ಕಲಬುರಗಿ: ಕೇಂದ್ರದ ನವೀಕರಿಸಬಹುದಾದ ಇಂಧನ ಮೂಲ, ರಾಸಾಯನಿಕ ಮತ್ತು ರಸಗೊಬ್ಬರ ರಾಜ್ಯ ಖಾತೆಯ ನೂತನ ಸಚಿವ ಭಗವಂತ ಖೂಬಾ ನೇತೃತ್ವದಲ್ಲಿ ಮಂಗಳವಾರ ಜನಾಶೀರ್ವಾದ ಯಾತ್ರೆಯನ್ನು ಕೋವಿಡ್ ನಿಮಯಗಳ ಉಲ್ಲಂಘಿಸಿ ಮಾಡಿದ ಕಾರಣ ನಗರದ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಕೋವಿಡ್ ಸೋಂಕು ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಎಲ್ಲ ರೀತಿಯ ಬಹಿರಂಗ ಸಭೆ, ಸಮಾವೇಶ, ಸಮಾರಂಭ ಮತ್ತು ಕಾರ್ಯಕ್ರಮಗಳಿಗೆ ನಿರ್ಬಂಧ ವಿಧಿಸಲಾಗಿದೆ. ಮೇಲಾಗಿ ಮಹಾರಾಷ್ಟ್ರದ ಗಡಿ ಹೊಂದಿಕೊಂಡಿದ್ದರಿಂದ ರಾತ್ರಿ 9ರಿಂದ ಕರ್ಫ್ಯೂ ಕೂಡ ಜಾರಿ ಮಾಡಲಾಗಿದೆ. ಆದರೆ, ಇಲ್ಲಿನ ವೀರಶೈವ ಕಲ್ಯಾಣ ಮಂಟಪದಲ್ಲಿ ಮಂಗಳವಾರ ರಾತ್ರಿ ಕೋವಿಡ್ ನಿಯಮಾವಳಿಗಳು ಹಾಗೂ ರಾತ್ರಿ ಕರ್ಫ್ಯೂ ಲೆಕ್ಕಿಸದೆ 9 ಗಂಟೆ ನಂತರವೂ ಜನಾಶೀರ್ವಾದ ಯಾತ್ರೆಯ ಸಮಾರಂಭ ನಡೆಸಲಾಗಿತ್ತು.
ಕೋವಿಡ್ ಮಾರ್ಗಸೂಚಿ ಮತ್ತು ನಿರ್ಬಂಧಗಳ ಉಲ್ಲಂಘನೆ ಕಾರಣ ಕಲಬುರಗಿ ತಹಶೀಲ್ದಾರ್ ಪ್ರಕಾಶ ಕುದರಿ ಅವರು ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಅನ್ವಯ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿಕೊಳ್ಳಲಾಗಿದೆ. ಕಾರ್ಯಕ್ರಮ ಆಯೋಜಕರು ಮತ್ತು ಕಲ್ಯಾಣ ಮಂಟಪದ ಮಾಲೀಕರ ಮೇಲೆ ಪ್ರಕರಣ ದಾಖಲಾಗಿದ್ದು, ಈ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ :ಕಲಾಪದಿಂದ ಪಲಾಯನ ಮಾಡಿದ ಕಾಂಗ್ರೆಸ್‍ನಿಂದ ಜನತೆಯ ದಾರಿ ತಪ್ಪಿಸುವ ವ್ಯರ್ಥ ಪ್ರಯತ್ನ
ಖೂಬಾ ವಿರುದ್ಧ ಕೇಸ್ ದಾಖಲಿಸಲು ಆಗ್ರಹ: ಜನಾಶೀರ್ವಾದ ಯಾತ್ರೆಯ ರೂವಾರಿ ಕೇಂದ್ರ ಸಚಿವ ಭಗವಂತ ಖೂಬಾ ಅವರೇ ಆಗಿದ್ದಾರೆ. ತಮ್ಮದೇ ಕೇಂದ್ರ ಮತ್ತು ರಾಜ್ಯ ಸರ್ಕಾರದ ಜಾರಿಗೆ ತಂದಿದ್ದ ಕೋವಿಡ್ ನಿಯಮಗಳನ್ನು ಸ್ವತಃ ಸಚಿವರೇ ಉಲ್ಲಂಸಿದ್ದಾರೆ. ಹೀಗಾಗಿ ಖೂಬಾ ಅವರ ವಿರುದ್ಧವೇ ಕೇಸ್ ದಾಖಸಿಕೊಂಡು ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಡಾ.ಶರಣ ಪ್ರಕಾಶ ಪಾಟೀಲ ಆಗ್ರಹಿಸಿದ್ದಾರೆ.