Advertisement

ಅಳ್ನಾವರಕ್ಕೆ ಕಾಳಿ: ಭುಗಿಲೆದ್ದಿದೆ ಚಳವಳಿ

10:45 PM Apr 02, 2021 | Team Udayavani |

ಕಾಳಿ ಬೆಳಕಿನ ನದಿ. ರಾಜ್ಯಕ್ಕೆ ವಿದ್ಯುತ್‌ ಉತ್ಪಾದನೆ ಮೂಲಕ ಕೊಡುಗೆ ನೀಡಿದ ಜೀವಜಲ. 160 ಕಿ.ಮೀ. ಉದ್ದಕ್ಕೆ ಪಶ್ಚಿಮ ಘಟ್ಟದ ಕಾಡುಮೇಡು ಬಳಸಿ ಹರಿಯುವ ಕಾಳಿ ಹುಟ್ಟುವುದು ಉತ್ತರ ಕನ್ನಡ ಜಿಲ್ಲೆಯ ಡಿಗ್ಗಿ ಎಂಬ ಹಳ್ಳಿಯಲ್ಲಿ. ತಾನು ಹರಿಯುವ ಪಾತ್ರಕ್ಕೆ ಅತೀ ಹೆಚ್ಚು ಅಣೆಕಟ್ಟುಗಳನ್ನು ಕಂಡಿರುವ ಈ ನದಿ ಇದೀಗ ಮತ್ತೆ ವಿವಾದದ ಕಣಜವಾಗಿದೆ.

Advertisement

ಕಾರಣ ಅಳ್ನಾವರ ಸೇರಿದಂತೆ ಹುಬ್ಬಳ್ಳಿ-ಧಾರವಾಡಕ್ಕೆ ಕುಡಿಯುವ ನೀರಿನ ಬಳಕೆಗೆ ಪ್ರತ್ಯೇಕ ಪೈಪ್‌ಲೈನ್‌ ಹಾಕುತ್ತಿರುವ ಯೋಜನೆಗೆ ದಾಂಡೇಲಿ, ಹಳಿಯಾಳ ನಾಗರಿಕರು, ಅನೇಕ ಸಂಘಟನೆಗಳು ವಿರೋಧ ವ್ಯಕ್ತ ಪಡಿಸುತ್ತಿವೆ. ಅಲ್ಲದೆ, ಕಳೆದ 53 ದಿನಗಳಿಂದ ನಿರಂತರ ಪ್ರತಿಭಟನೆ ಮಾಡುತ್ತಿವೆ. ಆದರೆ ಸರಕಾರ ತನ್ನ ನೀತಿ, ನಿಲುವನ್ನು ಸ್ಪಷ್ಟವಾಗಿ ಹೇಳುತ್ತಿಲ್ಲ. ಕಾಳಿ ನದಿ ಹರಿಯುವ ಜೋಯಿಡಾ, ರಾಮನಗರ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿವೆ. ಜೋಯಿಡಾದಂಥ ಪುಟ್ಟ ತಾಲೂಕಿಗೆ, ಅತೀ ಕಡಿಮೆ ಇರುವ ಜನಸಂಖ್ಯೆಗೆ ಮೊದಲು ಕುಡಿ ಯುವ ನೀರಿನ ಯೋಜನೆ ರೂಪಿಸಿ ಜಾರಿಗೊಳಿಸಬೇ ಕಿತ್ತು ಎಂಬುದು ಹೋರಾಟಗಾರರ ಪ್ರತಿಪಾದನೆ. ಅಲ್ಲದೆ ಸಕ್ಕರೆ ಕಾರ್ಖಾನೆಗೆ ಕಾಳಿ ನೀರು ಬಳಸುವುದಿಲ್ಲ ಎಂಬ ಸ್ಪಷ್ಟ ನಿಲುವನ್ನು ಅಧಿಕಾರದಲ್ಲಿರುವ ಸರಕಾರ ಸ್ಪಷ್ಟಪಡಿಸಿ ದರೆ ಹೋರಾಟದ ಕಾವು ತಗ್ಗಬಹುದೇನೋ.

ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿ ಕಳೆದ 53 ದಿನಗಳಿಂದ ಪ್ರತಿಭಟನೆ ಮಾಡುತ್ತಲೇ ಇದೆ. ಹಳಿಯಾಳದ ಜನತೆ, ಹಲವು ಸಂಘಟನೆಗಳು ಸಾಥ್‌ ನೀಡಿವೆ. ದೊಡ್ಡ ವಿನ್ಯಾಸದ ಪೈಪ್‌ಲೈನ್‌ ಸಹ ಅನುಮಾನಕ್ಕೆ ಕಾರಣವಾಗಿದೆ. ಇರುವ ನೀರನ್ನು ಕುಡಿಯಲು ಬಳಸುವುದಕ್ಕೆ ಯಾರ ವಿರೋಧವೂ ಇಲ್ಲ. ಕಾರ್ಖಾನೆಗೆ ಸಹ ಕಾಳಿ ನೀರು ಬಳಕೆ ಎಂಬುದು ಗುಪ್ತವಾಗಿದ್ದರೆ, ಈಗಾಗಲೇ ಬಳಕೆಯಾಗುತ್ತಿರುವ ಮತ್ತು ಕೆರೆ ತುಂಬಿಸುವ ಯೋಜನೆಗೆ ಸಹ ಪೆಟ್ಟು ಬೀಳಬಹುದು ಎಂಬ ಆತಂಕ ಹೋರಾಟಗಾರರಲ್ಲಿದೆ. ಕರವೇ, ಜಯ ಕರ್ನಾಟಕ, ಕೆಂಪುಸೇನೆ, ಕರ್ನಾಟಕ ಹೋರಾಟ ಸಮಿತಿ, ಜೆಡಿಎಸ್‌ ಘಟಕ, ಮಾಜಿ ಶಾಸಕ ಸುನಿಲ್‌ ಹೆಗಡೆ ಸೇರಿದಂತೆ ಹಲವರು ಅಳ್ನಾವರಕ್ಕೆ ನೀರು ಕೊಂಡೊಯ್ಯುವುದನ್ನು ವಿರೋಧಿಸಿದ್ದಾರೆ. ಅಲ್ಲದೆ ಕಲಘಟಗಿ, ಹುಬ್ಬಳ್ಳಿ-ಧಾರವಾಡ ನಗರಕ್ಕೆ ಕಾಳಿ ನೀರು ಪೂರೈಸುವ ಯೋಜನೆ ಇದರಲ್ಲಿ ಅಡಗಿದೆಯೇ ಎಂಬ ಅನುಮಾನವೂ ಪ್ರತಿಭಟನಕಾರರನ್ನು ಕಾಡುತ್ತಿದೆ.

ಕಾಳಿ ನದಿಯಿಂದ 48 ಕೆರೆಗಳನ್ನು ತುಂಬಿಸುವ ಏತ ನೀರಾವರಿ ಯೋಜನೆ ಸಹ ಜಾರಿಯಲ್ಲಿದೆ. ಇದಕ್ಕಾಗಿ ಹಿಂದಿನ ಸರಕಾರಗಳು 226 ಕೋಟಿ ರೂ. ಯೋಜನೆ ರೂಪಿಸಿ, ಅನುಷ್ಠಾನ ಸಹ ಮಾಡುತ್ತಿದೆ. ಹೀಗಿರುವಾಗ ಕಾಳಿ ನದಿಯ ಉಪ ನದಿಗಳ ಸಂರಕ್ಷಣೆ ಜತೆಗೆ ನದಿ ಮೂಲದ ಊರುಗಳಿಗೆ ಮೊದಲು ಕುಡಿಯುವ ನೀರು ಕೊಡುವ ಬದ್ಧತೆಯನ್ನು ಸರಕಾರ ಪ್ರದರ್ಶಿಸಬೇಕಿದೆ. ಸುಪಾದಲ್ಲಿ ಅತೀ ಎತ್ತರದ ಅಣೆಕಟ್ಟು ಹೊಂದಿರುವ ಕಾಳಿ, ಕದ್ರಾ, ಕೊಡಸಳ್ಳಿಗಳಲ್ಲಿ ಸಹ ಅಣೆಕಟ್ಟು ಹೊಂದಿದೆ. ಈ ಮೂರು ಅಣೆಕಟ್ಟುಗಳಲ್ಲಿ ಕಾಳಿ ನದಿ ನೀರು ಸಂಗ್ರಹಿಸಿ ವಿದ್ಯುತ್‌ ಉತ್ಪಾದನೆ ಮಾಡಲಾಗುತ್ತಿದೆ. ತಟ್ಟಿಹಳ್ಳ, ಬೊಮ್ಮನ ಹಳ್ಳಿಗಳಲ್ಲಿ ಪಿಕ್‌ಅಪ್‌ ಡ್ಯಾಂ ಹೊಂದಿರುವ ಕಾಳಿ ನಗಾಝರಿಯಲ್ಲಿ ವಿದ್ಯುತ್‌ ಉತ್ಪಾದನ ಕೇಂದ್ರ ಹೊಂದಿದೆ. ಅಲ್ಲದೇ ಕೈಗಾ ಅಣು ವಿದ್ಯುತ್‌ ಸ್ಥಾವರಕ್ಕೂ ಕಾಳಿ ನದಿ ನೀರು ಬಳಸಿಕೊಳ್ಳಲಾಗುತ್ತಿದೆ.

ಕುಡಿಯಲು ಯೋಗ್ಯವಲ್ಲ: ಕಾಳಿ ನೀರನ್ನು ದಾಂಡೇಲಿ ಪೇಪರ್‌ ಮಿಲ್‌ ವೆಸ್ಟ್‌ಕೋಸ್ಟ್‌ ಸಹ ಬಳಸಿಕೊಳ್ಳುತ್ತಿದೆ. ಕೈಗಾ ಮತ್ತು ವೆಸ್ಟ್‌ಕೋಸ್ಟ್‌ಗೆ ಬಳಸಿದ ನೀರು ಸಂಸ್ಕರಣೆ ಗೊಂಡು ಮತ್ತೆ ನದಿ ಸೇರಿದರೂ ಸಹ ಕುಡಿಯಲು ಯೋಗ್ಯವಲ್ಲ ಎಂದು ವರದಿ ಬಂದಿದೆ. ಹಾಗಾಗಿ ಕಾರವಾರ ಜಿ.ಪಂ.ನಿಂದ ಕಾಳಿ ನದಿ ಎಡ ಬಲದಂಡೆಯ ಊರುಗಳಿಗೆ ರೂಪಿಸಿದ ಕುಡಿಯುವ ನೀರಿನ ಯೋಜನೆಗಳು ಕುಂಟುತ್ತಿವೆ. ದಾಂಡೇಲಿ ಬಳಿ ಹರಿಯುವ ನದಿಯ ನೀರನ್ನು ಕುಡಿಯಲು ಬಳಸುವ ಯೋಜನೆ ಯಶಸ್ವಿಯಾಗಿದೆ. ಕಾರ್ಖಾನೆಗಳಿಗೆ ಬಳಸುವ ಮುನ್ನವೇ ನದಿಯ ಪರಿಶುದ್ಧ ಹರಿವಿನ ಜಾಗದಿಂದ ನೀರನ್ನು ಪಂಪ್‌ ಮಾಡಿ ದಾಂಡೇಲಿ, ಹಳಿಯಾಳ ಹಾಗೂ ಹಲವಾರು ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸಲಾಗುತ್ತಿದೆ. ಆ ನೀರು ಕುಡಿಯಲು ಯೋಗ್ಯವಿದೆ. ಹೀಗೆ ನದಿಯ ನೀರನ್ನು ಮೂಲದ ಜೋಯಿಡಾ, ರಾಮ ನಗರಗಳಿಗೆ ಮೊದಲು ತಲುಪಿಸಬೇಕಿದೆ.

Advertisement

– ನಾಗರಾಜ ಹರಪನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next