ಹೊಸದಿಲ್ಲಿ : ತಮಿಳುನಾಡಿನ ಪಲ್ಲಪತ್ತಿ ಪಟ್ಟಣದಲ್ಲಿ 12ನೇ ತರಗತಿಯಲ್ಲಿ ಓದುತಿರುವ ಹದಿನೆಂಟು ವರ್ಷ ಪ್ರಾಯದ ರಿಫಾತ್ ಶಾರೂಕ್ ವಿನ್ಯಾಸಗೊಳಿಸರುವ ವಿಶ್ವದ ಅತ್ಯಂತ ಲಘು ಹಾಗೂ ಚಿಕ್ಕ ಗಾತ್ರದ ಮತ್ತು ಕೇವಲ 0.1 ಕಿಲೋ ಭಾರದ, “ಕಲಾಂಸ್ಯಾಟ್’ ಅನ್ನು ಅಮೆರಿಕದ ನಾಸಾ ಜೂನ್ 21ರಂದು ಬಾಹ್ಯಾಕಾಶಕ್ಕೆ ಕಳುಹಿಸಲಿದೆ.
ಜಾಗತಿಕ ಶೈಕ್ಷಣಿಕ ಕಂಪೆನಿಯಾಗಿರುವ ಐಡೂಡಲ್‌ಲರ್ನಿಂಗ್ ಇಂಕ್ ಮತ್ತು ಅಮೆರಿಕದ ನಾಸಾ ಬಾಹ್ಯಾಕಾಶ ಸಂಸ್ಥೆ ಜಂಟಿಯಾಗಿ ಏರ್ಪಡಿಸಿದ್ದ “ಕ್ಯೂಬ್ಸ್ ಇನ್ ಸ್ಪೇಸ್’ ಸ್ಪರ್ಧೆಯ ಭಾಗವಾಗಿ ಶಾರೂಕ್ ತನ್ನ ವಿಶಿಷ್ಟ ಸ್ಯಾಟಲೈಟ್ ಆನ್ನು ವಿನ್ಯಾಸಗೊಳಿಸಿದ್ದ. ಇದಕ್ಕೆ ದಿವಂಗತ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಹೆಸರನ್ನು ಇರಿಸಿ “ಕಲಾಂ ಸ್ಯಾಟ್’ ಎಂದು ನಾಮಕರಣ ಮಾಡಲಾಗಿತ್ತು.
ಸ್ಮಾರ್ಟ್ ಫೋನ್‌ಗಿಂತಲೂ ಲಘುವಾಗಿರುವ ಕಲಾಂ ಸ್ಯಾಟ್ ಅನ್ನು ಶಾರೂಕ್ ಮರುಬಳಸಲಾದ ಕಾರ್ಬನ್ ಫೈಬರ್ ಪಾಲಿಮರ್ ಬಳಸಿ ತಯಾರಿಸಲಾಗಿದೆ.
ತನ್ನ 12 ನಿಮಿಷಗಳ ಹಾರಾಟದಲ್ಲಿ ಶಾರೂಕ್ ಸಿದ್ಧಪಡಿಸಿರುವ ಸ್ಯಾಟಲೈಟ್ ತಂತ್ರಜ್ಞಾನ ಪ್ರದರ್ಶಕವಾಗಿ ಕೆಲಸ ಮಾಡಲಿದೆ. ಮಾತ್ರವಲ್ಲದೆ ಭವಿಷ್ಯದಲ್ಲಿ ಮಿತವ್ಯಯದ ಬಾಹ್ಯಾಕಾಶ ಯೋಜನೆಗಳನ್ನು ಹಮ್ಮಿಕೊಳ್ಳುವುದಕ್ಕೆ ಇಂಬುಕೊಡಲಿದೆ. ವ್ಯಾಲಪ್ಸ್ ದ್ವೀಪದಲ್ಲಿ ಜೂನ್ 21ರಂದು ಈ ಸ್ಯಾಟಲೈಟನ್ನು ಬಾಹ್ಯಾಕಾಶಕ್ಕೆ ಹಾರಿಸಲಾಗುವುದು.
3ಡಿ ಪ್ರಿಂಟೆಡ್ ಕಾರ್ಬನ್ ಫೈಬರ್‌ನ ಕಾರ್ಯ ನಿರ್ವಹಣೆ ಹೇಗಿರುತ್ತದೆ ಎಂಬುದನ್ನು ತೋರಿಸುವುದು ಈ ಕಲಾಂ ಸ್ಯಾಟ್‌ನ ಮುಖ್ಯ ಪಾತ್ರವಾಗಲಿದೆ ಎಂದು ಶಾರೂಕ್ ಹೇಳಿರುವುದನ್ನು ಉಲ್ಲೇಖೀಸಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.