ಮೈಸೂರು: ಸಂಸತ್ ಕಲಾಪವನ್ನು ನಡೆಯಲು ಬಿಡದೆ ಹಾಳುಗೆಡವಿದ ಪ್ರತಿಪಕ್ಷಗಳ ನಡೆಯನ್ನು ಖಂಡಿಸಿ ನಗರ ಹಾಗೂ ಜಿಲ್ಲಾ ಬಿಜೆಪಿ ಘಟಕಗಳ ಕಾರ್ಯಕರ್ತರು ಗುರುವಾರ ಸಾಂಕೇತಿಕ ಉಪವಾಸ ಸತ್ಯಾಗ್ರಹ ನಡೆಸಿದರು.
ದೇಶದೆಲ್ಲೆಡೆ ಬಿಜೆಪಿ ಸಂಸದರು ಸ್ಥಳೀಯವಾಗಿ ಸತ್ಯಾಗ್ರಹ ನಡೆಸುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕರೆಯ ಮೇರೆಗೆ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸತ್ಯಾಗ್ರಹ ನಡೆಸಿದ ಬಿಜೆಪಿ ಕಾರ್ಯಕರ್ತರ ಜೊತೆಗೆ ಮೈಸೂರು -ಕೊಡಗು ಸಂಸದ ಪ್ರತಾಪ್‌ಸಿಂಹ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜೈಕಾರ ಹಾಕಿ, 23 ದಿನಗಳ ಸಂಸತ್ ಕಲಾಪ ಬಲಿಯಾಗಲು ಕಾರಣವಾದ ಕಾಂಗ್ರೆಸ್ ಹಾಗೂ ಇನ್ನಿತರ ಪ್ರತಿಪಕ್ಷಗಳ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಪ್ರತಾಪ್‌ಸಿಂಹ, 1984ರ ನಂತರ ರಾಜ್ಯ ಹಾಗೂ ದೇಶದ ರಾಜಕಾರಣದಲ್ಲಿ ಮೈತ್ರಿ ಆಡಳಿತ ಬಂದು ದೇಶದ ಅಭಿವೃದ್ಧಿಗೆ ಮಾರಕವಾಯಿತು. ಯುಪಿಎ ಸರ್ಕಾರದಲ್ಲಿ ದೇಶದ ಅಭಿವೃದ್ಧಿಗೆ ಉಂಟಾದ ಹಿನ್ನಡೆಯನ್ನು ಅರಿತ ದೇಶದ ಜನತೆ ಕೇಂದ್ರದಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ನೀಡುವ ಮೂಲಕ ನರೇಂದ್ರ ಮೋದಿ ಅವರನ್ನು ಪ್ರಧಾನಿಯಾಗಿ ಮಾಡಿದ್ದಾರೆ.
ಆದರೆ, 44 ಸ್ಥಾನಗಳಿಗೆ ಇಳಿದಿರುವ ಕಾಂಗ್ರೆಸ್ ಅಧಿಕಾರ ಕಳೆದುಕೊಂಡು ಒದ್ದಾಡುವಂತಾಗಿದ್ದು, ಹೀಗಾಗಿ ಮೊದಲ ದಿನದಿಂದಲೂ ಕಲಾಪಕ್ಕೆ ಅಡ್ಡಿಪಡಿಸಲಾರಂಭಿಸಿತು. ಅದರಂತೆ ಈ ಬಾರಿ ಬಜೆಟ್ ಅಧಿವೇಶನದ ಎರಡನೇ ಹಂತದಲ್ಲಿ ಒಂದು ದಿನವೂ ಕಲಾಪ ನಡೆಯದಂತೆ ಅಡ್ಡಿಪಡಿಸುವ ಮೂಲಕ ಒಂದು ತಿಂಗಳ ಅಧಿವೇಶನಕ್ಕೆ ಅಡ್ಡಿಪಡಿಸಿದೆ ಎಂದು ಆರೋಪಿಸಿದರು.
ದೇಶದ ಅಭಿವೃದ್ಧಿ ಕುರಿತು ಚರ್ಚಿಸಲು ಅಡ್ಡಿಪಡಿಸಿದ ಕಾಂಗ್ರೆಸ್‌ನ ನಡೆಯನ್ನು ಖಂಡಿಸಿ, 23 ದಿನಗಳ ಕಲಾಪದ ಹಣವನ್ನು ಪಡೆಯದಿರಲು ಬಿಜೆಪಿ ಸಂಸದರು ತೀರ್ಮಾನಿಸಿದ್ದೇವೆ. ಕಾಂಗ್ರೆಸ್‌ನ ದುಬುìದ್ಧಿಯನ್ನು ಕಂಡು 44 ಸ್ಥಾನಗಳಿಗೆ ಇಳಿಸಿದ್ದು, ಇದೇ ಬುದ್ಧಿಯನ್ನು ಮುಂದುವರಿಸಿದರೆ ಮತ್ತಷ್ಟು ಹೀನಾಯ ಸ್ಥಿತಿಗೆ ಕಾಂಗ್ರೆಸ್ ತಲುಪಲಿದೆ ಎಂದು ಹೇಳಿದರು.
ಕಾಂಗ್ರೆಸ್‌ನ ಈ ವರ್ತನೆಯನ್ನು ಖಂಡಿಸಿ ದೇಶಾದ್ಯಂತ ಬಿಜೆಪಿ ಸಂಸದರು ಹೋರಾಟ ನಡೆಸುತ್ತಿದ್ದು, ಈ ಹೋರಾಟ ಸಾಂಕೇತಿಕವಾಗಿದ್ದರೂ ದೇಶದ ಜನತೆ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಿದೆ ಎಂದರು.
ಪ್ರತಿಭಟನೆಯಲ್ಲಿ ಮಾಜಿ ಸಚಿವ ಎಸ್.ಎ.ರಾಮದಾಸ್, ಬಿಜೆಪಿ ನಗರಾಧ್ಯಕ್ಷ ಡಾ.ಬಿ.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಎಲ್.ನಾಗೇಂದ್ರ, ಪಾಲಿಕೆ ಸದಸ್ಯ ಮ.ವಿ.ರಾಂಪ್ರಸಾದ್, ಮುಖಂಡರಾದ ಅರುಣ್‌ಕುಮಾರ್‌ಗೌಡ, ಹೇಮಂತ್‌ಕುಮಾರ್, ಡಾ.ಅನಿಲ್ ಥಾಮಸ್ ಸೇರಿದಂತೆ ನೂರಾರು ಮಂದಿ ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.