ಕಲಘಟಗಿ: ತಾಲೂಕಿನ ಗಂಭ್ಯಾಪೂರ ಗ್ರಾಮದಲ್ಲಿ 7 ದಿನಗಳ ಹಿಂದೆ ಅಪರಿಚಿತ ಶವ ತಮ್ಮ ಕುಟುಂಬ ಸದಸ್ಯ ಬಸಪ್ಪ ತಮ್ಮಣ್ಣ ಕಾಳಿ(69) ಅವನದ್ದೇ ಎಂದು ದಫನ್ ಮಾಡಿದ್ದು, ಕಳೆದ ಹಲವು ವರ್ಷಗಳಿಂದ ನಾಪತ್ತೆಯಾಗಿದ್ದ ಅದೇ ವ್ಯಕ್ತಿ ಸೋಮವಾರ ಪ್ರತ್ಯಕ್ಷನಾಗಿ ಗ್ರಾಮಸ್ಥರು ಮತ್ತು ಕುಟುಂಬ ಸದಸ್ಯರನ್ನು ಆಶ್ಚರ್ಯ ಚಕಿತಗೊಳಿಸಿದ ಘಟನೆ ಜರುಗಿದೆ.
ಡಿ. 14ರಂದು ಹುಬ್ಬಳ್ಳಿ ತಾರಿಹಾಳ ರಸ್ತೆಯ ಪಕ್ಕದಲ್ಲಿ ಒಂದು ಅಪರಿಚಿತ ಶವ ಕಂಡು ಬಂದಿತ್ತು. ಗಂಭ್ಯಾಪೂರ ಗ್ರಾಮದ ಓರ್ವ ವ್ಯಕ್ತಿ ಕಾಲ್ನಡಿಗೆಯಲ್ಲಿ ಅದೇ ರಸ್ತೆಯಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಆ ಶವ ಕಂಡು ತಮ್ಮ ಊರಿನ ಬಸಪ್ಪ ಕಾಳಿಯವರದ್ದೇ ಇರಬೇಕೆಂದು ಸಂಶಯಪಟ್ಟು ಊರಿಗೆ ಸುದ್ದಿ ತಲುಪಿಸಿದ್ದ. ಗ್ರಾಮಸ್ಥರು ಘಟನಾ ಸ್ಥಳಕ್ಕೆ ಬರುತ್ತಿದ್ದಂತೆಯೇ ಹುಬ್ಬಳ್ಳಿ
ಗ್ರಾಮೀಣ ಪೊಲೀಸರು ಮುಂದಿನ ಕ್ರಮ ಜರುಗಿಸಲು ಆ ಶವವನ್ನು ಅಲ್ಲಿಂದ ಸಾಗ ಹಾಕಿದ್ದರು.
ಇದನ್ನೂ ಓದಿ:ವಿಜಯಪುರದಲ್ಲಿ ಭೂಕಂಪದ ಅನುಭವ: ರಾತ್ರಿ ವೇಳೆ ಎರಡು ಬಾರಿ ಕಂಪಿಸಿದ ಭೂಮಿ
ಡಿ. 15ರಂದು ಗ್ರಾಮಸ್ಥರು ಕೆಲ ಚಹರೆ ಪಟ್ಟಿ ಗುರುತಿಸಿ ಆ ಅಪರಿಚಿತ ಶವ ಬಸಪ್ಪ ಕಾಳಿಯವರದ್ದೇ ಎಂದು ಸಂಶಯಗೊಂಡು ಪೊಲೀಸರಿಂದ ಆ ಶವ ಪಡೆದು ಗ್ರಾಮಕ್ಕೆ ತಂದು ಬಸಪ್ಪನ ಕುಟುಂಬದವರು ದಫನ್ ಕೂಡಾ ಮಾಡಿದ್ದರು. ಈಗ ಅದೇ ವ್ಯಕ್ತಿ ಕಣ್ಮುಂದೆ ಬಂದಿದ್ದು, ಕುಟುಂಬದವರಿಗೆ ಒಂದೆಡೆ ಸಂತೋಷ, ಇನ್ನೊಂದೆಡೆ ಪೊಲೀಸರಿಂದ ತಮಗೆ ತೊಂದರೆಯಾಗುವುದೇ ಎಂಬ ಚಿಂತೆಯೂ ಕಾಡುತ್ತಲಿದೆ.