ಹೊಸದಿಲ್ಲಿ: ಭಾರತದ ಭೂಭಾಗಗಳು ಇರುವ ನೇಪಾಲದ ಹೊಸ ನಕ್ಷೆಯನ್ನು ಅಲ್ಲಿನ ಸಂಸತ್ತು ಇತ್ತೀಚೆಗೆ ಅಂಗೀಕರಿಸಿದ ಬೆನ್ನಲ್ಲೇ, ವಿವಾದಿತ ಜಾಗಗಳಲ್ಲೊಂದಾದ ಕಾಲಾಪಾನಿ ಬಳಿ ತನ್ನದೊಂದು ಸೇನಾ ಬ್ಯಾರಕ್ ನಿರ್ಮಿಸಲು ನೇಪಾಲ ಮುಂದಾಗಿದೆ.
ಇದರಿಂದಾಗಿ ಭಾರತ- ನೇಪಾಲ ನಡುವಿನ ಗಡಿಬಿಕ್ಕಟ್ಟು ಇನ್ನಷ್ಟು ಕಗ್ಗಂಟಾಗಿ ಪರಿಣಮಿಸಲಿದೆ. ನೇಪಾಲದ ಈ ನಿರ್ಧಾರದ ಹಿಂದೆ ಚೀನದ ರಾಯಭಾರಿ ಹೂ ಯಾಂಕಿ ಕೈವಾಡವಿದೆ ಎಂದು ಭಾರತದ ಗುಪ್ತಚರ ಮೂಲಗಳು ತಿಳಿಸಿರುವುದಾಗಿ ಎಎನ್‌ಐ ವರದಿ ಮಾಡಿದೆ.
ನೇಪಾಲದ ಕಮ್ಯುನಿಸ್ಟ್ ಪಕ್ಷದ ಅಧ್ಯಕ್ಷ ಪುಷ್ಪ ಕಮಲ್ ದಹಲ್ ಮತ್ತು ಉಪ ಪ್ರಧಾನಿ ಈಶ್ವರ್ ಪೊಖರೇಲ್, ಚೀನದ ಉನ್ನತ ನಾಯಕರೊಂದಿಗೆ ಇತ್ತೀಚೆಗಷ್ಟೇ ವೀಡಿಯೋ ಕಾನ್ಫರೆನ್ಸ್ ನಡೆಸಿರುವುದು ತಿಳಿದುಬಂದಿದೆ.