ಕಾಳಗಿ: ದಕ್ಷಿಣ ಕಾಶಿ ಎಂದೇ ಹೆಸರಾದ ಪಟ್ಟಣದ ನೀಲಕಂಠ ಕಾಳೇಶ್ವರ ತೀರ್ಥ ಕುಂಡದಲ್ಲಿ ಪ್ರತಿವರ್ಷ ಚೈತ್ರ ಮಾಸ ಶುಕ್ಲ ಪಕ್ಷದ ದ್ವಾದಶಿ ದಿನದಂದು ಕಾಶಿ ನೀರು ಹರಿದು ಬರುವುದು ಹಳೆಗನ್ನಡದ ಇತಿಹಾಸದಲ್ಲಿ ಉಲ್ಲೇಖವಿದೆ. ಇದು ಸತ್ಯವೆಂಬಂತೆ ಬುಧವಾರ ನಸುಕಿನ ಜಾವ 2ಗಂಟೆ 55 ನಿಮಿಷಕ್ಕೆ ಕಾಶಿ ನೀರು ಕ್ಷೇತ್ರಕ್ಕೆ ಹರಿದು ಬಂತು ಎಂದು ದಕ್ಷಿಣ ಕಾಶಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.
ನೀಲಕಂಠ ಕಾಳೇಶ್ವರ ದೇವಸ್ಥಾನದಲ್ಲಿ ಇಡಿ ರಾತ್ರಿ ಭಜನೆ, ಜಾಗರಣೆ ನಡೆಯುತ್ತಿರುವಾಗ ನಸುಕಿನ ಜಾವದಲ್ಲಿ ತೀರ್ಥ ಕುಂಡದಲ್ಲಿ ಬಿಳಿ ಬಣ್ಣದ ನೀರು ಕಾಣಿಸಿಕೊಂಡಿತು. ಕಾಶಿ ನೀರು ಉದ್ಭವವಾದ ತೀರ್ಥ ಕುಂಡದ ಸ್ಥಳದಲ್ಲಿನ ನೀರಿನಿಂದ ದೇವಸ್ಥಾನ ಅರ್ಚಕ ಚಂದ್ರಕಾಂತ ಜೋಶಿ ಅವರ ವೈದಿಕತ್ವದಲ್ಲಿ ಕಾಳೇಶ್ವರ ಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಿ, ಗಂಗಾ ಪೂಜೆ ಮಾಡಲಾಯಿತು.
ಈ ಸುದ್ದಿ ಪಟ್ಟಣದ ತುಂಬೆಲ್ಲಾ ಹಬ್ಬುತ್ತಿದ್ದಂತೆ ಬೆಳಗ್ಗೆಯಿಂದ ಸಾಯಂಕಾಲದ ವರೆಗೆ ತಂಡೋಪತಂಡವಾಗಿ ಆಗಮಿಸಿದ ಜನರು ತಮ್ಮ ಕುಟುಂಬದೊಂದಿಗೆ ನೀಲಕಂಠ ಕಾಳೇಶ್ವರ ದೇವಸ್ಥಾನಕ್ಕೆ ಆಗಮಿಸಿ ತೀರ್ಥ ಕುಂಡದಲ್ಲಿ ಮಿಂದೆದ್ದರು.
ಸಂಜೆ ಶ್ರೀ ನೀಲಕಂಠ ಕಾಳೇಶ್ವರ ದೇವಸ್ಥಾನ ಆವರಣದಲ್ಲಿ ಬೆಳ್ಳಿ ಪಲ್ಲಕ್ಕಿ ಉತ್ಸವ ಜರುಗುತ್ತಿದ್ದಂತೆ ಪಂಡಿತ ಡಾ| ಬಸವರಾಜ ಕಲಗುರ್ತಿ ಗುರೂಜಿ ವೈದಿಕತ್ವದಲ್ಲಿ ರೌದ್ರಾವತಿ ನದಿಗೆ ದಕ್ಷಿಣಕಾಶಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಹಾಗೂ ಗ್ರಾಮಸ್ಥರ ವತಿಯಿಂದ ಮಹಾ ಗಂಗಾರತಿ ಮಾಡಿ, ನದಿಯಲ್ಲಿ ದೀಪಗಳನ್ನು ಬಿಡಲಾಯಿತು.
ಗ್ರಾಮದ ಮುಖಂಡರಾದ ಬಸಯ್ಯಸ್ವಾಮಿ ಪ್ಯಾಟಿಮಠ, ಶಿವಕುಮಾರ ಶಾಸ್ತ್ರೀ, ವಿಶ್ವನಾಥ ವನಮಾಲಿ, ಶಿವಶರಣಪ್ಪ ಕಮಲಾಪುರ, ಸತ್ಯನಾರಾಯಣ ವನಮಾಲಿ, ಚಂದ್ರಕಾಂತ ವನಮಾಲಿ, ಸಂತೋಷ ಪತಂಗೆ, ಶಿವಶರಣಪ್ಪ ಗುತ್ತೇದಾರ, ರಾಘವೇಂದ್ರ ಗುತ್ತೇದಾರ, ಶಾಂತಕುಮಾರ ಗುತ್ತೇದಾರ, ಜಗಧೀಶ ಮಾಲಿ ಪಾಟೀಲ, ಬಾಬು ನಾಟೀಕಾರ, ಸುನೀಲ ರಾಜಾಪೂರ, ಬಲರಾಮ ವಲ್ಲಾಪುರೆ, ರವಿ ಬಿರೆದಾರ ಹಾಗೂ ಇನ್ನಿತರರು ಇದ್ದರು.