ಹೈದರಾಬಾದ್: ನಾಗ್ ಅಶ್ವಿನ್ (Nag Ashwin) ನಿರ್ದೇಶನದ ಪ್ಯಾನ್ ಇಂಡಿಯಾ ʼಕಲ್ಕಿ 2898ಎಡಿ’ (Kalki 2898 AD) ವಿಶ್ವದಾದ್ಯಂತ ಭರ್ಜರಿ ಸದ್ದು ಮಾಡಿದೆ. ದೊಡ್ಡ ಬಜೆಟ್ ನಲ್ಲಿ ನಿರ್ಮಾಣವಾದ ಈ ಸಿನಿಮಾದ ಗಳಿಕೆಯೂ ದಿನಕಳೆದಂತೆ ಹೆಚ್ಚಾಗುತ್ತಿದೆ.
ಈಗಾಗಲೇ ಹಲವು ದಾಖಲೆಗಳನ್ನು ಮುರಿದಿರುವ ಪ್ರಭಾಸ್ (Prabhas)ʼಕಲ್ಕಿʼ ಈಗ ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಗಳಿಸುವ ಮೂಲಕ ಸುದ್ದಿಯಾಗಿದೆ. ರಿಲೀಸ್ ಆದ ನಾಲ್ಕೇ ದಿನದಲ್ಲಿ ಸಿನಿಮಾ ಬೆಚ್ಚಿಬೀಳಿಸುವಂತಹ ಕಮಾಯಿ ಮಾಡಿದೆ.
ಮಹಾಭಾರತ ಹಾಗೂ ಸೈನ್ಸ್ ಫೀಕ್ಷನ್ ಅಂಶಗಳನ್ನುಒಳಗೊಂಡಿರುವ ಚಿತ್ರದಲ್ಲಿ ಅದ್ಧೂರಿ ಎಎಫ್ ಎಕ್ಸ್ ಹಾಗೂ ಕಲಾವಿದರ ಅಭಿನಯ ಕಮಾಲ್ ಮಾಡಿದೆ. ಭಾರತದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿ ʼಕಲ್ಕಿʼ ಅವತಾರವನ್ನು ನೋಡಿ ಪ್ರೇಕ್ಷಕರು ಫಿದಾ ಆಗಿದ್ದಾರೆ.
ಜೂ.27 ರಂದು ಚಿತ್ರ ತೆರೆಕಂಡಿತು. ಇದೀಗ ರಿಲೀಸ್ ಆಗಿ ನಾಲ್ಕೇ ದಿನದಲ್ಲಿ 500 ಕೋಟಿ ಗಳಿಕೆ ಕಾಣುವ ಮೂಲಕ ಭರ್ಜರಿಯಾಗಿ ಸದ್ದು ಮಾಡಿದೆ. ಚಿತ್ರದ ಗಳಿಕೆ ಬಗ್ಗೆ ನಿರ್ಮಾಣ ಸಂಸ್ಥೆ ವೈಜಯಂತಿ ಮೂವೀಸ್ ʼಎಕ್ಸ್ʼನಲ್ಲಿ ಟ್ವೀಟ್ ಮಾಡಿ ಮಾಹಿತಿ ನೀಡಿದೆ.
ಭಾರತದಲ್ಲಿ 300 ಕೋಟಿ ಗಳಿಕೆ ಕಾಣುವುದರ ಜೊತೆಗೆ ಉತ್ತರ ಅಮೆರಿಕಾದ ಗಲ್ಲಾಪೆಟ್ಟಿಗೆಯಲ್ಲಿ $10.5 ಮಿಲಿಯನ್ (ಅಂದಾಜು 87 ಕೋಟಿ ರೂ.) ಗಳಿಕೆ ಕಂಡಿದೆ. ಆ ಮೂಲಕ ವಿದೇಶದಲ್ಲಿ ಆರಂಭಿಕ ವಾರಾಂತ್ಯದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಲನಚಿತ್ರವಾಗಿ ʼಕಲ್ಕಿʼ ಹೊರಹೊಮ್ಮಿದೆ.
ಭಾನುವಾರ(ಜೂ.30 ರಂದು) ʼಕಲ್ಕಿʼ ಭಾರತದಲ್ಲಿ 85 ಕೋಟಿ ರೂ.ಗಳಿಸಿದೆ. ಚಿತ್ರದ ತೆಲುಗು ವರ್ಷನ್ 36.8 ಕೋಟಿ ಗಳಿಸಿದ್ದರೆ, ಹಿಂದಿ ವರ್ಷ ಭಾನುವಾರ 39 ಕೋಟಿ ಗಳಿಸಿದೆ ಎಂದು ವರದಿ ತಿಳಿಸಿದೆ.
ಸುಮಾರು 600 ಕೋಟಿ ನಿರ್ಮಾಣವಾದ ʼಕಲ್ಕಿʼ 800 ಕೋಟಿಗೂ ಹೆಚ್ಚಿನ ಲೈಫ್ ಟೈಮ್ ಬ್ಯುಸಿನೆಸ್ ಮಾಡುವ ಸಾಧ್ಯತೆಯಿದೆ ಎನ್ನುವುದು ವ್ಯಾಪಾರ ತಜ್ಞರ ಊಹೆ.
ಚಿತ್ರದಲ್ಲಿ ಪ್ರಭಾಸ್, ಅಮಿತಾಭ್ ಬಚ್ಚನ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್, ದಿಶಾ ಪಟಾನಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ದುಲ್ಕರ್ ಸಲ್ಮಾನ್, ವಿಜಯ್ ದೇವರಕೊಂಡ ಮತ್ತು ಮೃಣಾಲ್ ಠಾಕೂರ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.