ಬೈಂದೂರು: ಶಿರೂರು ಗ್ರಾಮದ ಕಳಿಹಿತ್ಲು ಕಡಲ ಕಿನಾರೆ ಬಳಿ ಕಸದ ಕೊಂಪೆಯಾಗಿ ಮಾರ್ಪಟ್ಟಿದೆ. ಶಿರೂರಿನ ವಿವಿಧ ಕಡೆಗಳಿಂದ ಸಾರ್ವಜನಿಕರು ಕಸದ ತೊಟ್ಟೆಗಳನ್ನು ತಂದು ಈ ಭಾಗದಲ್ಲಿ ಎಸೆಯುವುದರಿಂದ ದುರ್ನಾತ ಬೀರುತ್ತಿದೆ. ಶಿರೂರು ಗ್ರಾಮದ ಮುಸ್ಲಿಂ ಕೇರಿ ಮಾರ್ಗವಾಗಿ ಸಮುದ್ರ ಕಿನಾರೆ ಬದಿಯಲ್ಲಿನ ರಸ್ತೆ ಶಿರೂರು ಗ್ರಾಮದ ಕಳಿಹಿತ್ಲು ಭಾಗಕ್ಕೆ ಸಂಪರ್ಕ ಕಲ್ಪಿಸುತ್ತದೆ. ಕಳಿಹಿತ್ಲು ಮೀನುಗಾರಿಕಾ ಬಂದರು ಸೇರಿದಂತೆ ನೈಸರ್ಗಿಕ ಸೌಂದರ್ಯ ಹೊಂದಿದ್ದು ಈ ಭಾಗಕ್ಕೆ ನಿತ್ಯ ನೂರಾರು ಜನ ಆಗಮಿಸುತ್ತಾರೆ. ಹಗಲುವೇಳೆ ಜನಸಂಚಾರ ಕಡಿಮೆ ಇರುವ ಕಾರಣ ಸಾರ್ವಜನಿಕರು ಕಸದ ಮೂಟೆಗಳನ್ನು ತಂದು ಎಸೆಯುತ್ತಿದ್ದಾರೆ.ಇದರಿಂದ ಸ್ಥಳೀಯ ಮನೆಗಳಿಗೂ ಕೂಡ ವಾಸನೆಯಿಂದ ಕಂಗೆಟ್ಟು ಹೋಗುವಂತಾಗಿದೆ.
ಶಿರೂರು ಗ್ರಾಮ ಪಂಚಾಯತ್ ಕ್ರಮಕೈಗೊಳ್ಳಲಿ
ಈಗಾಗಲೇ ಶಿರೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಎರಡು ಕಸ ಸಂಗ್ರಹಿಸುವ ವಾಹನಗಳಿದ್ದು ಇನ್ನೊಂದು ವಾಹನ ಕೂಡ ದಾನಿಗಳ ನೆರವಿನಿಂದ ದೊರೆಯ ಲಿದೆ. ಈಗಾಗಲೇ ಪ್ರತೀ ಮನೆಗಳಿಂದ ಕಸಗಳನ್ನು ಸಂಗ್ರಹಿಸಲಾಗುತ್ತಿದೆ. ಆದರೆ ಸಾರ್ವಜನಿಕರ ಈ ನಿರ್ಲಕ್ಷ್ಯ ಊರಿನ ಸ್ವತ್ಛತೆಯನ್ನು ಹಾಳು ಮಾಡುತ್ತಿದ್ದಾರೆ. ಹೀಗಾಗಿ ಸ್ಥಳೀಯ ಗ್ರಾಮ ಪಂಚಾಯತ್ ಈ ಬಗ್ಗೆ ಕಸ ಎಸೆಯುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕಿದೆ. ಸಾಂಕ್ರಾಮಿಕ ರೋಗಗಳು ಹರಡುವ ಈ ಹಂತದಲ್ಲಿ ಜಿಲ್ಲಾಡಳಿತ ಸ್ವಚ್ಛತೆ ಬಗ್ಗೆ ವಿಶೇಷ ಗಮನಹರಿಸಿದ್ದು ಸಾರ್ವಜನಿಕರ ನಿರ್ಲಕ್ಷ್ಯದ ವಿರುದ್ಧ ಕ್ರಮಕೈಗೊಂಡು ಕಳಿಹಿತ್ಲು ಕಡಲ ಕಿನಾರೆಯನ್ನು ಸ್ವತ್ಛವಾಗಿಡಬೇಕಾಗಿದೆ.