ಕಾನೂರು ಜಲಪಾತವನ್ನು ನೋಡಿ ವಾಪಸ್ಸು ಬರುತ್ತಿದ್ದಾಗ ಆಗಲೇ ಘಂಟೆ ಐದಾಗಿತ್ತು. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಮತ್ತು ಕಾರವಾರದ ವ್ಯಾಪ್ತಿಗಳು ಸೇರುವ ಸ್ಥಳದಲ್ಲೇ ಈ ಕಾನೂರು ಜಲಪಾತವಿದೆ. ಬೆಳಿಗಿನಿಂದ ಸಾಕಷ್ಟು ಚಾರಣಿಸಿ ಸುಸ್ತಾಗಿದ್ದರಿಂದ ಹೆಜ್ಜೆಗಳನ್ನು ಲೆಕ್ಕಹಾಕುವ ಪರಿಸ್ಥಿತಿ ಉಂಟಾಗಿತ್ತು. ಅದಾಗಲೇ ಸ್ನೇಹಿತ ಹರೀಶ ಶುರುಹಚ್ಚಿಕೊಂಡಿದ್ದ – ಅದೇನೆಂದರೆ, ಇನ್ನು ಸ್ವಲ್ಪ ದೂರದಲ್ಲಿ ಕಳಚೆ ಅನ್ನೋ ಊರಿದೆ. ಅಲ್ಲಿರುವ ಕಲ್ಲು ನೋಡದಿದ್ದರೆ ನಮ್ಮ ಪ್ರವಾಸ ಅಪೂರ್ಣ ಅಂತ. ಈ ಪ್ರವಾಸಕ್ಕೆ ಬಹಳಷ್ಟು ದಿನಗಳಿಂದ ಸ್ಕೆಚ್ ಹಾಕಿದ್ದರಿಂದ ಮತ್ತೂಮ್ಮೆ ಇಲ್ಲಿಗೆ ಬರುವ ಸಾಧ್ಯತೆ ಕಡಿಮೆಯೇ ಎಂಬುದು ಖಚಿತವಾಗಿತ್ತು. ಹೀಗಿರುವಾಗ ಇನ್ನೊಂದು ಸ್ವಲ್ಪ ದೂರ ಅಷ್ಟೇ ಅಲ್ವಾ? ಸರಿ, ಹೋಗೇ ಬಿಡೋಣವೆಂದು ಎಲ್ಲರೂ ಒಪ್ಪಿದರು. ಮತ್ತೆ ಬೈಕನ್ನೇರಿ ಎಲ್ಲರೂ ಕಳಚೆಯತ್ತ ಸಾಗಿದೆವು. ಅಂದಹಾಗೆ, ಈ ಕಳಚೆಯೆಂಬ ಹಳ್ಳಿ ಇರುವುದು ಯಲ್ಲಾಪುರದ ತುದಿಯಲ್ಲಿ . ಕಾರವಾರದಿಂದ ಪ್ರಯಾಣಿಸುವವರು ಕೈಗಾ – ಬಾರೆ – ಯಲ್ಲಾಪುರ ರಸ್ತೆಯಲ್ಲಿ ಸಾಗಿ ನೇರವಾಗಿ ಕಳಚೆಗೆ ಹೋಗಬಹುದು. ಯಲ್ಲಾಪುರದಿಂದ ಅಂಕೋಲಾ ರಸ್ತೆಯಲ್ಲಿ ಸಾಗುವಾಗ ಸಿಗುವ ಮೊದಲ ಗ್ರಾಮವಾದ ಇಡಗುಂದಿಯಿಂದ ಬಲಕ್ಕೆ ಸಿಗುವ ಅರಣ್ಯ ಚೆಕ್‌ಪೋಸ್ಟ್‌ನಿಂದ ಕೈಗಾ ರಸ್ತೆಯಲ್ಲಿ ಸಾಗಬೇಕು. ದಟ್ಟ ಅರಣ್ಯವನ್ನು ಸೀಳಿ ಸಾಗುವ ರಸ್ತೆಯ ಅಕ್ಕಪಕ್ಕದಲ್ಲಿರುವ ಮರಗಳಿಂದ ಹಿತಾನುಭವ.
ರಸ್ತೆಗುಂಟ ಅಲ್ಲಲ್ಲಿ ಇಣುಕುತ್ತಿದ್ದ ರಸ್ತೆಫಲಕಗಳ ಕಾರಣ ಕಳಚೆ ಹಳ್ಳಿಯನ್ನು ಹುಡುಕುವುದು ಕಷ್ಟವಾಗಲಿಲ್ಲ. ದಾರಿಯಲ್ಲೇ ಸಿಕ್ಕಿದ್ದ ಭಟ್ಟರ ಖಾನಾವಳಿಯಲ್ಲಿ ಊರಿನ ದಾರಿ ಕೇಳಲಾಗಿ “ಹಿಂಗೇ ಮುಂದೆ ಹೋಗ್ರಿ’ ಎಂದು ಕೈತೋರಿಸಿದರು. ಅಲ್ಲಿಂದ ಸ್ವಲ್ಪವೇ ದೂರ ಸಾಗಿದಾಕ್ಷಣ ಧುತ್ತನೆ ಎದುರಾಗಿದ್ದು ಈ ಕಲ್ಲು. ಲಗುಬಗನೇ ಮೆಟ್ಟಿಲನ್ನೇರಿ ಕಲ್ಲಿನ ಮೇಲ್ಭಾಗಕ್ಕೆ ಬಂದೆವು. ಹೌದು, ಹರೀಶ ಹೇಳಿದ್ದುದು ಸರಿಯಾಗೇ ಇತ್ತು. ಸುತ್ತಲೂ ಎಲ್ಲಿ ನೋಡಿದರಲ್ಲಿ ಹಸಿರೋ ಹಸಿರು, ಆ ದಟ್ಟ ಅರಣ್ಯವನ್ನು ಸೀಳಿ ನುಗ್ಗುವ ಕಾಳಿನದಿ, ಚೀಂವ್ ಗುಡುತ್ತಿರುವ ಖಗಸಮೂಹ , ಎಲ್ಲಿಂದಲೋ ಬಂದು ನಿಧಾನವಾಗಿ ಅಪ್ಪಿಕೊಳ್ಳುವ ತಂಗಾಳಿ… ಆಹಾ…ಸ್ವರ್ಗಕ್ಕೆ ಮೂರೇ ಗೇಣು. ಕಲ್ಲಿನ ಮೇಲಿನಿಂದ ನೋಡಿದಾಗ ಕೆಂಪು ಕಿತ್ತಳೆ ಹಣ್ಣಿನಂತೆ ಕಂಗೊಳಿಸುತ್ತಿದ್ದ ಮುಳುಗುತ್ತಿದ್ದ ಸೂರ್ಯನಂತೂ ನಮ್ಮ ಹಿತಾನುಭವಕ್ಕೆ ಹೊಸ ಭಾಷ್ಯ ಬರೆದಿದ್ದ.
ಇಲ್ಲಿರುವುದು ಏಕಶಿಲೆಯ ಕಲ್ಲು. ಏಕಶಿಲೆ ಎಂದಾಕ್ಷಣ ಥಟ್ಟನೆ ನೆನಪಿಗೆ ಬರುವುದು ಯಾಣ. 390 ಅಡಿ ಎತ್ತರದ ಯಾಣದ ಶಿಖರಕ್ಕೆ ಹೋಲಿಸಿದರೆ 80 ಅಡಿಯ ಕಳಚೆಯ ಕಲ್ಲಿನ ಗಾತ್ರ ಚಿಕ್ಕದಾಗಿದ್ದರೂ ರಚನೆಯಲ್ಲಿ ಸಾಮ್ಯತೆ ಇದೆ. ಅಲ್ಲಿಯಂತೆಯೇ ರುದ್ರರಮಣೀಯ ನೈಸರ್ಗಿಕ ತಾಣದಲ್ಲಿದೆ. ಶಿಲೆಯ ಮೈ ಪೂರ್ತಿ ಹಸಿರು ಹೊದ್ದುಕೊಂಡಿದೆ. ಅಲ್ಲಲ್ಲಿ, ಪುಟ್ಟ ಪುಟ್ಟ ಗಿಡಗಳು ತಲೆದೂಗುತ್ತಿದ್ದವು. ದೂರದಿಂದ ನೋಡಿದರೆ, ಯಾರೋ ನಿಂತಂತೆಯೂ, ಹತ್ತಿರ ಹೋದಂತೆ ಸಿನಿಮಾ ಸೆಟ್‌ಹಾಕಿದ ಕಂಬದಂತೆಯೂ ಕಾಣಿಸುವ ಈ ಪ್ರಕೃತಿ ವೈಭವ, ಬುಡದ ಬಳಿ ನಿಂತು ಮೈಯನ್ನು ಸವರಿದಾಗ ಮಾತ್ರ ಕಲ್ಲು ಅನ್ನೋದುತಿಳಿದದ್ದು. ಶಿಲೆಯ ಬೆನ್ನ ಮೇಲೆ ಪ್ರಕೃತಿ ಕೆತ್ತನೆ ಮಾಡಿದೆ. ಎಲ್ಲೂ ಕೂಡ ಸಮತಟ್ಟು, ನುಣ್ಣಗಿಲ್ಲ. ಶಿಲೆಯ ಹಿಂದಿರುವ ಕೊಡಸಳ್ಳಿ ಆಣೆಕಟ್ಟಿನ ಹಿನ್ನೀರಿನ ಸೊಬಗಿನಿಂದ ಇದರ ಸೌಂದರ್ಯ ಇಮ್ಮಡಿಸಿದೆ. ಎದುರಿಗೆ ನಿಂತಾಗ ನಿಶ್ಯಬ್ದದಲ್ಲಿ ಏಳುತ್ತಿದ್ದ ಗಾಳಿಯ ತರಂಗಗಳದ್ದೇ ಹೊಸ ಭಾಷೆಯಾಗಿತ್ತು. ನಮಗಾರಿಗೂ ಅದು ಅರ್ಥವಾಗದೇ ಇರುವುದರಿಂದ ಹಾಗೇ ನೋಡುತ್ತಾ ತಲ್ಲೀನರಾದೆವು.
ಆ ಹೊತ್ತಿಗೆ, ಹೊಟ್ಟೆ ಚುರುಗುಟ್ಟಿತು. ವಾಪಸ್ಸು ಬರುವಾಗ ಭಟ್ಟರ ಖಾನಾವಳಿಯಲ್ಲೊಂದು ಸ್ಟಾಪ್ ಕೊಟ್ಟೆವು. ಭಟ್ಟರನ್ನು ಮಾತಿಗೆಳೆದೆರೆ- “ಈ ಕಲ್ಲಿಗೆಷ್ಟು ವಯಾÕಯ್ತು ನಂಗೆ ಗೊತ್ತಿಲಾÅ. ನನ್ನ ಮುತ್ತಜ್ಜನ ಕಾಲದಿಂದ ಇಲ್ಲೆ„ತಿ.ನಾವು ಊರೌರು ಇದ್ಕೆ ದೇವಕಲ್ಲು ಅಂತಿದ್ರು’ ಎಂದರು ಭಟ್ಟರು. ಅಂದಹಾಗೆ, ಇಲ್ಲಿ ವರ್ಷಕ್ಕೊಮ್ಮೆ ಉತ್ಸವಕೂಡ ನಡೆಯುತ್ತದೆ. ದೀಪಾವಳಿಯಲ್ಲಿ ಜಾನುವಾರುಗಳ ರಕ್ಷಣೆ ಬಗ್ಗೆ ಸ್ಥಳೀಯರಿಂದ ಈ ಕಲ್ಲಿಗೆ ವಿಶೇಷಪೂಜೆಯೂ ಆಗುವುದುಂಟು. ಗುಡ್ಡದಲ್ಲಿ ಸ್ಥಿತವಾಗಿರುವ ಹುಲಿರಾಯ ತಮ್ಮ ಜಾನುವಾರುಗಳನ್ನು ರಕ್ಷಿಸುತ್ತಾನೆಂಬುದು ಊರವರ ಭಾವನೆ.
ವಾಪಸ್ಸು ಬಂದ ಮೇಲೆ ಕಳಚೆಯ ಈ ಕಲ್ಲಿನ ಬಗ್ಗೆ ವಿಚಾರಿಸಲಾಗಿ ಎಲ್ಲೂ ಏನೂ ಮಾಹಿತಿಯೂ ದೊರೆಯಲಿಲ್ಲ. ಈ ಸ್ಥಳಕ್ಕೆ ಹೋದರೆ ಬೋನಸ್ ಉಂಟು. ಕಾನೂರು (ದೇವಕಾರ) ಜಲಪಾತ , ಕದ್ರಾ ಆಣೆಕಟ್ಟುಗಳನ್ನೂ ನೋಡಬಹುದು. ಕಳಚೆ ಕಲ್ಲಿರುವ ಪ್ರದೇಶಕ್ಕೆ ಭೇಟಿ ನೀಡುವರಿಗೆ, ಶಿಲೆಯ ಮೇಲೆ ನಿರ್ಮಿಸಿರುವ ವೀಕ್ಷಕರ ಗ್ಯಾಲರಿ (ವ್ಯೂ ಪಾಯಿಂಟ್) ಯಲ್ಲಿ ನಿಂತು ಸೂರ್ಯಾಸ್ತ ವನ್ನು ಕಣ್ತುಂಬಿಕೊಳ್ಳುವ ಅಪೂರ್ವ ಅವಕಾಶವೂ ಉಂಟು
ಸುನೀಲ ಬಾರಕೂರ
ಚಿತ್ರ: ಹರೀಶ ಕೂಳೂರು