Advertisement

ವಿದ್ಯಾರ್ಥಿಗಳಿಂದ ಆಕರ್ಷಕ ಪ್ರತಿಭಾ ಪ್ರದರ್ಶನ

01:50 AM Dec 11, 2018 | Karthik A |

ಬಂಟ್ವಾಳ: ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಕ್ರೀಡೋತ್ಸವ ಡಿ. 9ರಂದು ರಾತ್ರಿ ಸಂಪನ್ನಗೊಂಡಿತು. ಕ್ರೀಡೋತ್ಸವದಲ್ಲಿ 3,316ಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರತಿಭಾ ಪ್ರದರ್ಶನ ನೀಡಿದರು. ಪೋಕ್ರಾನ್‌ ಅಣು ಪರೀಕ್ಷೆ, ಸಂಸತ್ತಿನಲ್ಲಿ ವಾಜಪೇಯಿ ಭಾಷಣ, ಕೇರಳ ಸರಕಾರ ಮತ್ತು ಅಯ್ಯಪ್ಪ ಭಕ್ತರ ನಡುವಿನ ಸಂಘರ್ಷ ಮತ್ತು ಸರದಾರ್‌ ವಲ್ಲಭಭಾಯಿ ಪಟೇಲ್‌ ಸ್ಮರಣಿಯ ಸನ್ನಿವೇಶಗಳು ಪ್ರಸ್ತುತಗೊಂಡವು. ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ಸಹಿತ ಹಲವು ಅತಿಥಿಗಳ ಸಮಕ್ಷಮ ಕಲ್ಲಡ್ಕ ಡಾ| ಪ್ರಭಾಕರ ಭಟ್‌ ನಿರ್ದೇಶನದಲ್ಲಿ, ಸಂಚಾಲಕ ವಸಂತ ಮಾಧವ, ಅಧ್ಯಕ್ಷ ನಾರಾಯಣ ಸೋಮಾಯಾಜಿ, ಸಹ ಸಂಚಾಲಕ ರಮೇಶ್‌ ಮಾರ್ಗದರ್ಶನದಲ್ಲಿ ಸುಮಾರು 19ಕ್ಕೂ ಅಧಿಕ ಬಗೆಯ ವಿವಿಧ ಕಸರತ್ತು ವಿದ್ಯಾರ್ಥಿಗಳು ಪ್ರದರ್ಶಿಸಿದರು.

Advertisement

ಕಾಲೇಜು ವಿದ್ಯಾರ್ಥಿಗಳು ನೀಲಿ, ಕೆಂಪು ಬೆಳಕಿನ ಎಲ್‌ಇಡಿ ದಂಡ ಗಳೊಂದಿಗೆ ಪ್ರದರ್ಶನ, ಕನ್ನಡ, ತುಳು, ಹಿಂದಿ, ಭಾಷಾ ಭಜನೆಗೆ ನೃತ್ಯ, ಮಲ್ಲಕಂಬ ಪ್ರದರ್ಶನ, ಬಾಟಲಿಗಳ ಮೇಲೆ ಜೋಡಿಸಿದ ತಿರುಗುವ ಮಲ್ಲಕಂಬಗಳಲ್ಲಿ ವಿಶೇಷ ಯೋಗಾಸನ ಪ್ರದರ್ಶನ, ಘೋಷ್‌ ಟಿಕ್‌ ಟಿಕ್‌ ಪ್ರದರ್ಶನ, ಕಾಲೇಜು ವಿದ್ಯಾರ್ಥಿಗಳಿಂದ ಜಾತ್ರೆ ವೈಭವ ಪ್ರದರ್ಶನ, ದ್ವಿಚಕ್ರ, ಏಕಚಕ್ರ ವಾಹನಗಳ ಕಸರತ್ತು, ಬೈಕ್‌ಗಳಲ್ಲಿ ಸಾಹಸಮಯ ಸವಾರಿ, ಬೆಂಚಿನ ಮೇಲೆ ಏಕಚಕ್ರದಲ್ಲಿ ಸವಾರಿ, ಬಾಲಕಿಯರು ಟ್ಯೂಬ್‌ ಲೈಟ್‌ ಒಡೆಯುವ ಸನ್ನಿವೇಶ ರೋಮಾಂಚನಕಾರಿಯಾಗಿದ್ದವು. ಬೆಂಕಿ ಚಕ್ರದೊಳಗೆ ಧುಮುಕುವ ಸನ್ನಿವೇಶ, ಕೇರಳದ ಚೆಂಡೆ ವಾದನ, ಚಕ್ರ ತಾಳ ಮೆರುಗು, ಕಾಲ್ಚಕ್ರ ಪ್ರದರ್ಶನ, ಕೂಪಿಕಾ ಸಮತೋಲನ ಏಕಾಗ್ರತೆಗೆ ನಿದರ್ಶನ ನೀಡಿದವು. ಪ್ರೌಢಶಾಲೆಯ 935 ವಿದ್ಯಾರ್ಥಿಗಳು ಮೈದಾನದ ಹೊನಲು ಬೆಳಕಿನಲ್ಲಿ ಲಯಬದ್ಧವಾಗಿ ಕುಣಿದು ನಿರ್ಮಿಸುವ ರಂಗೋಲಿ ಚಿತ್ತಾರ, ಸಾಲುಸಾಲಾಗಿ ಕುಳಿತು ಮಾಡುವ ಸಾಮೂಹಿಕ ರಚನೆಗಳು ಗಮನ ಸೆಳೆದವು.


ಪಥಸಂಚಲನ, ನೃತ್ಯ ವೈಭವ

ಸಮವಸ್ತ್ರಧಾರಿ ಕಾಲೇಜು ವಿದ್ಯಾರ್ಥಿಗಳು ಘೋಷ್‌ ತಾಳಕ್ಕೆ ಸರಿಯಾಗಿ ಹೆಜ್ಜೆ ಹಾಕಿ ಆಕರ್ಷಕವಾಗಿ ಪಥಸಂಚಲನ ನಡೆಸಿದರು. ಶ್ರೀರಾಮ ಶಿಶು ಮಂದಿರ ವಿದ್ಯಾರ್ಥಿಗಳಿಂದ ಆಕರ್ಷಕ ನೃತ್ಯ, ಸಂಸ್ಥೆಯ ಬಾಲಕ, ಬಾಲಕಿಯರಿಂದ ಘೋಷ್‌ ಪ್ರದರ್ಶನ ನಡೆಯಿತು. ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ಜಡೆ ಕೋಲಾಟ ವಿಶೇಷ ನೃತ್ಯ ವೈಭವವಿತ್ತು. ಭಾರತೀಯ ನಿಶ್ಯಸ್ತ್ರ ಯುದ್ಧ ಕಲೆ, ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ಹೋರಾಟದ ಮನೋಭಾವ ಬೆಳೆಸುವ ನಿಯುದ್ಧ, ವಿದ್ಯಾರ್ಥಿನಿಯರಿಂದ ಕರಾಟೆ ಪ್ರಯೋಗ ಆಕರ್ಷಣೀಯವಾಗಿತ್ತು. ಯೋಗಾಸನ, ರಥ, ಶಿವಲಿಂಗ, ತಾವರೆ, ರಚನೆಗಳೊಂದಿಗೆ ಪ್ರಾಥಮಿಕ ವಿದ್ಯಾರ್ಥಿಗಳಿಂದ ವಿಶೇಷ ಪ್ರದರ್ಶನ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next