ಕೆ.ಆರ್.ಪುರ: ಬೆಂಗಳೂರಿನ ದೊಡ್ಡ ಕೆರೆಗಳಲ್ಲಿ ಒಂದಾದ ಕಲ್ಕೆರೆ ಕೆರೆ ಬಿಬಿಎಂಪಿ ಕಾಯಕಲ್ಪದಿಂದ ನಳನಳಿಸುತ್ತಿದ್ದು, ಲಕ್ಷಾಂತರ ಜಲಚರಗಳು, ಪಕ್ಷಿಗಳು ಸೇರಿದಂತೆ ಜೀವಸಂಕುಲಕ್ಕೆ ಆಸರೆಯಾಗಿದೆ. ಶುದ್ಧ ನೀರಿನಿಂದ ಕಂಗೊಳಿಸುತ್ತಿರುವ ಕೆರೆ ಪ್ರವಾಸಿಗರ ನೆಚ್ಚಿನ ತಾಣವಾಗಿದೆ.
ಈ ಕೆರೆಯಲ್ಲಿ ಐದು ವರ್ಷದ ಹಿಂದೆ ಜಂಬುನಾರು , ಆಳೆತ್ತರದ ಗಿಡಗಂಟಿಗಳು ಬೆಳೆದು ಅವಸಾನದ ಅಂಚಿಗೆ ತಲುಪಿತ್ತು, ಹಾಗೂ ನಗರದ ಕೈಗಾರಿಕೆಗಳ ರಾಸಾಯನಿಕ ತ್ಯಾಜ್ಯಗಳು ಈ ಕೆರೆಗೆ ಸೇರಿ ನೀರು ಸಂಪೂರ್ಣ ಕಲುಷಿತಗೊಂಡಿತ್ತು. ಅಲ್ಲದೇ ಲಕ್ಷಾಂತರ ಜಲಚರಗಳುಸಾವಿಗೀಡಾಗಿದ್ದವು. ಆದರೆ, ಈಗ ಕೆರೆಯ ಪರಿಸ್ಥಿತಿಯೇ ಬೇರೆಯಾಗಿದೆ. ಕೆರೆ ಸಂಪೂರ್ಣಶುಚಿಯಾಗಿದ್ದು, ಸರೋವರದಂತೆಕಂಗೊಳಿಸುತ್ತಿದೆ. 180ಎಕರೆವಿಸ್ತೀರ್ಣಹೊಂದಿರುವಕಲ್ಕೆರೆಕೆರೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ಕೈಗೊಳ್ಳಲಾಗಿದೆ. ಈ ಕೆರೆಯ ಪುನಶ್ಚೇತನಕ್ಕೆ 22 ಕೋಟಿ ವೆಚ್ಚ ಮಾಡಲಾಗಿದೆ. ಮಕ್ಕಳ ಆಟಿಕೆ ಉಪಕರಣ ಹಾಗೂ ಬೋಟಿಂಗ್ ಸೌಲಭ್ಯ ಕಲ್ಪಿಸಿದರೆ ಪ್ರವಾಸಿ ತಾಣವಾಗಿ ಅಭಿವೃದ್ಧಿಗೊಳ್ಳುತ್ತದೆ.
ಸ್ಥಳೀಯರ ಹೋರಾಟದ ಫಲ: ಕ್ಯಾಲಸನಹಳ್ಳಿ, ಕಲ್ಕೆರೆ, ಬಿಳಿಶಿವಾಲೆ ರೈತರು ಈ ಕೆರೆಯ ನೀರನ್ನು ಕೃಷಿಗೆ ಬಳಸುತ್ತಿದ್ದರು. ಕುಡಿಯಲು ಸಹ ನೀರು ಯೋಗ್ಯವಾಗಿತ್ತು, ಆದರೆ ಬೆಂಗಳೂರು ವೇಗವಾಗಿ ಬೆಳದ ಪರಿಣಾಮ ಕೆರೆ ನಿರ್ವಹಣೆಯಿಲ್ಲದೆ ಹಾಳಾಗಿತ್ತು. ಸ್ಥಳೀಯರ ಹೋರಾಟ ಫಲವಾಗಿ ಐದು ವರ್ಷಗಳಿಂದ ಬಿಬಿಎಂಪಿ ಹಂತ ಹಂತವಾಗಿ ವಿವಿಧ ಅಭಿವೃದ್ಧಿ ಕಾಮಗಾರಿ ನಡೆಸಿದ್ದು. ಈಗ ಶುದ್ಧ ನೀರಿನಿಂದ ನಳನಳಿಸುತ್ತಿದೆ.
ಸುಂದರ ಉದ್ಯಾನವನ: ಕಲ್ಕೆರೆ ಮತ್ತು ಬಿಳೆಶಿವಾಲೆ ಕಡೆ ಕೆರೆಗೆ ಎರಡು ಮುಖ್ಯದ್ವಾರಗಳನ್ನು ನಿರ್ಮಿಸಲಾಗುತ್ತಿದೆ. ಕೆರೆ ಆವರಣದಲ್ಲಿ ಸುಂದರವಾದ ಉದ್ಯಾನವನ ನಿರ್ಮಿಸಲಾಗಿದೆ. ಹೂವು ,ಔಷಧೀಯ ಸಸಿಗಳನ್ನು ನೆಟ್ಟು ಬೆಳೆಸಲಾಗಿದೆ. ನಿತ್ಯ ಉದ್ಯಾನ ನಿರ್ವಹಣೆಗೆ ಸಿಬ್ಬಂದಿ ನಿಯೋಜಿಸಲಾಗಿದೆ. ಪುಂಡರ ನಿಗ್ರಹಕ್ಕೆ ಭದ್ರತಾ ಸಿಬ್ಬಂದಿಯನ್ನುನೇಮಿಸಲಾಗಿದೆ. ದಣಿದ ವಾಯುವಿಹಾರಿಗಳಿಗೆ,ನಡಿಗೆ ಪಥ, ಕಲ್ಲಿನ ಬೆಂಚುಗಳು, ಕಲ್ಲಿನ ವಿಶ್ರಾಂತಿ ತಾಣಗಳು ನಿರ್ಮಾಣವಾಗಿದೆ. ಹಸಿ, ಒಣಕಸ ಹಾಕಲು ಕಸದ ಬುಟ್ಟಿ ಅಳವಡಿಸಲಾಗಿದೆ. ಗಣೇಶ ಮೂರ್ತಿಗಳ ವಿಸರ್ಜನೆಗೆ ಕಲ್ಯಾಣನಿರ್ಮಿಸಲಾಗಿದೆ. ಹೆಬ್ಟಾಳ,ಆರ್ ಟಿ.ನಗರ, ನಾಗವಾರ ಕಡೆಯಿಂದ ಬರುವ ಕೊಳಚೆ ನೀರು ಸಂಸ್ಕರಿಸಲು ಎಸ್‌ಟಿಪಿ ನಿರ್ಮಾಣ ಮಾಡಲಾಗಿದೆ.
ವಿದೇಶಿ ಪಕ್ಷಿಗಳ ಗಮನ : ಕಲ್ಕೆರೆ ಕೆರೆಗೆ ಸಾವಿರಾರುಕಿಮೀ ದೂರದಿಂದ ವಿದೇಶಿ ಪಕ್ಷಿಗಳು ಸಂತಾನೋತ್ಪತ್ತಿಗೆ ಬರುತ್ತವೆ. ಕೆರೆಯ ಮಧ್ಯದಲ್ಲಿ ನಡುಗಡ್ಡೆಯನ್ನು ನಿರ್ಮಿಸಿದ್ದುಇದು ಪಕ್ಷಿಗಳ ಪ್ರತ್ಯೇಕತೆಗೆ ಅನುಕೂಲವಾಗಿದೆ. ಕೆರೆಯಲ್ಲಿ ಮೀನುಗಾರಿಕೆಯೂ ನಡೆಯುವುದ ರಿಂದ ಪಕ್ಷಿಗಳೂ ಮೀನನ್ನು ಆಹಾರವಾಗಿ ಬಳಸುತ್ತವೆ. ಅದಷ್ಟೂ ಬೇಗ ಬೋಟಿಂಗ್ ವ್ಯವಸ್ಥೆ ಕಲ್ಪಿಸಿದರೆ ನಗರವಾಸಿಗಳಿಗೆ ಪ್ರವಾಸಿ ತಾಣವಾಗಿ ಮಾರ್ಪಡುವುದರಲ್ಲಿ ಸಂದೇಹವಿಲ್ಲ ಎಂದು ಸ್ಥಳೀಯ ಸತೀಶ್ ತಿಳಿಸಿದರು.
ಕೆ.ಅರ್. ಪುರಕ್ಷೇತ್ರದಲ್ಲಿ ವ್ಯಾಪ್ತಿಯಲ್ಲಿ ಹದಿನಾಲ್ಕುಕೆರೆಗಳು ಬರುತ್ತವೆ, ಇನ್ನೂಕೆಲವು ಕೆರೆಗಳು ಅಭಿವೃದ್ಧಿಯಾಗಬೇಕಿದೆ,ಕಲ್ಕೆರೆಕೆರೆ ಬಳಿ ಎಸ್‌ಟಿಪಿಘಟಕ ಯಶಸ್ವಿಯಾಗಿರುವುದರಿಂದ ಕೆರೆ ನೀರು ಶುದ್ಧವಾಗಿದೆ. ಒಮ್ಮೆಕೆರೆಗೆ ಭೇಟಿ ನೀಡಿದಾಗ ಮತ್ತೆ ವಾಪಸ್ ಬರಲು ಮನಸ್ಸು ಬರುವುದಿಲ್ಲ
–ಬಾಲಾಜಿ ರಘೋತ್ತಮ, ಕೆರೆ ಹೋರಾಟಗಾರ
– ಕೆ.ಆರ್.ಗಿರೀಶ್