ಕಲಬುರಗಿ: ಕಲ್ಯಾಣ ಕರ್ನಾಟಕದ ಕಲಬುರಗಿ-ಬೀದರ ನಡುವಿನ 110 ಕಿ.ಮೀ ರೈಲು ಮಾರ್ಗದ ವಿದ್ಯುತ್ತೀಕರಣ ಕಾಮಗಾರಿಗೆ ಕೇಂದ್ರದ ರೈಲ್ವೆ ಸಚಿವಾಲಯ ಹಸಿರು ನಿಶಾನೆ ತೋರಿಸಿದೆ. 127 ಕೋಟಿ ರೂ. ವೆಚ್ಚದ ವಿದ್ಯುತ್ತೀಕರಣ ಕಾಮಗಾರಿಗೆ ಕೇಂದ್ರದ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಹಸಿರು ನಿಶಾನೆ ನೀಡಿದ್ದಾರೆ.
ಕೆಲ ದಿನಗಳ ಹಿಂದೆ ಬೀದರ ಸಂಸದ ಭಗವಂತ ಖೂಬಾ, ಕಲಬುರಗಿ ಸಂಸದ ಡಾ| ಉಮೇಶ ಜಾಧವ ವಿದ್ಯುತ್ತೀಕರಣ ಕಾಮಗಾರಿಗೆ ಮನವಿ ಸಲ್ಲಿಸಿದ್ದರು. ಇದಕ್ಕೆ ಕೇಂದ್ರ ಸಚಿವರು ತ್ವರಿತವಾಗಿ ಸ್ಪಂದಿಸಿ ಸಂಬಂಧಪಟ್ಟ ರೈಲ್ವೆ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಆದೇಶ ಹೊರಡಿಸಿದ್ದಾರೆ.
ಕಲಬುರಗಿ-ಬೀದರ ರೈಲು ಮಾರ್ಗ ವಿದ್ಯುತ್ತೀಕರಣವಾದ ನಂತರ ಹೆಚ್ಚಿನ ರೈಲು ಸಂಚಾರಕ್ಕೆ ಅನುಕೂಲವಾಗಲಿದೆ. ರೈಲು ಯಾತ್ರಿಕರಿಗೆ ಮತ್ತು ಸರಕು ಸಾಗಾಣಿಕೆಗೆ ಅನುಕೂಲವಾಗಿ ಈ ಭಾಗ ಅಭಿವೃದ್ಧಿಗೆ ಪೂರಕವಾಗಲಿದೆ. ಒಟ್ಟಾರೆ ಭಾರತೀಯ ರೈಲ್ವೆಯ ಎಲ್ಲ ಮಾರ್ಗಗಳನ್ನು 2022ರ ವರೆಗೆ ವಿದ್ಯುತ್ತೀಕರಣ ಮಾಡಲಾಗುವುದು ಎಂದು ರೈಲ್ವೆ ಸಚಿವರು ತಿಳಿಸಿದ್ದಾರೆ.
ವಿಮಾನ ನಿಲ್ದಾಣಕ್ಕೆ ಭೇಟಿ: ಸಂಸದ ಡಾ| ಉಮೇಶ ಜಾಧವ ಶನಿವಾರ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಕಾಮಗಾರಿಗಳನ್ನು ಅವಲೋಕಿಸಿದರು. ನಿಲ್ದಾಣದ ಪ್ರತಿ ಹಂತದ ಕಾಮಗಾರಿಗಳನ್ನು ಒಂದೊಂದಾಗಿ ಅವಲೋಕಿಸಿದ ಸಂಸದರು, ಕಾಮಗಾರಿ ಪೂರ್ಣವಾದರೆ ಸಾರ್ವಜನಿಕ ವಿಮಾನಯಾನ ಸಂಚಾರಕ್ಕೆ ಹಸಿರು ನಿಶಾನೆ ನೀಡಲು ಅನುಕೂಲವಾಗುತ್ತದೆ ಎಂದರು.
ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ಬಸವರಾಜ ಮತ್ತಿಮಡು, ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ, ಪ್ರಾದೇಶಿಕ ಆಯುಕ್ತ ಸುಬೋಧ ಯಾಧವ, ಕಲಬುರಗಿ ಮಹಾನಗರ ಪೊಲೀಸ್ ಆಯುಕ್ತ ಕಿಶೋರಬಾಬು, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ಅಮೀನ ಮುಕ್ತರ್ ಈ ಸಂದರ್ಭದಲ್ಲಿದ್ದರು.