ಕಲಬುರಗಿ: ಜಿಲ್ಲಾದ್ಯಂತ ವರುಣನ ಆರ್ಭಟ ಜೋರಾಗಿದ್ಧು, ಜನ-ಜೀವನ ಅಸ್ತವ್ಯಸ್ಥವಾಗಿದೆ. ನಗರ ಸೇರಿದಂತೆ ಅನೇಕ ಕಡೆಗಳಲ್ಲಿ ಮನೆಗಳು ಜಲಾವೃತಗೊಂಡು ಜನರು ಪರದಾಡುತ್ತಿದ್ದಾರೆ.
ಮಂಗಳವಾರ ರಾತ್ರಿ ಸುಮಾರು 7 ಗಂಟೆಗೆ ಆರಂಭವಾದ ಮಳೆ ಎಡೆಬಿಡದೆ ಸುರಿಯುತ್ತಿದೆ. ಸೇಡಂ ತಾಲೂಕಿನಲ್ಲಿ ಕಾಗಿಣಾ ನದಿ ಪ್ರವಾಹದಿಂದಾಗಿ ಮಳಖೇಡದ ಉತ್ತರಾದಿ ಮಠ ಸಂಪೂರ್ಣ ಜಲಾವೃತವಾಗಿದೆ. ಜಯತೀರ್ಥರು, ಅಕ್ಷೋಭ್ಯ ತೀರ್ಥರು ಮತ್ತು ರಘುನಾಥ ತೀರ್ಥರ ವೃಂದಾವನಗಳು ಮುಳುಗಡೆಗೊಂಡಿವೆ.
ಇದನ್ನೂ ಓದಿ: ಧಾರಾಕಾರ ಮಳೆ: ಗೋಡೆ ಕುಸಿದ ಪರಿಣಾಮ 9 ಮಂದಿ ದಾರುಣ ಸಾವು
ಅಲ್ಲದೇ, ಮಳಖೇಡ ಸೇತುವೆ, ಕಾಚೂರು, ದಂಡೋತಿ ಸೇತುವೆಗಳು ಮುಳುಗಡೆಯಾಗಿದ್ದು, ಕಲಬುರಗಿ-ಸೇಡಂ, ಕಾಚೂರು-ಸೇಡಂ ರಸ್ತೆ ಸಂಪರ್ಕ ಕಡಿತಗೊಂಡಿದೆ. ಚಿಂಚೋಳಿ ಪಟ್ಟಣದ ಅನೇಕ ಬಡಾವಣೆಗಳು ಸಹ ಜಲಾವೃತವಾಗಿವೆ. ಹರಿಜನವಾಡಾ, ಮೋಮಿನಪುರ ಮತ್ತಿತರ ಬಡಾವಣೆಗಳಿಗೆ ನದಿ ನೀರು ಹೊಕ್ಕು ಮನೆಯಲ್ಲಿದ್ದ ವಸ್ತುಗಳು ಎಲ್ಲ ನೀರು ಪಾಲಾಗಿವೆ.
ಇದನ್ನೂ ಓದಿ: 14 ತಿಂಗಳ ಬಳಿಕ ಗೃಹ ಬಂಧನದಿಂದ ಮೆಹಬೂಬಾ ಮುಫ್ತಿಗೆ ಮುಕ್ತಿ !
ಚಿಂಚೋಳಿ ತಾಲೂಕಿನ ಬೆನಕನಹಳ್ಳಿ ಗ್ರಾಮ ಮಳೆ ನೀರಿನಿಂದ ಆವೃತವಾಗಿದೆ. ಕಾಳಗಿ ತಾಲೂಕಿನ ಹೆಬ್ಬಾಳ ಗ್ರಾಮ ಕೂಡ ಜಲಾವೃತವಾಗಿದೆ. ಇನ್ನು, ಕಲಬುರಗಿ ನಗರದ ಅನೇಕ ಬಡಾವಣೆಗಳು ಸಹ ಜಲಾವೃತವಾಗಿದೆ. ಪೂಜಾ ಕಾಲೋನಿ, ಓಂ ನಗರ ಸೇರಿದಂತೆ ಅನೇಕ ಬಡಾವಣೆಗಳಲ್ಲಿ ಮಳೆ ನೀರು ಮನೆಯೊಳಗೆ ನುಗ್ಗಿದ ಪರಿಣಾಮ ಜನರು ಕಂಗಾಲಾಗಿದ್ದಾರೆ. ಜೇವರ್ಗಿ ಮತ್ತು ಶಹಾಬಾದ್ ಪಟ್ಟಣಗಳಲ್ಲೂ ಮನೆಗಳಿಗೆ ಮಳೆ ನೀರು ನುಗ್ಗಿದೆ.