Advertisement

ಟೂಲ್‌ ಹಿಂದೆ ಖಲಿಸ್ಥಾನ : ಪಿಜೆಎಫ್ ಸ್ಥಾಪಕ ಧಾಲಿವಾಲ್‌ ಟೂಲ್‌ಕಿಟ್‌ ಸೃಷ್ಟಿಕರ್ತ

02:54 AM Feb 06, 2021 | Team Udayavani |

ಹೊಸದಿಲ್ಲಿ: ಸ್ವೀಡನ್‌ ಹೋರಾಟಗಾರ್ತಿ ಗ್ರೆಟಾ ಥನ್ ಬರ್ಗ್‌ ಟ್ವೀಟಿಸಿದ್ದ “ಟೂಲ್‌ ಕಿಟ್‌’ ದಿನದಿಂದ ದಿನಕ್ಕೆ ಸುಂಟರಗಾಳಿ ಎಬ್ಬಿಸುತ್ತಲೇ ಇದೆ. ಖಲಿಸ್ಥಾನ್‌ ಹೋರಾಟಗಾರನಾಗಿ ಗುರುತಿಸಿಕೊಂಡಿದ್ದ, ಕೆನಡಾದ ವಾಂಕೋವರ್‌ನ ಪೊಯೆಟಿಕ್‌ ಜಸ್ಟೀಸ್‌ ಫೌಂಡೇಶನ್‌ (ಪಿಜೆಎಫ್) ಸಂಸ್ಥಾಪಕ ಮೊಧಾಲಿ ವಾಲ್‌ ಎಂಬಾತನೇ ವಿವಾದಿತ ಟೂಲ್‌ಕಿಟ್‌ನ ಸೃಷ್ಟಿಕರ್ತ ಎಂದು ದಿಲ್ಲಿ ಪೊಲೀಸ್‌ ಶಂಕೆ ವ್ಯಕ್ತಪಡಿಸಿದೆ.

Advertisement

ರೈತ ಹೋರಾಟವನ್ನು ಬೆಂಬಲಿಸುತ್ತಲೇ, ಖಲಿಸ್ಥಾನ ಚಳವಳಿಗೆ ಮರುಕಿಚ್ಚು ಹಚ್ಚುವ ಸಂಚು ಈ ಟೂಲ್‌ ಕಿಟ್‌ನ ಹಿಂದಿದೆ ಎನ್ನಲಾಗುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಜ.26ರ ಗಲಭೆ ವೇಳೆ ಮೊಧಾಲಿ ವಾಲ್‌ ಮಾತನಾಡಿದ ವೀಡಿಯೋದತ್ತ ದಿಲ್ಲಿ ಪೊಲೀಸ್‌ ಬೆಟ್ಟು ಮಾಡಿದೆ.

ಪ್ರಚೋದಿತ ವೀಡಿಯೋ: ಒಂದು ವೇಳೆ ಕಾಯ್ದೆ ವಾಪಸಾದರೂ ಈ ಹೋರಾಟ ನಿಲ್ಲಿಸಬಾರದು. ಖಲಿಸ್ಥಾನ ಕೂಗಿಗೆ ರೈತ ಹೋರಾಟ ಖೋ ಕೊಡಬೇಕು ಎಂಬ ಧ್ವನಿ ಧಾಲಿವಾಲ್‌ ಮಾಡಿದ ಪ್ರಚೋದಿತ ವೀಡಿಯೋದಲ್ಲಿದೆ. “ಒಂದು ವೇಳೆ ನಾಳೆಯೇ ಕೃಷಿ ಕಾಯ್ದೆ ಹಿಂಪಡೆದರೂ ಅದು ಗೆಲುವಲ್ಲ. ಈ ಹೋರಾಟ ಆರಂಭಗೊಳ್ಳುವುದೇ ಕೃಷಿ ಕಾಯ್ದೆ ರದ್ದತಿಯಿಂದ. ಬಿಲ್‌ ವಾಪಸಾತಿ ಮೂಲಕ ಸರಕಾರ ಈ ಹೋರಾಟದ ಶಕ್ತಿಯನ್ನೇ ನಿರ್ನಾಮಗೊಳಿಸಬಹುದು’ ಎಂದು ವೀಡಿಯೋದಲ್ಲಿ ಧಾಲಿವಾಲ್‌ ಹೇಳಿದ್ದಾನೆ.

“ಕೇಂದ್ರ ಸರಕಾರ ನಿಮಗೆ ಪಂಜಾಬ್‌ನಿಂದ, ಖಲಿಸ್ಥಾನ್‌ ಹೋರಾಟದಿಂದ ಪ್ರತ್ಯೇಕವಾದವರು ಎಂದು ಹೇಳಲೆತ್ನಿಸಬಹುದು. ಆದರೂ ನೀವು ಖಲಿಸ್ಥಾನದಿಂದ ಪ್ರತ್ಯೇಕಿತರಲ್ಲ. ಈ ಕಾರಣಕ್ಕಾಗಿಯೇ ಖಲಿಸ್ಥಾನಿಗಳು ರೈತ ಹೋರಾಟವನ್ನು ಉತ್ಸಾಹದ ಕಂಗಳಿಂದ ನೋಡುತ್ತಿದ್ದಾರೆ. 1970ರ ಅನಂತರ ಅವರು ಕಂಡ ಕನಸು ವಾಸ್ತವಗೊಳ್ಳುತ್ತಿದೆ. ಖಲಿಸ್ಥಾನಿಗಳು ಸ್ವತಂತ್ರ ನೆಲ ಬಯಸುತ್ತಿದ್ದಾರೆ’ ಎಂದಿದ್ದಾನೆ.

“ನಿಮ್ಮೆಲ್ಲರಲ್ಲೂ ನನ್ನದೊಂದು ಮನವಿ… ದಯವಿಟ್ಟು ನೀವು ಪರಸ್ಪರ ಕಂಗಳನ್ನು, ಹೃದಯಗಳನ್ನು ಮುಚ್ಚಿಕೊಳ್ಳಬೇಡಿ. ಇಲ್ಲಿ ಯಾರೂ ಉಗ್ರಗಾಮಿಗಳಾಗಲು ಬಯಸುತ್ತಿಲ್ಲ. ಸರಕಾರ ನಮ್ಮನ್ನು ಪರಸ್ಪರ ಪ್ರತ್ಯೇಕಗೊಳಿಸಲು ಯತ್ನಿಸುತ್ತಿದೆ… ನಾವು ಪಂಜಾಬ್ನ ಸ್ವಾತಂತ್ರ್ಯಕ್ಕಾಗಿ ಮತ್ತು ಪಾವಿತ್ರ್ಯಕ್ಕಾಗಿ ಇಲ್ಲಿದ್ದೇವೆ’ ಎಂದು ಹೇಳಿದ್ದಾನೆ.

Advertisement

ರೈತ ಹೋರಾಟಕ್ಕೆ ತುಪ್ಪ ಸುರಿದ ಈ ವೀಡಿಯೋವನ್ನು ಜ.26ರ ಗಲಭೆಯಂದು ಕೆಂಪುಕೋಟೆ ಹೊರಭಾಗ ಚಿತ್ರೀಕರಿಸಿರುವುದಾಗಿ ದಿಲ್ಲಿ ಪೊಲೀಸ್‌ ಖಚಿತಪಡಿಸಿದೆ. ಧಾಲಿವಾಲ್‌ ವಿರುದ್ಧ ತನಿಖೆಗೆ ಸಹಕರಿಸುವಂತೆ ಕೇಂದ್ರ ಸರಕಾರ, ಕೆನಡಾವನ್ನು ಕೋರಿದೆ.

ಈ ಮೊದಲು ದಿಲ್ಲಿ ಪೊಲೀಸ್‌, ಖಲಿಸ್ಥಾನ ಹೋರಾಟ ಬೆಂಬಲಿಸುವ 300 ಪಾಕ್‌ ವ್ಯಕ್ತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರತದ ಏಕತೆಗೆ ಮಸಿ ಬಳಿಯಲು ಪಿತೂರಿ ರೂಪಿಸಿದ್ದಾರೆ ಎಂದು ಖಚಿತವಾಗಿ ಹೇಳಿತ್ತು.

ಕಿಡಿಗೇಡಿಗಳ ಗುರುತು ಪತ್ತೆ: ಜ.26ರ ದಾಂಧಲೆ ವೇಳೆ ಹಿಂಸಾಚಾರಕ್ಕೆ ಕಾರಣಕರ್ತರಾದ, ಕೆಂಪುಕೋಟೆ ನುಗ್ಗಿ ಅನ್ಯ ಧ್ವಜ ಹಾರಿಸಿದ ಕಿಡಿಗೇಡಿಗಳ ಮುಖಗುರುತುಗಳನ್ನು ದಿಲ್ಲಿ ಪೊಲೀಸ್‌ ಕ್ರೈಂ ಬ್ರ್ಯಾಂಚ್‌ ಪತ್ತೆ ಹಚ್ಚಿದೆ. ಇದಕ್ಕಾಗಿ ಸಾವಿರಕ್ಕೂ ಅಧಿಕ ವೀಡಿಯೋ, ಫೋಟೋಗಳನ್ನು ಪೊಲೀಸರು ಅಧ್ಯಯನ ನಡೆಸಿದ್ದಾರೆ.

ರಿಹಾನ್ನಾಗೆ 100 ಕೋಟಿ ರೂ. ದಂಡ ವಿಧಿಸಿ: ಕಂಗನಾ
ಟಾಪ್‌ ಪಾಪ್‌ ತಾರೆ ರಿಹಾನ್ನಾ ಫೋರ್ಬ್ಸ್ ಪ್ರಕಾರ 4,300 ಕೋಟಿ ರೂ. ಸಂಪತ್ತು ಹೊಂದಿದ್ದಾಳೆ. ಆಕೆಯ ಟ್ವೀಟ್‌ನಿಂದ ಭಾರೀ ಅನಾಹುತಗಳೇ ಆಗುತ್ತಿವೆ. ಹೀಗಾಗಿ ಆಕೆಗೆ ಕನಿಷ್ಠ 100 ಕೋಟಿ ರೂ. ದಂಡ ವಿಧಿಸಬೇಕು ಎಂದು ಟಿವಿ ಸಂದರ್ಶನವೊಂದರಲ್ಲಿ ಬಾಲಿವುಡ್‌ ನಟಿ ಕಂಗನಾ ರಣಾವತ್‌ ಹೇಳಿದ್ದಾರೆ. ಇನ್ನೊಂದೆಡೆ ರೈತ  ಪ್ರತಿಭಟನೆ ಕುರಿತು ನಿಮ್ಮ ನಿಲುವೇನು ಎಂಬ ಮಾಧ್ಯಮದವರ ಪ್ರಶ್ನೆಗೆ ನಟ ಸಲ್ಮಾನ್‌ ಖಾನ್‌ “ಸರಿಯಾದ ಕೆಲಸ ಮಾಡಬೇಕು. ಅತ್ಯಂತ ಸರಿಯಾದ ಕೆಲಸ ಮಾಡಬೇಕು. ಅತ್ಯಂತ ಉದಾತ್ತ ಕೆಲಸವನ್ನು ಮಾಡಬೇಕು ಎಂದಷ್ಟೇ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next