Advertisement

ಕಲಾಕ್ಷೇತ್ರದಲ್ಲಿ ಕಳೆಗಟ್ಟಿದ ಗ್ರಾಮೀಣ ಸೊಗಡು

12:29 PM Apr 17, 2017 | |

ಬೆಂಗಳೂರು: ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಗ್ರಾಮೀಣ ಸೊಗಡು. ಆವರಣದಲ್ಲಿ ರಾಗಿಯ ರಾಶಿ, ಪಕ್ಕದಲ್ಲಿ ನಿಂತ ಎತ್ತಿನ ಬಂಡಿ, ಅದಕ್ಕೆ ಪೂರಕವಾಗಿ ಡೊಳ್ಳುಕುಣಿತ, ಇದರೊಂದಿಗೆ ಮೇರು ನಟ ಡಾ.ರಾಜ್‌ಕುಮಾರ್‌ ಅವರ ನೆನಪುಗಳ ಬುತ್ತಿಯಿಂದ ಕಳೆಗಟ್ಟಿತ್ತು. ಹೆಸರೇ ಸೂಚಿಸುವಂತೆ ಅದು ಡಾ.ರಾಜ್‌ಕುಮಾರ್‌ ಜಾನಪದ ಹಬ್ಬ. ಈ ಹಬ್ಬಕ್ಕೆ ರಾಜ್‌ಕುಮಾರ್‌ ಅವರ ಸಹೋದರಿ ಎಸ್‌.ಪಿ. ನಾಗಮ್ಮ, ರಾಘವೇಂದ್ರ ರಾಜ್‌ಕುಮಾರ್‌ ದಂಪತಿ, ವರದರಾಜ್‌ ಮತ್ತು ರಾಜ್‌ಕುಮಾರ್‌ ಅವರ ಕುಟುಂಬ ಮತ್ತಷ್ಟು ಮೆರುಗು ತುಂಬಿತು.
 
ರಾಗಿ ಧಾನ್ಯದ ರಾಶಿಗೆ ರಾಜ್‌ಕುಮಾರ್‌ ಕುಟುಂಬ ಪೂಜೆ ಸಲ್ಲಿಸಿತು. ನಂತರ ಡೊಳ್ಳುಕುಣಿತ ಕಲಾವಿದರು ಮನರಂಜಿಸಿದರು. ಈ ಮಧ್ಯೆ ಚಾಮರಾಜನಗರ ಜಿಲ್ಲೆಯ ಮಂಟೇಸ್ವಾಮಿ ಮತ್ತು ಮಲೆಮಹದೇಶ್ವರನನ್ನು ಕುರಿತ ಜನಪದ ಗೀತೆಗಳನ್ನು ಮಕ್ಕಳು ಹಾಡಿದರೆ, ಅದೇ ಜಿಲ್ಲೆಯ ಸಾಹಿತಿಗಳು, ಜನಪದ ತಜ್ಞರು, ಅಭಿಮಾನಿಗಳು ಡಾ.ರಾಜ್‌ ಅವರೊಂದಿಗೆ ಕಳೆದ ಕ್ಷಣಗಳನ್ನು ಮೆಲುಕುಹಾಕಿದರು. 

Advertisement

ಜಾನಪದ ತಜ್ಞ ಡಾ.ಕೃಷ್ಣಮೂರ್ತಿ ಹನೂರು ಮಾತನಾಡಿ, “ಮಲೆಮಹದೇಶ್ವರ ಶ್ರವಣದೊರೆ ಸಂಹಾರಕ್ಕೆ ಹೋಗುವ ಮುನ್ನ ಗುಡಿಸಲಿನಲ್ಲಿ ಮುದ್ದಮ್ಮ ಮಾಡಿಟ್ಟಿದ್ದ ಸೊಪ್ಪಿನ ಸಾರು ಮತ್ತು ಮುದ್ದೆ ತಿಂದು ಮುಂದೆ ಹೋಗುತ್ತಾನೆ. ಅದೇ ರೀತಿ, ದೊಡ್ಡ ಯೂನಿಟ್‌ ಜತೆ ಸಿನಿಮಾ ಶೂಟಿಂಗ್‌ಗೆ ಬಂದಿದ್ದ ರಾಜ್‌ಕುಮಾರ್‌, ಯಾರದೋ ಒಬ್ಬರ ಮನೆಯಲ್ಲಿ ಊಟ ಮಾಡುತ್ತಾರೆ. ಇವು ಸರಳತೆಗೆ ಮಾದರಿಗಳು. ಡಾ.ರಾಜ್‌ಕುಮಾರ್‌ ಅವರು ನಿಷ್ಕಲ್ಮಷವಾಗಿ ಕನ್ನಡಿಗರನ್ನು ಪ್ರೀತಿಸಿದರು ಮತ್ತು ಗೌರವಿಸಿದರು. ಅದಕ್ಕೆ ಪೂರಕವಾಗಿ ಕನ್ನಡಿಗರೂ ಅವರಿಗೆ ಅಷ್ಟೇ ಪ್ರೀತಿ ಕೊಟ್ಟಿದ್ದಾರೆ’ ಎಂದು ಸ್ಮರಿಸಿದರು. 

ರಾಜ್‌ಕುಮಾರ್‌ ಅವರೇ ಹೇಳುವಂತೆ “ನಾನು ನಟಿಸಿದ ಎಲ್ಲ ಪಾತ್ರಗಳೂ ನನ್ನನ್ನು ತಿದ್ದಿದ ಪಾತ್ರಗಳು. ನಾನು ಅಭಿನಯಿಸಿದ್ದೆಲ್ಲವೂ ಅನುಭೂತಿಯೇ’. ರಾಜ್‌ಕುಮಾರ್‌ ಅವರ ತಂದೆ ಪುಟ್ಟಸ್ವಾಮಯ್ಯ ಕೂಡ ರಂಗಭೂಮಿಯಲ್ಲಿ ಅದ್ವಿತೀಯ ಪಾತ್ರಗಳನ್ನು ನಿರ್ವಹಿಸಿ ಸೈ ಎನಿಸಿಕೊಂಡವರು. ಅವರಿಂದ ಸಹಜವಾಗಿಯೇ ಆ ಕಲೆ ಮತ್ತು ಅವರ ವಿನಯ ರಾಜ್‌ಗೆ ಬಳುವಳಿಯಾಗಿ ಬಂದಿದೆ. ನಂತರ ರಂಗಭೂಮಿಯಿಂದ ಸಿನಿಮಾರಂಗ ಪ್ರವೇಶಿಸುವ ಮೂಲಕ ಹೊಸರೂಪ ಕಂಡುಕೊಂಡರು ಎಂದು ಹೇಳಿದರು.  

ನಾ ನೋಡಿದ ಮೊದಲ ಸಿನಿಮಾ: ಸಾಹಿತಿ ಪ್ರೊ.ಕೆ. ಮರುಳಸಿದ್ದಪ್ಪ ಮಾತನಾಡಿ, “ನಾನು ನನ್ನ ಜೀವನದಲ್ಲಿ ನೋಡಿದ ಮೊದಲ ಸಿನಿಮಾ, ಬೇಡರ ಕಣ್ಣಪ್ಪ. ಅದು ಡಾ.ರಾಜ್‌ಕುಮಾರ್‌ ಅವರ ಮೊದಲ ಚಿತ್ರ ಆಗಿರದಿದ್ದರೂ, ಆ ಚಿತ್ರ ಅವರಿಗೆ ಅವರನ್ನು ಚಿತ್ರರಂಗದಲ್ಲಿ ಉಚ್ಛಾ†ಯ ಸ್ಥಿತಿ ತಲುಪಲು ನಾಂದಿಯಾಯಿತು. ರಾಜ್‌ಕುಮಾರ್‌ ಅವರೊಂದಿಗೆ ಊಟ ಮಾಡುವ ಸದವಕಾಶವೂ ನನಗೆ ಸಿಕ್ಕಿತು. ಅತ್ಯಂತ ಅಚ್ಚುಕಟ್ಟಾಗಿ ಊಟ ಮಾಡಿದ ಅವರು, ಕೊನೆಗೆ ಅಡುಗೆ ಮಾಡಿದವರಿಂದ ಹಿಡಿದು ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು. ಅಷ್ಟು ಸಜ್ಜನಿಕೆ ವ್ಯಕ್ತಿತ್ವ ರಾಜ್‌ಕುಮಾರ್‌ ಅವರದ್ದು ಎಂದು ಮೆಲುಕು ಹಾಕಿದರು.

ಅಭಿಮಾನಿಗಳ ದೇವರು: ಜಾನಪದ ತಜ್ಞ ಡಾ.ಬೈರಮಂಗಲ ರಾಮೇಗೌಡ, “ಡಾ.ರಾಜ್‌ಕುಮಾರ್‌, ಅಭಿಮಾನಿಗಳೇ ದೇವರು’ ಎಂದರು. ಅದೇ ರೀತಿ, ಅಭಿಮಾನಿಗಳ ಪಾಲಿಗೆ ಡಾ. ರಾಜ್‌ ಕೂಡ ದೇವರಾದರು ಎಂದರು. ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ಮಾತನಾಡಿ, “ರಾಜ್‌ಕುಮಾರ್‌, ಕನ್ನಡ ಪ್ರೇಕ್ಷಕರನ್ನು ಉನ್ನತ ಸ್ಥಿತಿಗೆ ಕೊಂಡೊಯ್ದರು. ಎನಗಿಂತ ಕಿರಿಯರಿಲ್ಲ ಎಂಬ ಮಾತಿನಂತೆ ತಮ್ಮ ಜೀವನದ ಮೂಲಕ ತೋರಿಸಿಕೊಟ್ಟರು. ಅವರು ಪುರಾಣ ಪುರುಷರಾಗಬೇಕಾದರೆ, ಇನ್ನೊಂದರಡು ಶತಮಾನಗಳು ಹಿಡಿಯುತ್ತದೆ’ ಎಂದು ಹೇಳಿದರು. ದೊಡ್ಡಹುಲ್ಲೂರು ರುಕ್ಕೋಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಂತರ “ನೇಗಿಲಯೋಗಿ ಡಾ.ರಾಜ್‌ಕುಮಾರ್‌’ ಕುರಿತ ಗೋಷ್ಠಿಯಲ್ಲಿ ಕವಿ ಚಂದ್ರಶೇಖರ ಪಾಟೀಲ (ಚಂಪಾ) ಮಾತನಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next