ಕಲಬುರಗಿ: ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಯ ಜಾತ್ರೆಗಳಲ್ಲಿನ ಮಳಿಗೆ ಸ್ಥಾಪನೆಯಲ್ಲಿ ಮುಸ್ಲಿಂ ರಿಗೆ ನಿರ್ಬಂಧ ಹೇರಿರುವ ಕುರಿತಾಗಿ ಮಾಹಿತಿ ತರಿಸಿ ನಂತರ ಅವಲೋಕನ ನಡೆಸಿ ಮುಂದಿನ ಹೆಜ್ಜೆ ಇಡಲಾಗುವುದು ಎಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಮ್ ಹೇಳಿದರು.
ಆಯೋಗದ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತ್ರೆಗಳ ಮಳಿಗೆಗಳನ್ನು ಮುಸ್ಲಿಂ ವ್ಯಾಪಾರಸ್ಥರಿಗೆ ನೀಡಿಲ್ಲ ಎಂಬುದನ್ನು ಮಾಧ್ಯಮದಲ್ಲೇ ನೋಡಿದ್ದೇನೆ ಹಾಗೂ ಓದಿದ್ದೇನೆ. ಹೀಗಾಗಿ ವರದಿ ಕೇಳಲಾಗಿದೆ. ಮಾಹಿತಿ ಬಂದ ನಂತರವಷ್ಟೇ ಪ್ರತಿಕ್ರಿಯಿಸುವೆ ಎಂದರು.
ಅಲ್ಪಸಂಖ್ಯಾತರ ಮೇಲೆ ಯಾವುದೇ ನಿಟ್ಟಿನಲ್ಲಿ ದೌರ್ಜನ್ಯ ನಡೆದರೆ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸುವಂತೆ ಪೊಲೀಸ್ ರಿಗೆ ನಿರ್ದೇಶನ ನೀಡಲಾಗಿದೆ. ಆದರೆ ಶಿವಮೊಗ್ಗ, ಉಡುಪಿ ಜಾತ್ರೆಯಲ್ಲಿನ ಮಳಿಗೆಗಳಲ್ಲಿ ಮುಸ್ಲಿಂರಿಗೆ ನೀಡದೇ ಇರುವುದರ ವಿಷಯ ಬೇರೆಯದ್ದೇ . ಹೀಗಾಗಿ ವರದಿ ಬಂದ ನಂತರವಷ್ಟೇ ಉತ್ತರ ನೀಡಿದರೆ ಸಮಂಜಸವಾಗಿರುತ್ತದೆ ಎಂದರು.
ಭಗವದ್ಗೀತೆ ಪಠ್ಯದಲ್ಲಿ ಅಳವಡಿಕೆ ಕುರಿತಾಗಿ ಶಿಕ್ಷಣ ಸಚಿವರು ಹೇಳಿದ್ದಾರೆ. ಆದರೆ ಭಗವದ್ಗೀತೆ, ಖುರಾನ್, ಬೈಬಲ್ ಕುರಿತಾಗಿಯೂ ಸಲಹೆ ಪಡೆದಿದ್ದಾರೆ. ಸೇರ್ಪಡೆ ಕುರಿತಾಗಿ ಆದೇಶ ಹೊರ ಬಿದ್ದ ನಂತರ ಪ್ರತಿಕ್ರಿಯಿಸುವೆ ಎಂದರು.
ಹಿಜಾಬ್ ಬಳಕೆ ಕುರಿತಾಗಿ ಈಗಾಗಲೇ ಹೈಕೋರ್ಟ್ ತನ್ನ ತೀರ್ಪು ನೀಡುವ ನೀಡಿದೆ. ಶಾಲಾ- ಕಾಲೇಜ್‌ದೊಳಗೆ ಬಳಕೆಗೆ ನಿರ್ಬಂಧ ಹೇರಲಾಗಿದೆ. ಆದರೆ ಹೊರಗಡೆ ಬಳಕೆಗೆ ಆಕ್ಷೇಪವಿಲ್ಲ. ಹೀಗಾಗಿ ನೆಲದ ಕಾನೂನು ಗೌರವಿಸಿ ಹೈಕೋರ್ಟ್ ತೀರ್ಪು ನೀಡಿದೆ. ಸ್ವಾಗತಿಸುವುದು ಆದ್ಯ ಕರ್ತವ್ಯವಾಗಿದೆ ಎಂದರು.
ಇದನ್ನೂ ಓದಿ : ಮುಂಬೈ-ಅಹಮದಾಬಾದ್: ಬುಲೆಟ್ ರೈಲು ಯೋಜನೆಗೆ ಶೇ.89ರಷ್ಟು ಭೂಮಿ ಸ್ವಾಧೀನ: ಸಚಿವ ವೈಷ್ಣವ್