Advertisement

ಬಾಲಕಿ ಅತ್ಯಾಚಾರಕ್ಕೆ ಸಿಡಿದೆದ್ಧ ಜನತೆ

11:50 AM Dec 04, 2019 | |

ಕಲಬುರಗಿ: ಚಿಂಚೋಳಿ ತಾಲೂಕಿನ ಯಾಕಾಪುರ ಗ್ರಾಮದಲ್ಲಿ ಎರಡನೇ ತರಗತಿ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ದಾರುಣ ಘಟನೆಯನ್ನು ವಿವಿಧ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ.

Advertisement

ಅಖೀಲ ಭಾರತ ಜನವಾದಿ ಮಹಿಳಾ ಸಂಘಟನೆ, ಪ್ರಜ್ಞಾ ಕಾನೂನು ಸಲಹಾ ಸಮಿತಿ, ಮಾನವ ಹಕ್ಕುಗಳ ಹೋರಾಟಗಾರರು ಬಾಲಕಿ ಮೇಲೆ ನಡೆಸಿದ ಕೃತ್ಯ ಆಘಾತಕಾರಿಯಾಗಿದ್ದು, ಮಾನವ ಜನಾಂಗ ತಲೆ ತಗ್ಗಿಸುವಂತೆ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ದೇಶದಲ್ಲಿ ಮಹಿಳೆಯರು, ಮಕ್ಕಳು ಮೇಲೆ ಅತ್ಯಾಚಾರ, ಕೊಲೆಗಳಂತ ದೌರ್ಜನ್ಯಗಳ ಸಂಖ್ಯೆ ಹೆಚ್ಚುತ್ತಿದೆ. ಆದರೆ, ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಹಾಗೂ ಮಹಿಳೆಯರ ಮೇಲಿನ ಬಲಾತ್ಕಾರ ತಡೆಯಲು ಸರ್ಕಾರಗಳು ಕಠಿಣ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿರುವುದು ಖಂಡನೀಯವಾಗಿದೆ.

ಮೇಲಾಗಿ ಆಡಳಿತ ವರ್ಗ, ರಾಜಕಾರಣಿಗಳ ಮೇಲೂ ಮಹಿಳಾ ದೌರ್ಜನ್ಯ ಪ್ರಕರಣಗಳು ಅಧಿಕವಾಗುತ್ತಿದ್ದು ನಾಚಿಕೆಗೇಡಿನ ವಿಷಯವೇ ಸರಿ ಎಂದು ಹೋರಾಟಗಾರ್ತಿಯರಾದ ಕೆ. ನೀಲಾ, ನಂದಾದೇವಿ ಮಂಗೊಂಡಿ, ಅಶ್ವಿ‌ನಿ ಮದನಕರ್‌, ಅಮೀನಾ ಬೇಗಂ, ಚಿಂತಕ ಡಾ| ಪ್ರಭು ಖಾನಾಪುರೆ ಮತ್ತಿತರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಧಿಕಾರದಲ್ಲಿರುವ ಅನೇಕ ನಾಯಕರೇ ಅತ್ಯಾಚಾರದ ಆರೋಪಗಳನ್ನು ಎದುರಿಸುತ್ತಿದ್ದಾರೆ. ಆಡಳಿತ ವ್ಯವಸ್ಥೆಯಲ್ಲಿಯೇ ಮಹಿಳಾ ವಿರೋಧಿ ಧೋರಣೆ ಹಾಸು ಹೊಕ್ಕಾಗಿದೆ. ಕೆಲವು ಪ್ರಕರಣಗಳಲ್ಲಿ ತ್ವರಿತ ಶಿಕ್ಷೆ ವಿಧಿಸುವಲ್ಲಿ ವಿಳಂಬವಾಗುತ್ತಿರುವುದರಿಂದಲೇ ಇಂತಹ ಪ್ರಕರಣಗಳು ಹೆಚ್ಚುತ್ತಿವೆ. ಇಂತಹ ಕೃತ್ಯಗಳನ್ನು ತಡೆಗಟ್ಟುವಲ್ಲಿ ರಾಜಕೀಯ ಇಚ್ಛಾಶಕ್ತಿ ಕೊರತೆ ಕಾಡುತ್ತಿದೆ ಎಂದು ಕಿಡಿಕಾರಿದ್ದಾರೆ.

Advertisement

ಗಲ್ಲಿಗೆ ಹಾಕಿ: ಜಿಲ್ಲೆಯ ಯಾಕಾಪುರದ ಬಾಲಕಿ ಪ್ರಕರಣ, ಹೈದ್ರಾಬಾದ್‌ನ ಪಶುವೈದ್ಯೆ ಪ್ರಕರಣ ಹಾಗೂ ತಮಿಳುನಾಡಿನ ಯುವತಿ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣಗಳು ದೇಶದ ನಾಗರಿಕರನ್ನು ಬೆಚ್ಚಿ ಬೀಳಿಸುವಂತೆ ಮಾಡಿವೆ. ಅದರಲ್ಲೂ ಪುಟ್ಟ ಕಂದಮ್ಮಳ ಮೇಲೆ ನಡೆದಿದ್ದು, ಪೈಶಾಚಿಕ ಕೃತ್ಯವಾಗಿದೆ. ಇಂತಹ ಆರೋಪಿಗಳನ್ನು ಗಲ್ಲಿಗೆ ಹಾಕಬೇಕೆಂದು ಮಾನವ ಹಕ್ಕುಗಳ ಹೋರಾಟಗಾರರಾದ ರಿಯಾಜುದ್ದೀನ್‌ ಹಾಗೂ ಇತರರು ಆಗ್ರಹಿಸಿದ್ದಾರೆ.

ಕಾಮುಕರ ಕುಕೃತ್ಯಕ್ಕೆ ಅಮಾಯಕ ಜೀವಗಳು ಬಲಿಯಾಗಿವೆ. ಇವರ ಸಾವಿಗೆ ನ್ಯಾಯ ಸಿಗಬೇಕು. ಈ ನಿಟ್ಟಿನಲ್ಲಿ ಅತ್ಯಾಚಾರ, ಕೊಲೆ ಪ್ರಕರಣಗಳ ವಿಚಾರಣೆಯನ್ನು ನ್ಯಾಯಾಲಯಗಳು ಪ್ರಥಮಾದ್ಯತೆ ಮೇರೆಗೆ ನಡೆಸಬೇಕು. ಯಾವುದೇ ಜಾತಿ, ಜನಾಂಗ ನೋಡದೆ, ರಾಜಕೀಯಗೊಳಿಸದೆ ಅತ್ಯಾಚಾರಿಗಳನ್ನು ನೇಣಿಗೇರಿಸಬೇಕು. ಸಂತ್ರಸ್ತ ಕುಟುಂಬಗಳಿಗೆ ಸೂಕ್ತ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಗಳಿಗೆ ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next