ಬಂಟ್ವಾಳ : ದ.ಕ.ಜಿಲ್ಲೆಯಲ್ಲಿಯೇ ಅತ್ಯಂತ ಅದ್ದೂರಿ ಮೊಸರು ಕುಡಿಕೆ ಎಂದು ಪ್ರಸಿದ್ದವಾದ ಕಲ್ಲಡ್ಕ ಶ್ರೀರಾಮ ಭಜನ ಮಂದಿರ ಆಶ್ರಯದ 85ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಮೊಸರು ಕುಡಿಕೆ ಉತ್ಸವ ಅತ್ಯಂತ ವೈಭವಯುತವಾಗಿ ಸಹಸ್ರಾರು ಸಂಖ್ಯೆಯ ಭಕ್ತರು, ಸಾರ್ವಜನಿಕರ ಪಾಲ್ಗೊಳ್ಳುವಿಕೆಯಲ್ಲಿ ಆ. 15ರಂದು ಸಂಜೆ ನಡೆಯಿತು.
ಶ್ರೀ ರಾಮ ಮಂದಿರದಲ್ಲಿ ಮಂಗಳಾರತಿ ಬಳಿಕ ಶ್ರೀಕೃಷ್ಣ ಪಲ್ಲಕಿಯನ್ನು ಹೊರಡಿಸಲಾಯಿತು. ಪಲ್ಲಕಿಗೆ ರಾ. ಸ್ವ. ಸೇ. ಸಂಘದ ಡಾ| ಪ್ರಭಾಕರ ಭಟ್ ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ಕಲ್ಲಡ್ಕ ಮೇಲಿನ ಪೇಟೆಯಿಂದ ಕೆ.ಸಿ.ರೋಡ್ ತನಕ ನಡೆದ ಮೆರವಣಿಗೆಯಲ್ಲಿ ದಾರಿ ನಡುವೆ ಅಲ್ಲಲ್ಲಿ ಎತ್ತರದ ಅಟ್ಟಳಿಗೆಯಲ್ಲಿ ಕಟ್ಟಿದ ಮೊಸರು ಕುಡಿಕೆಗಳನ್ನು ಒಡೆಯುವ ಮೂಲಕ ಯುವಕರು ಸಾಹಸ, ಕೌಶಲ ಪ್ರದರ್ಶನ ಮಾಡಿದರು. ಕೆ.ಸಿ.ರೋಡ್‌ನಿಂದ ವಾಪಸಾದ ಮೆರವಣಿಗೆ ಹಿ.ಪ್ರಾ. ಶಾಲೆಯಲ್ಲಿ ಸಮಾಪನಗೊಂಡು ಸಭಾ ಕಾರ್ಯಕ್ರಮ, ಬಹುಮಾನ ವಿತರಣೆ ನಡೆಯಿತು.
ನೂರಾರು ಶ್ರೀಕೃಷ್ಣ ವೇಷಧಾರಿ ಪುಟಾಣಿಗಳ ಸಾಲು, ಸ್ತಬ್ಧಚಿತ್ರಗಳು, ಚೆಂಡೆವಾದಕರ ನೃತ್ಯ ವೈವಿಧ್ಯ, ಅಲ್ಲಲ್ಲಿ ತೂಗ ಹಾಕಲಾದ ಮೊಸರಿನ ಕುಡಿಕೆ ಕಣ್ಮನ ಸೆಳೆದವು.
ಮೆರವಣಿಗೆಯಲ್ಲಿ ಬಿಜೆಪಿ ನೇತಾರ ರಾಜೇಶ್ ನಾೖಕ್ ಉಳಿಪಾಡಿಗುತ್ತು, ಜಿ.ಪಂ. ಸದಸ್ಯೆ ಕಮಲಾಕ್ಷಿ ಕೆ.ಪೂಜಾರಿ, ತಾ.ಪಂ. ಸದಸ್ಯ ಮಹಾಬಲ ಆಳ್ವ, ಮಂದಿರದ ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ಜಿತೇಂದ್ರ ಎಸ್. ಕೊಟ್ಟಾರಿ, ಮಂದಿರದ ಅಧ್ಯಕ್ಷ ಕೆ.ಪದ್ಮನಾಭ ಕೊಟ್ಟಾರಿ, ಪ್ರಮುಖರಾದ ಎ. ರುಕ್ಮಯ ಪೂಜಾರಿ, ಜಿ. ಪಂ.ಸದಸ್ಯ ಚೆನ್ನಪ್ಪ ಕೋಟ್ಯಾನ್, ದಿನೇಶ್ ಅಮೂrರು, ಗ್ರಾ.ಪಂ. ಅಧ್ಯಕ್ಷೆ ಜಯಲಕ್ಷ್ಮೀ, ಪ್ರಮುಖರಾದ ಕೆ. ಕೃಷ್ಣಪ್ಪ, ಮೋನಪ್ಪ ದೇವಸ್ಯ, ರಾಜೇಶ್ ಕೊಟ್ಟಾರಿ ಮತ್ತಿತರರು ಉಪಸ್ಥಿತರಿದ್ದರು.