Advertisement

ಕಲ್ಲಡ್ಕ ಇರಿತ ಪ್ರಕರಣ: ಎಸ್‌ಪಿ ಮಾದರಿ ನಡೆ

11:48 AM Dec 28, 2017 | |

ಮಂಗಳೂರು: ಬಂಟ್ವಾಳ ತಾಲೂಕಿನ ಕಲ್ಲಡ್ಕದಲ್ಲಿ ಮಂಗಳವಾರ ಸಂಜೆ ನಡೆದ ಇರಿತ ಪ್ರಕರಣವನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸಿ ತತ್‌ಕ್ಷಣವೇ ಪರಿಸ್ಥಿತಿಯನ್ನು ಪೊಲೀಸರು ನಿಯಂತ್ರಣಕ್ಕೆ ತೆಗೆದುಕೊಳ್ಳುವಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಧೀರ್‌ ರೆಡ್ಡಿ ಅವರು ತೆಗೆದುಕೊಂಡ ತುರ್ತುಕ್ರಮಗಳ ಬಗ್ಗೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

Advertisement

ಬಿ.ಸಿ.ರೋಡ್‌ನ‌ಲ್ಲಿ ಆರ್‌ಎಸ್‌ಎಸ್‌ ಕಾರ್ಯಕರ್ತ ಶರತ್‌ ಮಡಿವಾಳ ಹತ್ಯೆಯ ಬಳಿಕ ಕೋಮು ಸಂಘರ್ಷ ಸಂಭವಿಸಿದಾಗ ಮಂಡ್ಯ ಜಿಲ್ಲೆಯಲ್ಲಿ ಖಡಕ್‌ ಪೊಲೀಸ್‌ ಅಧಿಕಾರಿ ಎನಿಸಿಕೊಂಡಿದ್ದ ಸುಧೀರ್‌ ಕುಮಾರ್‌ ರೆಡ್ಡಿ ದಕ್ಷಿಣ ಕನ್ನಡಕ್ಕೆ ಎಸ್‌ಪಿಯಾಗಿ ಬಂದರು. ರೆಡ್ಡಿ ಜಿಲ್ಲೆಗೆ ಬಂದು 6 ತಿಂಗಳು ಕಳೆದಿದ್ದು ಇಲ್ಲಿವರೆಗೆ ಕೋಮು ಸಂಘರ್ಷದ ಗಂಭೀರ ಘಟನೆಗಳು ಸಂಭವಿಸಿರಲಿಲ್ಲ. ಹೀಗಿರು ವಾಗ ಅತೀ ಸೂಕ್ಷ್ಮ ಪ್ರದೇಶವಾಗಿರುವ ಕಲ್ಲಡ್ಕದಲ್ಲಿ ಮಂಗಳವಾರ ಸಂಜೆ ಇರಿತ ಸಂಭವಿಸಿತ್ತು. ಘಟನೆಯ ಸುದ್ದಿ ತಿಳಿಯುತ್ತಲೇ ಸ್ಥಳೀಯರು ಆತಂಕಿತರಾಗಿ ಅಂಗಡಿಗಳು ಬಂದ್‌ ಆಗಿದ್ದವು. ವಾಹನ ಸಂಚಾರವೂ ತೀರಾ ವಿರಳ ಹಂತಕ್ಕೆ ತಲುಪಿತ್ತು.

ವದಂತಿಗಳಿಗೆ ಬ್ರೇಕ್‌
ಜಿಲ್ಲೆಯಲ್ಲಿ ಕಲ್ಲಡ್ಕ ಸೂಕ್ಷ್ಮಪ್ರದೇಶವಾಗಿ ಗುರುತಿಸಿಕೊಂಡಿದೆ. ಕರೋಪಾಡಿ ಗ್ರಾ. ಪಂ. ಉಪಾಧ್ಯಕ್ಷರಾಗಿದ್ದ ಜಲೀಲ್‌ ಕೊಲೆ ಪ್ರಕರಣದ ಆರೋಪಿ ಕೇಶವ ಮೇಲೆ ದುಷ್ಕರ್ಮಿಗಳಿಂದ ಹಲ್ಲೆಯಾಗುತ್ತಿದ್ದಂತೆ ಕಲ್ಲಡ್ಕ ಪೇಟೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಆದರೆ ಈ ಘಟನೆ ಸಂಭವಿಸಿದ ಅರ್ಧ ತಾಸಿನೊಳಗೆ ಎಸ್‌ಪಿ ಮಂಗಳೂರಿ ನಿಂದ ಕಲ್ಲಡ್ಕಕ್ಕೆ ದೌಡಾಯಿಸಿದ್ದರು. ಕಲ್ಲಡ್ಕಕ್ಕೆ ಹೋಗುತ್ತಿದ್ದಾಗಲೂ ಸ್ಥಳದಲ್ಲಿದ್ದ ಪೊಲೀಸರಿಂದ ಕ್ಷಣ ಕ್ಷಣದ ಮಾಹಿತಿ ಪಡೆದು ಸಲಹೆ ಸೂಚನೆ ನೀಡಿದ ಅವರು, ಕೂಡಲೇ ಪೊಲೀಸರ ಅಧಿಕೃತ ಮಾಧ್ಯಮ ವಾಟ್ಸಾಪ್‌ ಗ್ರೂಪ್‌ನಲ್ಲಿ ಇರಿತ ಘಟನೆಯ ಮಾಹಿತಿ ಹಾಕಿ  ಎಲ್ಲೂ ವದಂತಿ ಹರಡದಂತೆ ಮಾಧ್ಯಮಕ್ಕೆ ಸರಿಯಾದ ಮಾಹಿತಿ ಯನ್ನು ಆಗಿಂದಾಗೆ ನೀಡಿದರು.

ಚೂರಿ ಇರಿತಕ್ಕೆ ಒಳಗಾಗಿದ್ದ ವ್ಯಕ್ತಿಯ ದೇಹದ ಮೇಲೆ ಎಷ್ಟು ಇಂಚು ಉದ್ದ ಮತ್ತು ಅಗಲಕ್ಕೆ ಗಾಯವಾಗಿದೆ ಎಂಬುದನ್ನು ಕೂಡ ಸ್ಪಷ್ಟವಾಗಿ ಜನರಿಗೆ ತಿಳಿಸುವ ಯತ್ನ ಮಾಡಿದರು. ಮಾತ್ರವಲ್ಲದೆ ಮಾಧ್ಯಮಕ್ಕೆ ನಿಖರ ಮಾಹಿತಿ ಕೊಟ್ಟು, ವದಂತಿ ಅಥವಾ ಸುಳ್ಳು ಸುದ್ದಿ ಹರಡುವುದಕ್ಕೆ ಅವಕಾಶವೇ ನೀಡಲಿಲ್ಲ.

ತಪ್ಪು ಮಾಹಿತಿಗೆ ಎಚ್ಚರಿಕೆ
ಕೆಲವು ಜಾಲ ತಾಣಗಳಲ್ಲಿ ಅದಾಗಲೇ ಅಸ್ಪಷ್ಟ ಮಾಹಿತಿ ಹಾಗೂ ಚೂರಿ ಇರಿತಕ್ಕೊಳಗಾಗಿದ್ದ ವ್ಯಕ್ತಿ ಎಂಬುದಾಗಿ ಬಿಂಬಿಸುವ ಬೇರೆ ಫೋಟೊ ಅಪ್‌ಲೋಡ್‌ ಮಾಡಲಾಗಿತ್ತು. ಅದನ್ನು ಗಮನಿ ಸಿದ ಎಸ್‌ಪಿ ಅಂಥ ವೈಬ್‌ ಸೈಟ್‌ನವರಿಗೆ ತಪ್ಪು ಮಾಹಿತಿ ಹಾಕಿರುವುದನ್ನು ಸರಿಪಡಿಸುವಂತೆ ಸೂಚಿ ಸಿದ್ದರು ಎನ್ನಲಾಗಿದೆ. ಈ ನಡುವೆ ಗಾಯಾಳು ಚಿಕಿತ್ಸೆ ಪಡೆಯುತ್ತಿರುವ ಫೋಟೊವನ್ನು ಕೂಡ ಎಸ್‌ಪಿ ಅವರೇ ವಾಟ್ಸಪ್‌ ಗ್ರೂಪ್‌ಗೆ ಹಾಕಿ ಎಲ್ಲೂ ಗೊಂದಲ ಉಂಟಾಗದಂತೆ ಎಚ್ಚರಿಕೆ ವಹಿಸಿದರು. ಈ ನಡುವೆ ಪೊಲೀಸ್‌ ಅಧಿಕಾರಿಗಳ ಸಭೆ ನಡೆಸಿ ಆರೋಪಿಗಳ ಸೆರೆಗೆ ತಂಡವನ್ನೂ ರಚಿಸಿ ಮಧ್ಯರಾತ್ರಿಯೊಳಗೆ ಅವರನ್ನು ಕಾರ್ಯಾಚರಣೆಗೆ ಇಳಿಸಿದ್ದರು.

Advertisement

6 ಗಂಟೆಯೊಳಗೆ ಮಾಹಿತಿ ಸಂಗ್ರಹ
ಘಟನೆಯ 6 ಗಂಟೆಯೊಳಗೆ ಅದಕ್ಕೆ ಸಂಬಂಧಿಸಿದ ಸಾಕಷ್ಟು ಮಾಹಿತಿಗಳನ್ನು ಪೊಲೀಸರು ಸಂಗ್ರಹಿಸಿಯಾಗಿತ್ತು. 12 ಗಂಟೆಯೊಳಗೆ
ಕಲ್ಲೆಸೆತ ಪ್ರಕರಣ ಮತ್ತು ಇರಿತ ಪ್ರಕರಣಕ್ಕೆ ಸಂಬಂಧಿಸಿ ತಲಾ ಓರ್ವರನ್ನು ವಶಕ್ಕೆ ಪಡೆದೂ ಆಗಿತ್ತು. ಒಟ್ಟಾರೆಯಾಗಿ ಶಾಂತಿ ಕಾಪಾಡುವುದಕ್ಕೆ ಒಬ್ಬ ಪೊಲೀಸ್‌ ಅಧಿಕಾರಿಯಾಗಿ ಸುಧೀರ್‌ ರೆಡ್ಡಿ ನಡೆದುಕೊಂಡ ರೀತಿ, ಸಮಯೋಚಿತ ಕ್ರಮಗಳು ಮಾದರಿ ಎನಿಸಿಕೊಂಡಿದೆ. 

ಊಹಾಪೋಹಕ್ಕೆ ಅವಕಾಶ ನೀಡಿಲ್ಲ
ಮಾಹಿತಿ ಬಂದ ಕೂಡಲೇ ಸ್ಥಳಕ್ಕೆ ತೆರಳಿ ಬಿಗು ಬಂದೋಬಸ್ತಿಗೆ ಕ್ರಮ ಕೈಗೊಂಡಿದ್ದೇನೆ. ವಾಟ್ಸ್‌ಆ್ಯಪ್‌ಗ್ಳಲ್ಲಿ ನಾನಾ ತರಹದ ಸುದ್ದಿಗಳು ಅಥವಾ ತಪ್ಪು ಮಾಹಿತಿ ಬರತೊಡಗಿದಾಗ ವಾಸ್ತವ ವಿಚಾರವನ್ನು ನಮ್ಮ ಇಲಾಖೆಯ ಅಧಿಕೃತ ವಾಟ್ಸ್‌ ಆ್ಯಪ್‌ ಗ್ರೂಪ್‌ನಲ್ಲಿ ಹಾಕಿ ಸರಿಯಾದ ಮಾಹಿತಿಗಳನ್ನು ಮಾಧ್ಯಮದ ಮೂಲಕ ನೀಡುವ ಪ್ರಯತ್ನ ವನ್ನು ಮಾಡಿದ್ದೇನೆ. ಇದರಿಂದ ಯಾವುದೇ ಗೊಂದಲ ಅಥವಾ ಊಹಾಪೋಹ ಹರಡುವುದಕ್ಕೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಈಗ ಕಲ್ಲಡ್ಕದ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದಿದೆ.
ಸುಧೀರ್‌ ಕುಮಾರ್‌ ರೆಡ್ಡಿ , ದ.ಕ. ಜಿಲ್ಲಾ ಪೊಲೀಸ್‌ ಅಧೀಕ್ಷಕರು

Advertisement

Udayavani is now on Telegram. Click here to join our channel and stay updated with the latest news.

Next