ಕಲಬುರಗಿ: ನಗರದ ರಾಮ ಮಂದಿರ ವೃತ್ತದಲ್ಲಿ ಶುಕ್ರವಾರ ಸಂಜೆ ಮರಳಿನ ಲಾರಿ ಅಡಿ ಸಿಲುಕಿ ಪತಿ ಹಾಗೂ ಪತ್ನಿ ಸಾವನ್ನಪ್ಪಿದ ದಾರುಣ ಘಟನೆ ಸಂಭವಿಸಿದೆ.
ಮರಳಿನ ಲಾರಿಯ ಚಕ್ರದಲ್ಲಿ ಸಿಕ್ಕು ಸಾವನ್ನಪ್ಪಿರುವ ದಂಪತಿಯನ್ನು ಶರಣ ಸಿರಸಗಿ ನಿವಾಸಿಗಳಾದ ರಾಣೋಜಿ (45) ಮತ್ತು ರೇಣುಕಾ (35) ಎಂದು ಗುರುತಿಸಲಾಗಿದೆ. ಈ ವೇಳೆ ದಂಪತಿಯ ಮಡಿಲಲ್ಲಿದ್ದ ಮಗು ಮಲ್ಲಿಕಾರ್ಜುನ ಆಶ್ಚರ್ಯ ರೀತಿಯಲ್ಲಿ ಬದುಕು ಉಳಿದಿದೆ.
ಘಟನೆಯ ಕುರಿತು ರಾಮಮಂದಿರ ಸರ್ಕಲ್ ಬಳಿಯಲ್ಲಿ ಸಾರ್ವಜನಿಕರು ಸಂಚಾರಿ ಪೋಲಿಸರ ವಿರುದ್ಧ ಬಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಮ ಮಂದಿರ ವೃತ್ತದಲ್ಲಿ ಸಂಚಾರಿ ನಿಯಮಗಳ ಪಾಲನೆ ಕಟ್ಟು ನಿಟ್ಟಿನಿಂದ ಆಗುತ್ತಿಲ್ಲ. ದೀಪಗಳು ಉರಿಯುತ್ತಿದ್ದರೂ ವಿರುದ್ಧ ದಿಕ್ಕಿನಲ್ಲಿ ವಾಹನಗಳ ಮತ್ತು ಜನರ ಚಲನೆ ಇರುತ್ತದೆ. ಸಂಚಾರಿ ಪೊಲೀಸರು ಕರ್ತವ್ಯದಲ್ಲಿದ್ದರೂ ಕ್ರಮ ಕೈಗೊಳ್ಳುವುದಿಲ್ಲ. ಹೀಗಾಗಿ ಅಫಘಾತ ನಡೆಯುತ್ತಿವೆ ಎಂದು ಪ್ರತ್ಯಕ್ಷ ದರ್ಶಿಗಳು ದೂರಿದ್ದಾರೆ. ಹಗಲಿನಲ್ಲಿಯೇ ಮರಳು ತುಂಬಿದ ಟಿಪ್ಪರ್ ಲಾರಿಗಳು ನಗರದ ಹಲವಾರು ವೃತ್ತಗಳಲ್ಲಿ ರಾಜರೋಷವಾಗಿ ಓಡಾಡುತ್ತಿವೆ. ಇದರಿಂದಾಗಿ ಜನಸಂದಣಿ ಇರುವ ರಸ್ತೆಯಲ್ಲಿ ಪ್ರಯಾಣಿಸುವುದು ದುಸ್ತರವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವೇಳೆಯಲ್ಲಿ ಸಂಚಾರಿ ಪೊಲೀಸರು ದಂಪತಿ ದೇಹವನ್ನು ಸ್ಥಳದಿಂದ ಜಿಮ್ಸ್ ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಕುರಿತು ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Karnataka Election ವಿಜಯಪುರದಲ್ಲಿ 7 ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತ