ಕಲಬುರಗಿ: ಜಿಲ್ಲೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ 2016-17 ರಿಂದ 2018-19ನೇ ಸಾಲಿನ ವರೆಗೆ ಕೈಗೊಂಡಿರುವ ಕಾಮಗಾರಿಗಳನ್ನು ಕಾಲಮಿತಿಯಲ್ಲಿಯೇ ಪೂರ್ಣಗೊಳಿಸಲು ಈ ಹಿಂದೆಯೇ ಗಡುವು ನೀಡಿದರೂ ಇದುವರೆಗೆ ಪೂರ್ಣಗೊಳಿಸದೇ ಇರುವುದಕ್ಕೆ ಮಂಡಳಿ ಕಾರ್ಯದರ್ಶಿ ಸುಬೋಧ ಯಾದವ ತೀವ್ರ ಬೇಸರ ವ್ಯಕ್ತಪಡಿಸಿ, ಅನುಮೋದನೆಯಾದ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಅನುಷ್ಠಾನ ಏಜೆನ್ಸಿಗಳಿಗೆ ತಾಕೀತು ಮಾಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಮಂಡಳಿಯ ಅನುದಾನದ ಪ್ರಗತಿಯಲ್ಲಿರುವ ಕಾಮಗಾರಿ ಹಾಗೂ ಇನ್ನು ಪ್ರಾರಂಭಿಸದ ಕಾಮಗಾರಿಗಳ ಬಗ್ಗೆ ಕರೆದಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆರ್ಥಿಕ ವರ್ಷದ ಕೊನೆವರೆಗೂ ಕಾಮಗಾರಿ ಆರಂಭಿಸದೇ ಕೊನೆ ಹಂತದಲ್ಲಿ ಕೆಲಸಗಳನ್ನು ಕೈಬಿಡುವಂತೆ ಅಥವಾ ಬದಲಾಯಿಸುವಂತೆ ಪ್ರಸ್ತಾವನೆ ಸಲ್ಲಿಸುವ ಕಾರ್ಯಶೈಲಿ ಒಪ್ಪುವಂತದ್ದಲ್ಲ. ಇಂತಹ ಮನೋಭಾವನೆ ಆಡಳಿತದ ಮೇಲೆ ಕೆಟ್ಟ ಪರಿಣಾಮ ಬೀಳುತ್ತದೆ. ಅಧಿಕಾರಿಗಳು ಇಂತಹ ರೂಢಿ ಬದಲಾಯಿಸಿಕೊಳ್ಳಬೇಕು ಎಂದರು.
ಕಲಬುರಗಿ ಮತ್ತು ಬೀದರ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳ ಹಿಂದೆ ಆರಂಭಿಸಿದ ಕಾಮಗಾರಿಗಳಲ್ಲಿ ಕೆಲವು ಪ್ರಗತಿಯಲ್ಲಿದ್ದರೇ, ಇನ್ನು ಕೆಲವು ಕೆಲಸಗಳೇ ಆರಂಭಗೊಂಡಿಲ್ಲ. ಈ ಭಾಗದ ಇತರೆ ಜಿಲ್ಲೆಗಳು ಹಳೆ ವರ್ಷದ ಕಾಮಗಾರಿಗಳನ್ನು ಪೂರ್ಣಗೊಳಿಸಿ ಪ್ರಸಕ್ತ ಸಾಲಿನ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದಾರೆ ಎಂದು ಹೇಳಿದರು.
ಕಲಬುರಗಿ ಜಿಲ್ಲೆಯಲ್ಲಿ ಮಂಡಳಿಯಿಂದ 2014-15ನೇ ಸಾಲಿನಿಂದ 2019-20ನೇ ಸಾಲಿನ ವರೆಗೆ ವಿವಿಧ ಅನುಷ್ಠಾನ ಏಜೆನ್ಸಿಗಳ ಮೂಲಕ ಒಟ್ಟಾರೆ 3717 ಕಾಮಗಾರಿಗಳನ್ನು ಕೈಗೆತ್ತಿಕೊಂಡು 3505 ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಇವುಗಳ ಅನುಷ್ಠಾನಕ್ಕೆ 74332.85 ಲಕ್ಷ ರೂ. ಅನುದಾನ ಹಂಚಿಕೆ ಮಾಡಿ 70494.85 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ.ಇದುವರೆಗೆ 2258 ಕಾಮಗಾರಿಗಳು ಪೂರ್ಣಗೊಂಡಿದೆ. 793 ಕಾಮಗಾರಿಗಳು ಪ್ರಗತಿಯಲ್ಲಿದರೆ 666 ಕಾಮಗಾರಿಗಳು ಆರಂಭವೇ ಆಗಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನಂತರ ಬಿಡುಗಡೆಯಾದ ಅನುದಾನದಲ್ಲಿ ಇಲ್ಲಿಯವರೆಗೆ 44249.58 ಲಕ್ಷ ರೂ. ಖರ್ಚು ಮಾಡಲಾಗಿದೆ ಎಂದು ತಿಳಿಸಿದರು.
ಸರ್ಕಾರಿ ಶಾಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಬೋರವೆಲ್ ಕೊರೆಸಿದರೂ ನೀರು ಬರುತ್ತಿಲ್ಲ ಎಂದು ಕೈಕಟ್ಟಿ ಕುಳಿತುಕೊಳ್ಳುವ ಬದಲು ಸಮೀಪದ ಜಲಮೂಲಗಳಿಂದ ಪೈಪ್‌ಲೈನ್ ಅಳವಡಿಸಿ ಶಾಲೆಗಳಿಗೆ ನೀರು ಪೂರೈಸುವ ಕೆಲಸ ಮಾಡಬೇಕು ಎಂದು ಅನುಷ್ಠಾನ ಏಜೆನ್ಸಿಗಳಿಗೆ ಸುಬೋಧ ಯಾದವ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಬಿ.ಶರತ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ| ಪಿ. ರಾಜಾ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಉಪ ಕಾರ್ಯದರ್ಶಿ ಡಾ| ಬಿ. ಸುಶೀಲಾ, ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ತುಕಾರಾಮ ಪಾಂಡ್ವೆ, ಸಹಾಯಕ ಆಯುಕ್ತ ಡಾ| ಗೋಪಾಲಕೃಷ್ಣ ಬಿ., ಮಂಡಳಿ ಜಂಟಿ ನಿರ್ದೇಶಕ ಬಸವರಾಜ, ಅಧೀಕ್ಷಕ ಅಭಿಯಂತ ಶಿವಶಂಕ್ರಪ್ಪ ಗುಡಗುಂಟಿ ಹಾಗೂ ವಿವಿಧ ಅನುಷ್ಠಾನ ಏಜೆನ್ಸಿಗಳ ಅಧಿಕಾರಿಗಳು ಹಾಜರಿದ್ದರು.