ಕಲಬುರಗಿ: ಬೆಂಗಳೂರಿನ ಮಿಂಟೋ ಆಸ್ಪತ್ರೆಯ ವೈದ್ಯ ವಿದ್ಯಾರ್ಥಿನಿ ಮೇಲಿನ ಹಲ್ಲೆ ಪ್ರಕರಣ ಖಂಡಿಸಿ ಶುಕ್ರವಾರ ನಗರದಲ್ಲಿ ಕೆಲ ಖಾಸಗಿ ಆಸ್ಪತ್ರೆಯಲ್ಲಿ ಹೊರ ರೋಗಿಗಳ ತಪಾಸಣೆ ವಿಭಾಗ (ಒಪಿಡಿ) ಬಂದ್ ಮಾಡಲಾಗಿತ್ತು.
ಇನ್ನು ಕೆಲವು ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕೈ ತೋಳಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಕರ್ತವ್ಯ ನಿರ್ವಹಿಸಿ, ಘಟನೆಗೆ ಖಂಡನೆ ವ್ಯಕ್ತಪಡಿಸಿದರು.
ಸರ್ಕಾರಿ ಮತ್ತು ಬಹುತೇಕ ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ದೊರೆಯಿತು. ವೈದ್ಯ ವಿದ್ಯಾರ್ಥಿನಿ ಮೇಲೆ ಹಲ್ಲೆ ನಡೆಸಿದ್ದಕ್ಕೆ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಒಪಿಡಿ ಬಂದ್‌ಗೆ ಕರೆ ನೀಡಿತ್ತು. ಹೀಗಾಗಿ ಕೆಲವು ಖಾಸಗಿ ಆಸ್ಪತ್ರೆಗಳು ಒಪಿಡಿ ಬಂದ್ ಮಾಡಿದ್ದಲ್ಲದೇ, ಐಎಂಎ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ವೈದ್ಯರು ಪ್ರತಿಭಟನೆ ನಡೆಸಿದರು.
ಸರ್ಕಾರಿ ಆಸ್ಪತ್ರೆಗಳ ವೈದ್ಯರು ಪ್ರತಿಭಟನೆಯಿಂದ ಉಳಿದು ಎಂದಿನಂತೆ ಸೇವೆ ನೀಡಿದರು. ಇದರಿಂದ ರೋಗಿಗಳು ಯಾವುದೇ ರೀತಿ ಸಮಸ್ಯೆ ಎದುರಿಸಲಿಲ್ಲ. ನಗರದ ಬಸವೇಶ್ವರ ಆಸ್ಪತ್ರೆ, ಕೆಬಿಎನ್, ಚಿರಾಯು, ಯುನೈಟೆಡ್, ಧನ್ವಂತರಿ, ಪಸ್ತಾಪುರ, ಕಾಮರಡ್ಡಿ ಟ್ರಾಮಾ ಕೇರ್, ಸಿದ್ದರಾಮೇಶ್ವರ ಕಣ್ಣಿನ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕಪ್ಪು ಪಟ್ಟಿ ಕಟ್ಟಿಕೊಂಡು ಕರ್ತವ್ಯ ನಿರ್ವಹಿಸಿದರು. ಬಸವೇಶ್ವರ, ಕೆಬಿಎನ್, ಯುನೈಟೆಡ್ ಆಸ್ಪತ್ರೆಗಳಲ್ಲಿ ಒಪಿಡಿ ಬಂದ್ ಮಾಡಲಾಗಿತ್ತು.
ಕ್ರಮಕ್ಕೆ ಆಗ್ರಹ: ಜಿಲ್ಲಾಧಿಕಾರಿ ಕಚೇರಿ ಎದುರು ವೈದ್ಯರು ಪ್ರತಿಭಟನೆ ನಡೆಸಿ, ಹಲ್ಲೆ ಮಾಡಿದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.ಮುಂದಿನ ದಿನಗಳಲ್ಲಿ ವೈದ್ಯರ ಮೇಲೆ ಹಲ್ಲೆಯಂತ ಘಟನೆಗಳು ನಡೆಯದಂತೆ ಸರ್ಕಾರ ಎಚ್ಚರಿಕೆ ವಹಿಸಬೇಕು. ವೈದ್ಯರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಕಾರ್ಯದರ್ಶಿ ಡಾ| ಸಂಜನಾ ತೆಲ್ಲೂರ, ಡಾ| ಲವಕುಮಾರ ಲೋಯಾ, ಡಾ| ಸಿದ್ದೇಶ್ವರ ಸಿರವಾರ, ಡಾ| ರಾಹುಲ್ ಮಂದಕನಳ್ಳಿ, ವಿಜಯ ಕಪ್ಪಿಕೇರಿ, ಡಾ| ಗುರುಲಿಂಗಪ್ಪ, ಡಾ| ಅಜಯ ಗುಡೂರ, ಡಾ| ಸಂತೋಷ ಪಾವಲೆ, ಡಾ| ಸುಚಿತ್ರಾ ದುರಗಿ, ಡಾ| ವನಿತಾ ಧಾರವಾಡ, ಡಾ| ಹೇಮಾ ಸಿಂಹಾಸನೆ, ಡಾ| ರೂಪಾ ಪಾಟೀಲ, ಡಾ| ವಿನೋದ ಪಾಲ್ಗೊಂಡಿದ್ದರು.
ಜಿಮ್ಸ್‌ನಲ್ಲಿ ಹೆಚ್ಚಿನ ಜನ: ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಒಪಿಡಿ ಬಂದ್ ಮಾಡಿದ್ದರಿಂದ ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ಎಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನರು ಇದ್ದರು. ಹೊರ ರೋಗಿಗಳ ವಿಭಾಗದಲ್ಲಿ ಚೀಟಿ ಪಡೆದುಕೊಳ್ಳಲು ರೋಗಿಗಳು ಸರತಿ ಸಾಲಿನಲ್ಲಿ ನಿಂತಿದ್ದರು. ಜಿಮ್ಸ್ ವೈದ್ಯರು ಹೆಚ್ಚುವರಿ ಕೆಲಸ ಮಾಡಲು ಅಧಿಕಾರಿಗಳು ಕ್ರಮ ಕೈಗೊಂಡಿದ್ದರು. ಇದರಿಂದ ರೊಗಿಗಳಿಗೆ ತೊಂದರೆಯಾಗಲಿಲ್ಲ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.