊಪ್ಪದಕೋಡಿ, ಅಣ್ಣಿ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ಜತೆಗೆ ಸುಮಾರು 50 ಮಂದಿ ಗ್ರಾಮಸ್ಥರು ಕೂಡ ಶಾಸಕರ ಪರಿಶೀಲನೆ ವೇಳೆ ಭಾಗವಹಿಸಿದ್ದರು.

ಗಣಿಗಾರಿಕೆ ಕಾರಣ?
ಕಲ್ಲಾಜೆ ರಸ್ತೆ ಕುಸಿಯುವುದಕ್ಕೆ ರಸ್ತೆಯ ಬದಿಯ ಮಣ್ಣು ತೆಗೆದಿರುವುದು ಹಾಗೂ ಕಲ್ಲು ಗಣಿಗಾರಿಕೆಯ ಘನ ವಾಹನ ಸಂಚಾರವೇ ಪ್ರಮುಖ ಕಾರಣವೆಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಘನ ವಾಹನ ಸಂಚಾರದಿಂದ ರಸ್ತೆಯ ಮೇಲೆ ಒತ್ತಡ ಬಿದ್ದಿದೆ. ಜತೆಗೆ ಮಳೆಗಾಲದಲ್ಲಿಯೂ ಘನ ವಾಹನ ಸಂಚಾರದಿಂದ ಈ ರೀತಿ ಕುಸಿದಿದೆ ಎಂಬ ಆರೋಪಗಳು ಕೇಳಿಬರುತ್ತಿದ್ದರೂ ಯಾವುದೇ ಕ್ರಮ ಜರಗಿಸಿಲ್ಲ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ. ಪ್ರಸ್ತುತ ರಸ್ತೆಯ ಆರಂಭದಲ್ಲಿ ಘನ ವಾಹನಗಳಿಗೆ ಪ್ರವೇಶವಿಲ್ಲ ಎಂದು ಫಲಕ ಹಾಕಲಾಗಿದ್ದು, ಅಪಾಯದ ಹಿನ್ನೆಲೆಯಲ್ಲಿ ಕುಸಿದಿರುವ ಸ್ಥಳಕ್ಕೆ ತಂತಿಯನ್ನು ಕಟ್ಟಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next