Advertisement

ಇಂದಿನಿಂದ ಕೆಕೆ ಇತಿಹಾಸ ಸಂಗ್ರಹ ಕಾರ್ಯಾಗಾರ

11:03 AM Nov 04, 2019 | Naveen |

ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶದ ಶ್ರೀಮಂತ ಇತಿಹಾಸ ಮತ್ತೆ ಕಟ್ಟಿಕೊಳ್ಳಲು ಮತ್ತು ಪಠ್ಯ ಪುಸ್ತಕದಲ್ಲಿ ಅಧಿಕೃತವಾಗಿ ದಾಖಲಿಸಲು ಗುಲಬರ್ಗಾ ವಿಶ್ವವಿದ್ಯಾಲಯ, ಹೈದ್ರಾಬಾದ ಕರ್ನಾಟಕ ಪ್ರದೇಶ ಇತಿಹಾಸ ರಚನಾ ಸಮಿತಿ ಆಶ್ರಯದಲ್ಲಿ ತಜ್ಞರ ಕಾರ್ಯಾಗಾರವನ್ನು ನ.4 ಮತ್ತು 5 ರಂದು ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹೈದ್ರಾಬಾದ ಕರ್ನಾಟಕ ಪ್ರದೇಶ ಇತಿಹಾಸ ರಚನಾ ಸಮಿತಿ ಸದಸ್ಯರಾಗಿರುವ ಗುಲಬರ್ಗಾ ವಿಶ್ವವಿದ್ಯಾಲಯ ಕುಲಪತಿ ಪ್ರೊ| ಪರಿಮಳಾ ಅಂಬೇಕರ್‌ ತಿಳಿಸಿದರು.

Advertisement

ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸಭಾಂಗಣದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಾಗಾರವನ್ನು ಉಪಮುಖ್ಯಮಂತ್ರಿಗಳು, ಸಮಾಜ ಕಲ್ಯಾಣ, ಲೋಕೋಪಯೋಗಿ ಹಾಗೂ ಕಲಬುರಗಿ ಜಿಲ್ಲಾ ಉಸ್ತವಾರಿ ಸಚಿವ ಗೋವಿಂದ ಕಾರಜೋಳ ಉದ್ಘಾಟಿಸಲಿದ್ದಾರೆ.

ಶಾಸಕ ಬಸವರಾಜ ಮತ್ತಿಮಡು ಅಧ್ಯಕ್ಷತೆ ವಹಿಸಲಿದ್ದು, ಗುಲಬರ್ಗಾ ವಿಶ್ವವಿದ್ಯಾಲಯ ಇತಿಹಾಸ ಅಧ್ಯಯನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ| ಬಿ.ಸಿ. ಮಹಾಬಳೇಶ್ವರ ಆಶಯ ನುಡಿಗಳನ್ನಾಡಲಿದ್ದಾರೆ. ಕಾರ್ಯಾಗಾರ ಕೇವಲ ದಾಖಲೀಕರಣಕ್ಕೆ ಸೀಮಿತವಾಗದೆ ಇಲ್ಲಿನ ಕಳೆದ ಹೋದ ಇತಿಹಾಸದ ಗತವೈಭವವನ್ನು ಜಾಗೃತಿಗೊಳಿಸಲು ಬೆಳಕು ಚೆಲ್ಲಲಿದೆ ಎಂದರು.

ಕಾರ್ಯಾಗಾರದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಎಲ್ಲ ಜಿಲ್ಲೆಗಳ ಶಾಸಕರು, ಸಂಸದರು, ಸಚಿವರು, ಜಿಲ್ಲಾಧಿಕಾರಿಗಳು, ವಿಶ್ವವಿದ್ಯಾಲಯದ ಕುಲಪತಿಗಳು ಸೇರಿದಂತೆ ಸಂಬಂಧಿಸಿದ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು, ವಿಶೇಷವಾಗಿ ಇತಿಹಾಸ ತಜ್ಞರು ಆಗಮಿಸಲಿದ್ದಾರೆ. ಅವರಿಗೆ ತಂಗಲು ವಿಶ್ವವಿದ್ಯಾಲಯದಲ್ಲಿ ವ್ಯವಸ್ಥೆ ಮಾಡಲಾಗಿದೆ.

ಮಂಥನ ಸಭಾಂಗಣದಲ್ಲಿ ನ. 4 ರಂದು ಕಲ್ಯಾಣ ಕರ್ನಾಟಕ ಪ್ರಾಚೀನ ಪರಂಪರೆ, ಕಲ್ಯಾಣ ಕರ್ನಾಟಕ ಮಧ್ಯಕಾಲೀನ ಇತಿಹಾಸ ಮತ್ತು ಕಲ್ಯಾಣ ಕರ್ನಾಟಕ ಅಧುನಿಕ ಇತಿಹಾಸದ ಬಗ್ಗೆ ಗೋಷ್ಠಿಗಳು ನಡೆಯಲಿವೆ.

Advertisement

ನ. 5 ರಂದು ಕಲ್ಯಾಣ ಕರ್ನಾಟಕ ಸಾಹಿತ್ಯ ಮತ್ತು ಸಂಸ್ಕೃತಿ, ಸಂಕೀರ್ಣ ಹಾಗೂ ಲೇಖಕರ ನುಡಿಗಳ ಗೋಷ್ಟಿಗಳು ನಡೆಯಲಿವೆ. ಮಧ್ಯಾಹ್ನ 3:30 ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಹಿರಿಯ ಸಾಹಿತಿ ಪ್ರೊ| ವಸಂತ ಕುಷ್ಠಗಿ ಸಮಾರೋಪ ಭಾಷಣಕಾರರಾಗಿ ಆಗಮಿಸಲಿದ್ದಾರೆ ಎಂದರು.

ಹೈದ್ರಾಬಾದ ಕರ್ನಾಟಕ ಪ್ರದೇಶ ಇತಿಹಾಸ ರಚನಾ ಸಮಿತಿ ಸದಸ್ಯ ಕಾರ್ಯದರ್ಶಿ ಲಕ್ಷಣ ದಸ್ತಿ ಮಾತನಾಡಿ, ವಿಶ್ವದಲ್ಲಿಯೆ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ನಂತರ ಇದೇ ಮೊದಲ ಬಾರಿಗೆ 233 ವರ್ಷಗಳ ಕಾಲ ಅತ್ಯಂತ ಶ್ರೀಮಂತ ಇತಿಹಾಸ ಹೊಂದಿರುವ ಕಲ್ಯಾಣ ಕರ್ನಾಟಕ ಪ್ರದೇಶದ ಸಮಗ್ರ ಚಿತ್ರಣ ಕಂಡುಕೊಳ್ಳುವ ನಿಟ್ಟಿನಲ್ಲಿ ಕಾರ್ಯಾಗಾರ ಆಯೋಜಿಸಿದೆ.

ಹಿಂದೂ ಲಾ ಕೋಡ್‌, ಕವಿರಾಜ ಮಾರ್ಗ ಕೃತಿ ನೀಡಿದ ನೆಲ ಇದು. ಸೂಫಿ-ಸಂತರ ಬೀಡು, ವಿಶ್ವಕ್ಕೆ ಪ್ರಜಾಪ್ರಭುತ್ವದ ಸಂಸತ್ತು ಪರಿಚಯಿಸಿದ ಬಸವಣ್ಣನ ಕರ್ಮ ಭೂಮಿ. ವಚನ, ದಾಸ ಸಾಹಿತ್ಯ, ದಲಿತ ಚಳವಳಿಗೆ ಸಾಕ್ಷಿಯಾದ ಈ ಪ್ರದೇಶದ ತನ್ನದೆಯಾದ ಕುರುಹುಗಳನ್ನು ಇತಿಹಾಸದಲ್ಲಿ ಬಿಟ್ಟು ಹೋಗಿದ್ದು, ಅದನ್ನು ಮರುಸ್ಥಾಪಿಸಿ ಅಧಿಕೃತಗೊಳಿಸಬೇಕಿದೆ ಎಂದರು.

ಇತಿಹಾಸ ಸಂಗ್ರಹಣೆಗೆ ಇದು ಪ್ರಾಥಮಿಕ ಕಾರ್ಯಾಗಾರವಾಗಿದ್ದು, ಇಂತಹ ಅನೇಕ ಕಾರ್ಯಾಗಾರಗಳು ಮುಂದಿನ ದಿನಗಳಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಬೀದರ ಪಶು ವಿಶ್ವವಿದ್ಯಾಲಯ, ಹಂಪಿ ಕನ್ನಡ ವಿಶ್ವವಿದ್ಯಾಲಯ ಹೀಗೆ ಪ್ರದೇಶದ ಇನ್ನಿತರ ಜಿಲ್ಲೆಗಳಲ್ಲಿ ಹಮ್ಮಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.

ಒಟ್ಟಾರೆ ಅಧಿಕೃತ ಇತಿಹಾಸ ಸಂಗ್ರಹಿಸಿ, ಪಠ್ಯದಲ್ಲಿ ಸೇರ್ಪಡೆ ಮಾಡುವುದಲ್ಲದೆ, ಮುಂದಿನ ಪೀಳಿಗೆಗೆ ಇತಿಹಾಸ ಪರಿಚಯಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಇತಿಹಾಸ ಸಂಗ್ರಹಣೆಗೆ ಹೈದ್ರಾಬಾದ, ನಾಂದೇಡ್‌, ನವದೆಹಲಿಗೂ ಹೋಗಬೇಕಾಗುತ್ತದೆ. ಅನೇಕ ಲೇಖಕರು ಈ ನಿಟ್ಟಿನಲ್ಲಿ ತಮ್ಮ ಅಮೂಲ್ಯ ಬರಹಗಳನ್ನು ಸಮಿತಿಗೆ ಕಳುಹಿಸಿದ್ದಾರೆ ಎಂದರು.

ಹೈದ್ರಾಬಾದ ಕರ್ನಾಟಕ ಇತಿಹಾಸ ರಚನಾ ಸಮಿತಿ ಸದಸ್ಯ ಡಾ| ಮಾಜೀದ್‌ ಧಾಗಿ, ಉಪ ಸಮಿತಿ ಸದಸ್ಯ ಅಬ್ದುಲ್‌ ರಹೀಮ್‌, ಗುಲಬರ್ಗಾ ವಿಶ್ವವಿದ್ಯಾಲಯದ ವಿತ್ತಾಧಿಕಾರಿ ಪ್ರೊ| ಬಿ. ವಿಜಯ, ಡಾ| ಹೆಚ್‌.ಟಿ. ಪೋತೆ, ಪ್ರೊ| ಮಂಜುಳಾ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next