ಅಫ್ಸಾಲಿ ಸಾಹೇಬರ ಎರಡನೇ ಮಗಳು, ಹೆರಿಗೆಗೆಂದು ತವರಿಗೆ ಬಂದಿದ್ದಳು. ಕೊಲ್ಲಿ, ಕಿಲ್ಲೂರು, ದಿಡುಪೆಯಲ್ಲೆಲ್ಲ ಹೆರಿಗೆಗೆ ಆಸ್ಪತ್ರೆಗೆ ಹೋಗೋದು ತುಂಬಾನೇ ಅಪರೂಪ. ಊರಲ್ಲಿ ಅದೆಷ್ಟೋ ಜನ ಸೂಲಗಿತ್ತಿಯರಿದ್ದಾರೆ. ಡಾಕ್ಟ್ರುಗಳಿಗಿಂತಲೂ ಹೆಚ್ಚು ಬಲ್ಲವರಿದ್ದಾರಂತೆ. ಆದರೆ 2007ರಲ್ಲಿ ನಡೆದ ಆ ಘಟನೆಯ ನಂತರ ಇಡೀ ಊರೇ ಹೆದರಿತು. ಅದೆಷ್ಟೇ ಕಷ್ಟವಾದರೂ ಸರಿ: ಆಸ್ಪತ್ರೆಯಲ್ಲೇ ಡೆಲಿವರಿ ಮಾಡಿಸುವ ಮಟ್ಟಿಗೆ ಅಲ್ಲಿನವರು ಬೆದರಿದ್ದರಂತೆ.
ಅಫ್ಸಾಲಿ ಸಾಹೇಬರು ಹಸುಗೂಸು ಮೊಮ್ಮಗಳನ್ನು ಕಳೆದುಕೊಂಡಿರೋದರಲ್ಲಿ ಯಾರ ತಪ್ಪನ್ನು ಹುಡುಕೋದು? ಎಂಟೇ ತಿಂಗಳಿಗೆ ಹೊರಬಂದ ಮಗುವನ್ನೇ ದೂರಬೇಕೇ?
ಬೆಳಿಗ್ಗೆ ಹೆರಿಗೆಯಾಗಿತ್ತು. ಸೂಲಗಿತ್ತಿ ಸುಶೀಲಕ್ಕ ಬಲು ಚಾಣಾಕ್ಷೆ. ಮುಸಲ್ಮಾನರಲ್ಲೂ ಹೆರಿಗೆ ಮಾಡಿಸೋ ಹೆಂಗಸರು ತುಂಬಾ ಜನ ಇದ್ದಾರೆ. ಹೆರಿಗೆಗೇನೂ ಕಷ್ಟವಾಗಲಿಲ್ಲ. ಲಕ್ಷಣವಾದ ಮಗು. ಆದರೆ ಅಳು, ಚಟುವಟಿಕೆಗಳೆಲ್ಲ ಕಡಿಮೆ. ಅಥವಾ ಇಲ್ಲವೇ ಇಲ್ಲವೆನ್ನುವಷ್ಟು. ಮನೆಯವರು ಹೆದರಲಿಲ್ಲ. ಎಂಟು ತಿಂಗಳ ಮಗು ಹಾಗೇನೇ. ಇನ್ನೂ ಒಂದು ತಿಂಗಳು ಹೊಟ್ಟೆಯಲ್ಲೇ ಬೆಳೆಯಬೇಕಿತ್ತು. ಆಸ್ಪತ್ರೆಯಲ್ಲಾದರೆ ಐ.ಸಿ.ಯು.ನಲ್ಲಿಟ್ಟು ಬೆಳೆಸುತ್ತಾರೆ. ಆದ್ದರಿಂದ ಆ ಸಂಜೆಯೇ ಮಗುವನ್ನು ಬೆಳ್ತಂಗಡಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಡಾಕ್ಟ್ರು ಅಫ್ಸಾಲಿ ಸಾಹೇಬರ ಪರಿಚಯದವರು, ‘ಮಿನಿಮಂ ಹದಿನೈದು ದಿನವಾದ್ರೂ ಆಸ್ಪತ್ರೆಯಲ್ಲಿರಬೇಕು, ಮಗು- ತಾಯಿ ಇಬ್ಬರೂ. ತುಂಬಾ ಖರ್ಚಾಗುತ್ತೆ. ಮಂಗ್ಳೂರು ಲೇಡಿಗೋಷನ್ ಆಸ್ಪತ್ರೆಗೆ ಹೋಗಿ ಬಿಡಿ. ಖರ್ಚು ಉಳಿಯುತ್ತೆ. ಅಲ್ಲದೆ ಮಗು ತಾಯೀನಾ ಇನ್ನೂ ಚೆನ್ನಾಗಿ ನೋಡ್ಕೊತಾರೆ ಅಲ್ಲಿ’ ಎಂದರು. ಅಫ್ಸಾಲಿ ಸಾಹೇಬರದು ಬಡತನದ ಬದುಕು. ಮೂರು ಹೆಣ್ಣು, ಒಂದು ಗಂಡು. ಸಣ್ಣ ಭೂಮಿ. ಅದ್ರಲ್ಲೇ ತೆಂಗು ಕಂಗು ಭತ್ತದ ಗದ್ದೆ. ಅಷ್ಟೆ. ಕುದುರೆಮುಖ ಅದಿರು ಕಂಪನಿ ಆರಂಭವಾದ ಶುರುವಿನ ಏಳೆಂಟು ವರ್ಷಗಳ ಕಾಲ ಕಂಪನಿಯವರಿಗೆ ಬಿದಿರಿನ ಬುಟ್ಟಿಯನ್ನು ನಿರಂತರವಾಗಿ ಸಪ್ಲೈ ಮಾಡ್ತಿದ್ರಂತೆ. ದಿಡುಪೆ, ಸಂಸೆಯ ಕಾಡು ಗುಡ್ಡದ ಮಾರ್ಗದಲ್ಲಿ ನಡೆದು ಬುಟ್ಟಿಗಳನ್ನು ಹೊತ್ತುಕೊಂಡು ಹೋಗಿ ಮಾರಾಟ ಮಾಡಿ ಬರುತ್ತಿದ್ದರಂತೆ. 1980ರ ನಂತರ ರಬ್ಬರ್ ಬುಟ್ಟಿಗಳು ಹೆಚ್ಚು ಚಾಲ್ತಿಗೆ ಬಂದ ಮೇಲೆ ಇವರ ಕಸುಬಿಗೆ ಹೊಡೆತ ಬಿದ್ದಿತ್ತು. ಶಾಲೆಯ ಹಿಂದೆಯೇ ಮನೆಯಿದ್ದುದರಿಂದ ಮಕ್ಕಳೆಲ್ಲರಿಗೂ ಪ್ರೈಮರಿ ಶಿಕ್ಷಣವಾಗಿದೆ. ಮಗ ದುಬೈಯಲ್ಲಿದ್ದಾನೆ. ಹಾಗೆಂದ ಮಾತ್ರಕ್ಕೆ ಲಕ್ಷದ ಮಾತು ಬೇಡ. ಮೇಸ್ತ್ರಿ ಕೆಲಸಕ್ಕೆಂದು ಹೋದವನು ಈಗ ಡ್ರೈವಿಂಗ್ ಕಲಿತು ಡ್ರೈವರ್ ಆಗಿದ್ದಾನೆ, ಅಷ್ಟೆ. ಆದರೂ ತಂಗಿಯರ ಮದುವೆ, ಮನೆಯ ಖರ್ಚುಗಳನ್ನೆಲ್ಲಾ ಅವನೇ ನೋಡ್ಕೋತಾನೆ. ಅವನಿಗೂ ಮದುವೆಯಾಗಿದೆ. ಇಬ್ಬರು ಮಕ್ಕಳು ಬೇರೆ. ಬದುಕೇನೋ ನಡೆಯುತ್ತಿತ್ತು, ಇದ್ದುದ್ದರಲ್ಲೇ ಸುಖವಾಗಿ, ಈ ಘಟನೆಯೊಂದು ನಡೆಯದೇ ಇರುತ್ತಿದ್ದರೆ…
ಮಂಗಳೂರು ಆಸ್ಪತ್ರೆಗೆ ಹೋಗಬೇಕಿತ್ತಲ್ವ?! ಓಮ್ನಿಯೊಂದರಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಮಗುವನ್ನು ತೋರಿಸಿದ್ದಾರೆ. ಆದರೆ ಮಗು ಸತ್ತಿದೆ ಅಂದಾಗ ಮನೆಯವರೇ ಏಕೆ, ಸಲಹೆ ಕೊಟ್ಟ ಬೆಳ್ತಂಗಡಿಯ ಡಾಕೂ ಅತ್ತಿದ್ದಾರೆ. ಛೆ! ತನ್ನಿಂದಲೇ ಆ ಮಗು ಸತ್ತಿತು. ಇಲ್ಲಿ ಹೆಚ್ಚಂದ್ರೆ ಹತ್ತು ಸಾವಿರ ಆಗ್ತಿತ್ತು. ಅದನ್ನು ಉಳಿಸೋಕಂತ ಅಲ್ಲಿ ಕಳಿಸಿದೆ. ಆದ್ರೆ ಮಗುವಿನ ಜೀವವೇ ಉಳಿಯಲಿಲ್ಲ. ಮಾರ್ಗ ಮಧ್ಯವೇ ತೀರಿಕೊಂಡಿತು ಎಂದು ಡಾಕ್ಟರ್ ಕಣ್ಣೀರು ಹಾಕುವಾಗ ಅಫ್ಸಾನ್ ಸಾಹೇಬರೇ ಸಮಾಧಾನ ಮಾಡಿದ್ದಾರೆ.
ಅಫ್ಸಾನ್ ಸಾಹೇಬರ ದುರಾದೃಷ್ಟ ಅಷ್ಟಕ್ಕೇ ಮುಗಿಯಲಿಲ್ಲ. ಮಂಗಳೂರಿನ ಆಸ್ಪತ್ರೆಯಿಂದ ಮರಳುವಾಗ ಕತ್ತಲು. ಬದಿಯಲ್ಲಿ ಮಗುವಿನ ಹೆಣ. ಓಮ್ನಿಯ ಡ್ರೆ„ವರ್ ನಡುವೆ ಎಲ್ಲೋ ನಿಲ್ಲಿಸಿ ಊಟ ಮಾಡಲೇಬೇಕು ಅಂದವನು ಕುಡಿದು ಬಂದಿದ್ದ ಅಂತ ಕಾಣುತ್ತೆ. ಬೆಳ್ತಂಗಡಿ ದಾಟಿ ಕಿಲ್ಲೂರು ರಸ್ತೆಯನ್ನು ಹಿಡಿದಿದ್ದಾನೆ. ಮನೆ ತಲುಪಲು ಹತ್ತು ಹದಿನೈದು ಕಿ.ಮೀ ಇದೆ ಎನ್ನುವಾಗ ರಸ್ತೆ ಬದಿಯ ಮರವೊಂದಕ್ಕೆ ಕಾರು ಗುದ್ದಿ ಬಿಟ್ಟಿದೆ. ಅಪಘಾತ ಭೀಕರವಾಗಿತ್ತು. ಎದುರು ಕೂತಿದ್ದ ಅಫ್ಸಾಲಿ ಸಾಹೇಬರ ತಲೆಗೆ ಏಟು. ಕಣ್ಣಿಗೂ ಪೆಟ್ಟು ಬಿದ್ದಿದೆ. ಪರಿಣಾಮ, ಒಂದು ಕಣ್ಣು ಶಾಶ್ವತವಾಗಿ ಕುರುಡಾಯಿತು. ಇಡೀ ಕುಟುಂಬವೇ ಆವತ್ತು ನಡುರಾತ್ರಿ ರಸ್ತೆ ಬದಿಯಲ್ಲಿ ರಕ್ತದ ಮಡುವಿನಲ್ಲಿತ್ತು.
ಈ ಘಟನೆಯ ನಂತರ ತಾನು ಯಾವ ಗಾಡೀಲೂ ಕೂತ್ಕೊಳಲ್ಲ ಅನ್ನುತ್ತಾ ತಮ್ಮ ಬದುಕಿನ ಪುಟಗಳನ್ನು ನನ್ನ ಮುಂದೆ ಬಿಚ್ಚಿಟ್ಟರು ಅಫ್ಸಾಲಿಯವರು. ಇದಾಗಿ ಒಂಭತ್ತು ವರುಷಗಳಾಗಿವೆ. ಅಪಘಾತವಾದದ್ದಕ್ಕೆ ಪರಿಹಾರದ ಮೊತ್ತವನ್ನೂ ಕೋರ್ಟು ತೀರ್ಮಾನಿಸಿದೆಯಂತೆ. ಆದರೆ ದಶಕ ಕಳೆದರೂ ಆ ಮೊತ್ತ ಇವರ ಕೈ ಸೇರಿಲ್ಲ. ಕೋರ್ಟು, ಕೇಸು ಅಂತ ಅಲೆದಿದ್ದೇ ಬಂತು. ಆಘಾತ, ಕಷ್ಟಗಳಿಂದ ಹೇಗೋ ಸುಧಾರಿಸಿಕೊಂಡು, ಮನೆಯಲ್ಲಿರುವ ಮಕ್ಕಳೊಂದಿಗೆ ಆಟವಾಡುತ್ತಾ ಅಫ್ಸಾಲಿ ಸಾಹೇಬರು ಮತ್ತೆ ಮುಖದಲ್ಲಿ ಮುಗುಳ್ನಗು ತಂದುಕೊಳ್ಳುತ್ತಿದ್ದಾರೆ. ತಮ್ಮ ಸುತ್ತಲಿನ ಕಿಲ್ಲೂರಿನ ಜಗತ್ತನ್ನು ಒಂಟಿ ಕಣ್ಣಲ್ಲೇ ಕಂಡು ನೆಮ್ಮದಿಯ ನಿಟ್ಟುಸಿರಿಡುತ್ತಾರೆ. ಹೀಗೇ ಸುತ್ತಾಡುತ್ತಿದ್ದಾಗ ಸಿಕ್ಕ ಒಂದು ದೇವಸ್ಥಾನ ತುಂಬಾ ಇಷ್ಟವಾಗಿತ್ತು. ಎರಡು ವರುಷದ ಹಿಂದೆ. ಬಾರ್ಕೂರು, ಶಿರಿಯಾರ, ಗುಡ್ಡೆಟ್ಟು ರಸ್ತೆಯಿಂದ ಬಸೂರಿಗೆ ಹೋಗೋವಾಗ ಕಂಡ ದೇವಸ್ಥಾನವದು. ವಿಷ್ಣುಮೂರ್ತಿ ದೇವಸ್ಥಾನ. ಹಳೆಯದು. ಮಣ್ಣಿನದು. ಆದರೂ ವಿಶೇಷ ಚೆಲುವಿತ್ತು.
(ಮುಂದುವರಿಯುವುದು)
– ಮಂಜುನಾಥ್ ಕಾಮತ್