Advertisement
ಪ್ರೌಢಶಾಲೆಗಳಲ್ಲಿ ವಿಷಯವಾರು ಶಿಕ್ಷಕರನ್ನು ನಿಯೋಜಿಸಿ ಹೆಚ್ಚುವರಿಯಾಗಿರುವವರನ್ನು ಶಿಕ್ಷಕರ ಕೊರತೆ ಇರುವ ಶಾಲೆಗಳಿಗೆ ನಿಯುಕ್ತಿಗೊಳಿಸಲು ಕೌನ್ಸೆಲಿಂಗ್ ಪ್ರಕ್ರಿಯೆ ನಡೆಯುತ್ತಿದೆ. ಜಿಲ್ಲಾ ಮಟ್ಟದಲ್ಲಿ ವಿಷಯವಾರು ಶಿಕ್ಷಕರು ಭರ್ತಿಯಾದ ಹಿನ್ನೆಲೆಯಲ್ಲಿ ವಿಭಾಗ ಮಟ್ಟದಲ್ಲಿ ಕೌನ್ಸೆಲಿಂಗ್ ಮಾಡಲಾಗುತ್ತಿದೆ. ಒಂದು ಜಿಲ್ಲೆಯಿಂದ ಮತ್ತೂಂದು ಜಿಲ್ಲೆಗೆ ವರ್ಗಗೊಂಡರೆ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಶಿಕ್ಷಕರು ಅಳಲು ತೋಡಿಕೊಳ್ಳುತ್ತಿದ್ದಾರೆ.
Related Articles
Advertisement
ಮೇಲಾಧಿಕಾರಿಗಳು ತಮಗೆ ಬೇಕಾದ ಶಿಕ್ಷಕರನ್ನು ಶಾಲೆಗಳಲ್ಲಿ ಉಳಿಸಿಕೊಂಡು ಬೇರೆವರೆಗೆ ಹೆಚ್ಚುವರಿ ತೋರಿಸುತ್ತಿದ್ದಾರೆ. ಕೆಲವೊಮ್ಮೆ ತಂತ್ರಾಂಶದಲ್ಲಿ ಶಿಕ್ಷಕರಿಂದಾದ ತಪ್ಪುಗಳನ್ನು ತಿದ್ದುಪಡಿ ಮಾಡುವಲ್ಲೂ ಅಲಕ್ಷ್ಯತನ ತೋರುತ್ತಿದ್ದಾರೆ ಎಂದು ಕೆಲ ಶಿಕ್ಷಕರು ಆರೋಪಿಸಿದರು.
ವಿನಾಯ್ತಿ ಇಲ್ಲ: ಶಿಕ್ಷಕರ ವರ್ಗಾವಣೆ ನಿಯಂತ್ರಣ ನಿಯಮಗಳ ಪ್ರಕಾರ ಗಂಭೀರ ಸ್ವರೂಪದ ಕಾಯಿಲೆ (ಹೃದಯ, ಕಿಡ್ನಿ ಸಂಬಂಧಿ, ಕ್ಯಾನ್ಸರ್, ಎಚ್ಐವಿ) ಹೊಂದಿದ ಹೆಚ್ಚುವರಿ ಶಿಕ್ಷಕರು ಅಥವಾ ಶಿಕ್ಷಕರ ಪತ್ನಿಯಾಗಲಿ, ಮಕ್ಕಳಾಗಲಿ ಇದ್ದರೆ ಅವರನ್ನು ವರ್ಗಾವಣೆಗೆ ಪರಿಗಣಿಸಲು ಸಾಧ್ಯವಿಲ್ಲ. ಶೇ.40ಕ್ಕಿಂತ ಹೆಚ್ಚಿನ ಅಂಗವಿಕಲತೆಯುಳ್ಳ ಶಿಕ್ಷಕರೂ ಕೂಡ ಕೌನ್ಸೆಲಿಂಗ್‌ನಲ್ಲಿ ಭಾಗವಹಿಸುವಂತಿಲ್ಲ. ಸರ್ಕಾರಿ ನೌಕರ ದಂಪತಿ (ಶಿಕ್ಷಕರ ಪತಿ ಅಥವಾ ಪತ್ನಿ)ಗೂ ವರ್ಗಾವಣೆಯಿಂದ ವಿನಾಯ್ತಿ ನೀಡಬೇಕು. ಆದರೆ, ಇದ್ಯಾವುದನ್ನು ಪರಿಗಣಿಸದೆ ಹೆಚ್ಚುವರಿ ಶಿಕ್ಷಕರ ವರ್ಗಾವಣೆ ನಡೆಸಲಾಗುತ್ತಿದೆ ಎಂದು ಇನ್ನು ಕೆಲ ಶಿಕ್ಷಕರು ದೂರಿದರು.
ನಮ್ಮ ಮಕ್ಕಳ ಭವಿಷ್ಯವೇನು?: ವರ್ಗಾವಣೆ ಕೌನ್ಸಿಲಿಂಗ್ ಪ್ರಕ್ರಿಯೆಗಾಗಿ ಕೆಲ ಶಿಕ್ಷಕರು ತಮ್ಮ ಪುಟ್ಟ ಮಕ್ಕಳೊಂದಿಗೆ ಬಂದಿದ್ದರು. ‘ಎಂಟು ವರ್ಷ ಕಾಲ ಬಳ್ಳಾರಿ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿದ್ದೇವೆ. ಎರಡು ವರ್ಷಗಳ ಹಿಂದೆಯಷ್ಟೇ ಕಲಬುರಗಿಗೆ ಬಂದಿದ್ದೇನೆ. ಈಗ ಮತ್ತೆ ಹೆಚ್ಚುವರಿ ಶಿಕ್ಷಕರ ಹೆಸರಲ್ಲಿ ಮತ್ತೂಂದು ಜಿಲ್ಲೆಗೆ ವರ್ಗಾವಣೆಗೊಂಡರೆ ನನ್ನ ಮಕ್ಕಳ ಶಿಕ್ಷಣ, ಭವಿಷ್ಯದ ಗತಿಯೇನು’ ಎಂದು ಶಿಕ್ಷಕಿಯೊಬ್ಬರು ಪ್ರಶ್ನಿಸಿದರು.
ಮುಖ್ಯ ಶಿಕ್ಷಕರ ಬಡ್ತಿ ನೀಡಿ: ಕಳೆದ ನಾಲ್ಕು ವರ್ಷಗಳಿಂದ ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ ನೀಡಿಲ್ಲ. ಒಂದು ವೇಳೆ ಸಹ ಶಿಕ್ಷಕರಿಗೆ ಬಡ್ತಿ ನೀಡಿದಲ್ಲಿ ಹೆಚ್ಚುವರಿ ಶಿಕ್ಷಕರು ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಆಯಾ ಶಾಲೆಗಳಲ್ಲೇ ಶಿಕ್ಷಕರು ಉಳಿಯುತ್ತಾರೆ. ಹೀಗಾಗಿ ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ ನೀಡುವ ಪ್ರಕ್ರಿಯೆಗೆ ಇಲಾಖೆ ಚಾಲನೆ ನೀಡಬೇಕೆಂಬ ವಾದವೂ ಕೇಳಿಬಂತು.