ಕಲಬುರಗಿ: ವಿವಿಎಸ್ ಮೀಡಿಯಾ ಕಲಬುರಗಿ ನಿರ್ಮಿಸಿರುವ ಸ್ಥಳೀಯ ಕಲಾವಿದರೇ ನಟಿಸಿರುವ “ಕಾಲಜ್ಞಾನ’ ಚಲನಚಿತ್ರದ ಆಡಿಯೋ ಶನಿವಾರ ಬಿಡುಗಡೆಯಾಯಿತು.
ಸಿನಿಮಾದ ಹಾಡುಗಳನ್ನು ಅಮೆಜಾನ್ ಪ್ರೈಂ ಸೇರಿದಂತೆ ಎಲ್ಲ ಸಾಮಾಜಿಕ ಜಾಲತಾಣದಲ್ಲಿ ವೀಕ್ಷಿಸಿಬಹುದು. ನಗರದ ಪತ್ರಿಕಾ ಭವನದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಆಡಿಯೋವನ್ನು ಸಿನಿಮಾ ನಿರ್ಮಾಪಕ ಶಂಕರ ಕೋಡ್ಲಾ ಮತ್ತು ನಿರ್ದೇಶಕ, ನಾಯಕ ನಟ ರೂಪೇಶ ಜಿ.ರಾಜ್, ಯುವ ಮುಖಂಡ ಸಂದೇಶ ಕಮಕನೂರ ಬಿಡುಗಡೆ ಮಾಡಿದರು.
ಈ ಕಾರ್ಯಕ್ರಮಕ್ಕೆ ಸಿನಿಮಾಕ್ಕೆ ಕಥೆ ಬರೆದಿರುವ ನಿರ್ಮಾಪಕ ವಿನಾಯಕ ಕೋಡ್ಲಾ, ನಟ ರಂಗಸ್ವಾಮಿ (ಕುರಿರಂಗ), ಸಂಗೀತ ನಿರ್ದೇಶಕ ಅತಿಶಯ ಜೈನ್, ಸಾಹಿತಿ ಹಾಗೂ ಕಲಾವಿದ ಮಹಿಪಾಲರೆಡ್ಡಿ ಮುನ್ನೂರ ಮತ್ತಿತರರು ಸಾಕ್ಷಿಯಾದರು.
ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಿತ್ರದ ನಿರ್ದೇಶಕ ಹಾಗೂ ನಾಯಕ ನಟ ರೂಪೇಶ ರಾಜ್, “ಕಾಲಜ್ಞಾನ’ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ. ಕಲಬುರಗಿ ನಗರ ಹಾಗೂ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಶೂಟಿಂಗ್ ಮಾಡಲಾಗಿದೆ. ಸಿನಿಮಾದಲ್ಲಿ ಬರುವ ಪಾತ್ರಗಳಲ್ಲಿ ಶೇ.80ರಷ್ಟು ಪಾತ್ರಗಳಿಗೆ ಸ್ಥಳೀಯ ಕಲಾದವರಿಗೆ ನಟಿಸಿರುವುದು ವಿಶೇಷ. ಈಗಾಗಲೇ ಸೆನ್ಸಾರ್ ಆಗಿದ್ದ “ಯು/ಎ’ ಪ್ರಮಾಣ ಪತ್ರ ದೊರೆತಿದೆ. ಎಲ್ಲ ವರ್ಗದವರು ಸೇರಿಕೊಂಡು ನೋಡುವಂತ ಸಿನಿಮಾ ಆಗಿದೆ. ಜನವರಿ ತಿಂಗಳಲ್ಲಿ ತೆರೆಗೆ ಬರಲಿದೆ ಎಂದರು.
ಸಂಗೀತ ನಿರ್ದೇಶಕ ಅತಿಶಯ ಜೈನ್ ಮಾತನಾಡಿ, ಸಿನಿಮಾದಲ್ಲಿ ನಾಲ್ಕು ಹಾಡುಗಳಿವೆ. ಎಲ್ಲವೂ ಚೆನ್ನಾಗಿ ಮೂಡಿ ಬಂದಿವೆ ಎಂದರು. ನಿರ್ಮಾಪಕ ವಿನಾಯಕ ಕೋಡ್ಲಾ ಕಥೆ ಮಾತನಾಡಿ, ಸಾಮಾಜಿಕ ಜಾಲತಾಣ ಹೇಗೆ ಬಳಸಬೇಕು. ಆ ಕ್ಷಣಕ್ಕೆ ಜ್ಞಾನ ಬಳಸದೆ ಹೋದರೇ ಎದುರಾಗುವ ಅಪಾಯಗಳು ಇನ್ನಿತರ ಅಂಶಗಳು ಸಿನಿಮಾದಲ್ಲಿವೆ ಎಂದು ಹೇಳಿದರು. ಚಿತ್ರದಲ್ಲಿ ನಟಿಸಿರುವ ವಿಜಯಕುಮಾರ ಗಾಂಗಜಿ, ವಿಜಯಲಕ್ಷ್ಮೀ, ರಕ್ಷಿತಾ ಕುಲಕರ್ಣಿ ಹಾಗೂ ಮತ್ತಿತರರು ಇದ್ದರು.