Advertisement

ಕಾಯಕಲ್ಪ ಕಾಣಬೇಕಿದೆ ಕಳಿಹಿತ್ಲು ಬೀಚ್‌

01:29 AM Jan 31, 2022 | Team Udayavani |

ಬೈಂದೂರು: ಜಿಲ್ಲೆಯ ನೈಸರ್ಗಿಕ ಸೌಂದರ್ಯ ಹೊಂದಿರುವ ಪ್ರದೇಶಗಳ ಪಟ್ಟಿಯಲ್ಲಿ ಅಗ್ರಗಣ್ಯವಾದ ಹೆಗ್ಗಳಿಕೆ ಇರುವುದು ಬೈಂದೂರು ಕ್ಷೇತ್ರದ್ದಾಗಿದೆ. ಐತಿಹಾಸಿಕ, ಪೌರಾಣಿಕ ಹಿನ್ನೆಲೆಗಳ ಜತೆ ಪ್ರವಾಸಿಗರನ್ನು ಕೈಬೀಸಿ ಕರೆಯುವ ಸುಂದರ ಸ್ಥಳಗಳು ಇಲಾಖೆಯ ಮಾನ್ಯತೆಗಾಗಿ ಕಾದಿರುವುದು ಮಾತ್ರ ಈ ಕ್ಷೇತ್ರದ ದೌರ್ಭಾಗ್ಯವಾಗಿದೆ. ಬೈಂದೂರು ತಾಲೂಕಿನ ಶಿರೂರು ಗ್ರಾಮದ ಕಳಿಹಿತ್ಲು ಬೀಚ್‌ ಕಾಯಕಲ್ಪ ಕಾಣುವ ಜತೆಗೆ ಅಭಿವೃದ್ದಿಪಡಿಸುವ ಮೂಲಕ ಪ್ರವಾಸಿಗರನ್ನು ಸೆಳೆಯುವ ಕಾರ್ಯಕ್ಕೆ ಇನ್ನಷ್ಟೇ ಇಲಾಖೆ ಮುಂದಾಗಬೇಕಾಗಿದೆ.

Advertisement

ಶಿರೂರು ಕರಾವಳಿ ಮತ್ತು ಪೇಟೆ ರಸ್ತೆ ಸಂಪರ್ಕದ ರಸ್ತೆಯ ಮೂಲಕ ಅನತಿ ದೂರ ಸಾಗಿದರೆ ಕಳುಹಿತ್ಲು ಬೀಚ್‌ ಕಾಣಸಿಗುತ್ತದೆ. ನದಿ, ಸಾಗರ ಸಂಗಮದ ಜತೆಗೆ ಮೀನುಗಾರಿಕೆಗೆ ಅನುಕೂಲವಾಗಲು ನಿರ್ಮಿಸಿದ ಬ್ರೇಕ್‌ ವಾಟರ್‌ ಕಾಮಗಾರಿ ಇಲ್ಲಿನ ಸೌಂದರ್ಯಕ್ಕೆ ಇನ್ನಷ್ಟು ಮೆರುಗು ನೀಡಿದೆ. ಪ್ರಮುಖ ಮೀನುಗಾರಿಕಾ ಪ್ರದೇಶ ಕೂಡ ಆಗಿರುವ ಈ ಭಾಗ ಮೂರು ವರ್ಷಗಳಿಂದ ನಿರಂತರ ಮನವಿ ನೀಡಿದರೂ ಸಹ ಕನಿಷ್ಠ ಒಂದು ಸುಸಜ್ಜಿತ ರಸ್ತೆ ಕೂಡ ನಿರ್ಮಾಣವಾಗಿಲ್ಲ. ಎರಡು ಮೂರು ವರ್ಷಗಳ ಹಿಂದೆ ಪ್ರವಾಸೋದ್ಯಮ ಅಭಿವೃದ್ದಿಪಡಿಸುವ ಉದ್ದೇಶದಿಂದ 30 ವರ್ಷಗಳಿಂದ ನಿಂತು ಹೋಗಿದ್ದ ಮರ್ಗಿ ಸ್ಪರ್ಧೆಯನ್ನು ಪುನರ್‌ ಆರಂಭಿಸಲಾಗಿತ್ತು. ಕೋವಿಡ್‌ ಹಿನ್ನೆಲೆಯಲ್ಲಿ ಎರಡು ವರ್ಷಗಳಿಂದ ಈ ಕಾರ್ಯಕ್ರಮ ನಡೆದಿಲ್ಲ. ಪ್ರವಾಸೋದ್ಯಮ ಮಾತ್ರವಲ್ಲದೆ ಪ್ರತೀ ವರ್ಷ ಉಪ್ಪುಂದ,ನಾಗೂರು, ಮಡಿಕಲ್‌ ಪರಿಸರದ ದೋಣಿಗಳು ಕೂಡ ಈ ಬಂದರನ್ನು ಮೀನುಗಾರಿಕೆಗೆ ಬಳಸಿಕೊಳ್ಳುತ್ತಿದೆ. ಆದರೆ ಮಳೆಗಾಲದಲ್ಲಿ ಗಬ್ಬೆದ್ದು ಹೋಗುವ ಈ ರಸ್ತೆಯಿಂದ ವ್ಯಾಪಾರ ವಹಿವಾಟಿಗೂ ಕಷ್ಟವಾಗಿದೆ.

ಇಲಾಖೆ ಗಮನಹರಿಸಬೇಕಿದೆ
ಕಳೆದ 4-5 ವರ್ಷಗಳಿಂದ ಪ್ರವಾಸೋದ್ಯಮ ಇಲಾಖೆಯ ಅಭಿವೃದ್ದಿಗೆ ಕೋಟಿ ಕೋಟಿ ಅನುದಾನದ ಮೀಸಲಿರಿಸಿದೆ ಎಂದು ಹೇಳುತ್ತಿದೆ ಹೊರತುಪಡಿಸಿದರೆ ಮರವಂತೆ, ಸೋಮೇಶ್ವರ ಹಾಗೂ ಇತರ ಭಾಗಗಳಲ್ಲಿ ಎಲ್ಲೂ ಕೂಡ ಉದ್ದೇಶಿತ ಯೋಜನೆ ಆರಂಭಿಸಿಲ್ಲ. ಅದರಲ್ಲೂ ಈ ಕುರಿತು ಕಡತ ವಿಲೇವಾರಿ ಕೂಡ ವಿವಿಧ ಮಟ್ಟದಲ್ಲಿ ಮಂದಗತಿಯಲ್ಲಿ ಸಾಗುತ್ತಿದೆ. ಮಾತ್ರವಲ್ಲದೆ ಪದೇ ಪದೇ ಅಧಿಕಾರಿಗಳ ವರ್ಗಾವಣೆ ಕೂಡ ಹಿನ್ನೆಡೆಗೆ ಕಾರಣವಾಗಿದೆ.ಹೀಗಾಗಿ ಸರಕಾರ, ಜನಪ್ರತಿನಿಧಿಗಳು ಮತ್ತು ಇಲಾಖೆ ಇಂತಹ ಪ್ರದೇಶಗಳಿಗೆ ಕನಿಷ್ಠ ಮೂಲ ಸೌಕರ್ಯ ಒದಗಿಸುವ ಮೂಲಕ ನೈಸರ್ಗಿಕ ಸೌಂದರ್ಯ ಹೊಂದಿರುವ ಸ್ಥಳಗಳ ಬೆಳವಣಿಗೆಗೆ ಕಾಯಕಲ್ಪ ನೀಡಬೇಕಿದೆ.

ಇದನ್ನೂ ಓದಿ:ಮಾರಿಕಾಂಬಾ ವ್ಯವಸ್ಥಾಪಕ ಸಮಿತಿ ಲೆಕ್ಕಪತ್ರ ವಿವಾದ; ಸದ್ಯದಲ್ಲಿಯೇ ಸಮಾಲೋಚನಾ ಸಭೆ

ಹಲವು ಬಾರಿ ಗಮನ
ಸೆಳೆಯಲು ಪ್ರಯತ್ನ
ಪ್ರತಿದಿನ ನೂರಾರು ಸ್ಥಳೀಯರು ಸೂರ್ಯಾಸ್ತವನ್ನು ವೀಕ್ಷಿಸಲು ಕಳಿಹಿತ್ಲು ಬೀಚ್‌ಗೆ ಆಗಮಿಸುತ್ತಾರೆ. ಆದರೆ ಯಾವುದೇ ಮೂಲಸೌಕರ್ಯಗಳು ಇಲ್ಲದಿರುವುದರಿಂದ ಸಾರ್ವಜನಿಕರ ಆಸಕ್ತಿ ಕುಂದಿಸಿದೆ. ಹೀಗಾಗಿ ಸ್ಥಳೀಯರು, ದಾನಿಗಳಿಂದ ಮಕ್ಕಳಿಗೆ ಅನುಕೂಲವಾಗಲು ಜಾರುಬಂಡಿ, ಜೋಕಾಲಿ, ಮನೋರಂಜನೆಯ ಆಟಿಕೆಗಳನ್ನು ಅಳವಡಿಸಿದ್ದಾರೆ.

Advertisement

ಶೀಘ್ರ ಟೆಂಡರ್‌ ಪ್ರಕ್ರಿಯೆ
ಬೈಂದೂರು ಕ್ಷೇತ್ರದಲ್ಲಿ ಮರವಂತೆಗೆ 10 ಕೋ.ರೂ. ಹಾಗೂ ಸೋಮೇಶ್ವರ ಬೀಚ್‌ ಅಭಿವೃದ್ದಿಗೆ 15 ಕೋ.ರೂ. ಡಿ.ಪಿ.ಆರ್‌. ಸಿದ್ಧಗೊಳ್ಳುತ್ತಿದೆ. ಶೀಘ್ರ ಟೆಂಡರ್‌ ಪ್ರಕ್ರಿಯೆ ಕೂಡ ನಡೆಯಲಿದೆ. ಕಳಿಹಿತ್ಲು ಬೀಚ್‌ ಅಭಿವೃದ್ದಿಗೆ ಇದುವರೆಗೆ ಯಾವುದೇ ಅನುದಾನ ಮೀಸಲಿರಿಸಿಲ್ಲ. ಶಾಸಕರು ಹಾಗೂ ಸಂಸದರ ಶಿಫಾರಸು ಬಂದಾಗ ಅನುದಾನ ದೊರೆಯಬಹುದು.
-ಕ್ಲಿಫರ್ಟ್‌ ಲೋಬೊ,
ಉಪನಿರ್ದೇಶಕರು,ಪ್ರವಾಸೋದ್ಯಮ ಇಲಾಖೆ ಉಡುಪಿ.

ಅಭಿವೃದ್ಧಿಯ ಪ್ರಯತ್ನ ನಡೆದಿದೆ
ಗ್ರಾ.ಪಂ. ವತಿಯಿಂದ ಕಳೆದ ವರ್ಷ 2 ಲಕ್ಷ ಹಾಗೂ ಪ್ರಸ್ತುತ ವರ್ಷ 70 ಸಾವಿರ ಅನುದಾನ ಮೀಸಲಿಡುವ ಮೂಲಕ ಒಂದಿಷ್ಟು ಅಭಿವೃದ್ದಿಯ ಪ್ರಯತ್ನ ನಡೆದಿದೆ. ಆದರೆ ಶಾಸಕರು ಮತ್ತು ಇಲಾಖೆಗೆ ಹಲವು ಬಾರಿ ಮನವಿ ನೀಡಿದರೂ ಸಹ ಪ್ರಯೋಜನವಾಗಿಲ್ಲ. ಇದರಿಂದ ಮೀನುಗಾರಿಕೆ ಮತ್ತು ಪ್ರವಾಸೋದ್ಯಮ ಅನುಕೂಲ ಇರುವ ಸ್ಥಳ ಬೆಳವಣಿಗೆ ಕಾಣದಂತಾಗಿದೆ.
-ಮಹ್ಮದ್‌ ಗೌಸ್‌,
ಸದಸ್ಯರು ಗ್ರಾ.ಪಂ, ಕಳಿಹಿತ್ಲು

– ಅರುಣ ಕುಮಾರ ಶಿರೂರು

 

Advertisement

Udayavani is now on Telegram. Click here to join our channel and stay updated with the latest news.

Next