Advertisement

ಕಲ್ಲಡ್ಕ ಭಟ್‌ಗೆ ಫೇಸ್‌ಬುಕ್‌ನಲ್ಲಿ ಜೀವ ಬೆದರಿಕೆ

04:00 AM Jul 08, 2017 | Team Udayavani |

ಮಂಗಳೂರು: ಆರ್‌ಎಸ್‌ಎಸ್‌ ಹಿರಿಯ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ ಅವರಿಗೆ ಸಾಮಾಜಿಕ ಜಾಲ ತಾಣದ ಮೂಲಕ ಜೀವ ಬೆದರಿಕೆ ಬಂದಿದೆ. ‘ಮ್ಯಾಂಗಳೂರು ಮುಸ್ಲಿಮ್ಸ್‌’ ಎಂಬ ಹೆಸರಿನ ಫೇಸ್‌ಬುಕ್‌ ಪೇಜ್‌ನಲ್ಲಿ ಶುಕ್ರವಾರ ಸಂಜೆ ವೇಳೆಗೆ ಈ ರೀತಿಯ ಪ್ರಚೋದನಕಾರಿ ಪೋಸ್ಟ್‌ ಹಾಕಲಾಗಿತ್ತು. ಮಾಧ್ಯಮದಲ್ಲಿ ದೊಡ್ಡ ಸುದ್ದಿಯಾಗುತ್ತಿದ್ದಂತೆ ಫೇಸ್‌ಬುಕ್‌ ಪೇಜ್‌ನ ಗೋಡೆಯಿಂದ ಜೀವ ಬೆದರಿಕೆಯ ಆ ಪೋಸ್ಟ್‌ ಅನ್ನು ಡಿಲೀಟ್‌ ಮಾಡಲಾಗಿದೆ.

Advertisement

ಫೇಸ್‌ಬುಕ್‌ನಲ್ಲಿ ಹಾಕಿದ್ದ ಆ ಪೋಸ್ಟ್‌ನಲ್ಲಿ ‘ಭಯೋತ್ಪಾದಕ ಕಲ್ಲಡ್ಕ ಪ್ರಭಾಕರ ಭಟ್ಟ ಸತ್ತರೆ ಅವನಿಗೆ ರಾಷ್ಟ್ರಧ್ವಜ ಹಾಕಿ ಗೌರವಿಸುತ್ತೀರೋ ಇಲ್ಲಾ  ಕೇಸರಿ ಧ್ವಜ ಹಾಕುತ್ತಿರೋ? ಇವತ್ತು ಅವನ ಕೊನೆಯ ದಿನ.. ತೀರ್ಮಾನಿಸಿ’ ಎಂಬುದಾಗಿ ಬರೆಯಲಾಗಿತ್ತು.

ಆ ಪೋಸ್ಟ್‌ ಬಳಿಕ, ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿದ್ದ ಆರ್‌ಎಸ್‌ಎಸ್‌ ಮುಖಂಡ ಶರತ್‌ ಸಾವಿನ ಸುದ್ದಿ ಘೋಷಣೆ ಯಾಗು ತ್ತಿದ್ದಂತೆ ಅದೇ ಮ್ಯಾಂಗಳೂರು ಮುಸ್ಲಿಮ್ಸ್‌ ಪೇಜ್‌ ನಲ್ಲಿ ಮತ್ತೆ ‘ಏ.ಜೆ. ಆಸ್ಪತ್ರೆಯಲ್ಲಿ ಒಂದು ವಿಕೆಟ್‌ ಪತನ. ಇನ್ನು ಕಲ್ಲಡ್ಕದಲ್ಲಿ ಯಾವಾಗ?’ ಎನ್ನುವ ಮತ್ತೂಂದು ಪ್ರಚೋದನಕಾರಿ ಪೋಸ್ಟ್‌ ಕೂಡ ಅಪ್‌ಲೋಡ್‌ ಮಾಡಲಾಗಿತ್ತು. ಕೆಲವರಿಂದ ಅದಕ್ಕೆ ವಿರೋಧ ವ್ಯಕ್ತವಾಗುತ್ತಿದ್ದಂತೆ ಕೂಡಲೇ ಆ ಪೋಸ್ಟ್‌ ಕೂಡ ಡಿಲೀಟ್‌ ಆಗಿದೆ. 

ಆದರೆ ಜಿಲ್ಲೆಯಲ್ಲಿ ಉಂಟಾಗಿರುವ ಕೋಮು ಸಂಘರ್ಷಕ್ಕೆ ಸಂಬಂಧಿಸಿದಂತೆ, ಕಳೆದ ಕೆಲವು ವಾರಗಳಿಂದ ಮ್ಯಾಂಗಳೂರು ಮುಸ್ಲಿಮ್ಸ್‌ ಪೇಜ್‌ನಲ್ಲಿ ಇನ್ನೊಂದು ಕೋಮಿನವರನ್ನು ಕೆರಳಿಸುವ ಇದೇ ರೀತಿಯ ಪೋಸ್ಟ್‌ಗಳನ್ನು ನಿರಂತರವಾಗಿ ಹಾಕಲಾಗುತ್ತಿದೆ. ಇಂಥ ಶಾಂತಿ ಕದಡುವ ಹೇಳಿಕೆಗಳನ್ನು ಹಾಕುತ್ತಿದ್ದರೂ ಪೊಲೀಸರು ಮಾತ್ರ ಕಣ್ಣು ಮುಚ್ಚಿ ಕುಳಿತಿರುವುದು ವಿಪರ್ಯಾಸ.


ಸಾವು ದೇವರ ನಿರ್ಣಯ: ಭಟ್‌

ಈ ನಡುವೆ ಜೀವ ಬೆದರಿಕೆ ಹಾಕಿರುವ ಬಗ್ಗೆ ‘ಉದಯವಾಣಿ’ಗೆ ಪ್ರತಿಕ್ರಿಯಿಸಿದ ಕಲ್ಲಡ್ಕ ಪ್ರಭಾಕರ ಭಟ್‌ ‘ನನ್ನ ಸಾವು ದೇವರಿಂದ ಮಾತ್ರ ತೀರ್ಮಾನಿಸಲು ಸಾಧ್ಯವೇ ಹೊರತು ಬೇರೆ ಯಾರಿಂದಲೂ ಆಗುವುದಿಲ್ಲ. ನಾವೆಲ್ಲ ಸಮಾಜವನ್ನು ಕಟ್ಟುವ ಕೆಲಸ ಮಾಡಲು ಬಂದವರು. ಇನ್ನು, ಭಯೋತ್ಪಾದಕರು ಯಾರು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಹೀಗಾಗಿ, ನಾವು ಎಷ್ಟು ದಿನ ಬದುಕಬೇಕು ಎಂಬುದನ್ನು ಆ ದೇವರು ನಿರ್ಧರಿಸುತ್ತಾನೆಯೇ ಹೊರತು ಈ ರೀತಿ ಹೇಳಿಕೆ ಹಾಕುವ ವ್ಯಕ್ತಿಗಳು ಅಲ್ಲ’ ಎಂದು ಹೇಳಿದ್ದಾರೆ. ‘ಇನ್ನು ಇಂಥ ಬೆದರಿಕೆಗಳಿಗೆ ಹೆೆದರುವ ವ್ಯಕ್ತಿ ನಾನಲ್ಲ. ಜತೆಗೆ, ನನ್ನಂಥವನಿಗೆ ಇದೇನು ಹೊಸದಲ್ಲ. ಯಾರಾದರೂ ನನ್ನನ್ನು ಕೊಲ್ಲಲು ಬಂದರೆ ನಾವೇನು ಕೈಕಟ್ಟಿ ಕುಳಿತುಕೊಂಡಿಲ್ಲ. ಫೇಸ್‌ಬುಕ್‌ ಮೂಲಕ ಈ ರೀತಿಯ ಪ್ರಚೋದನಕಾರಿ ಹೇಳಿಕೆಗಳನ್ನು ಹಾಕುತ್ತಿರುವ ವ್ಯಕ್ತಿಗಳ ವಿರುದ್ಧ ಪೊಲೀಸರು ತತ್‌ಕ್ಷಣ ಸೂಕ್ತ ಕ್ರಮ ತೆಗೆದು ಕೊಳ್ಳಬೇಕು’ ಎಂದು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next