ಕಲಬುರಗಿ: ಸಾಂಸ್ಥಿಕ ಕ್ವಾರಂಟೈನ್ ಅವಧಿಯನ್ನು 14ರಿಂದ 7 ದಿನಕ್ಕೆ ಇಳಿಸಿರುವ ಸರ್ಕಾರದ ನಿರ್ಧಾರ ಗ್ರಾಮೀಣ ಭಾಗದಲ್ಲಿ ಕೋವಿಡ್ ಭಯದ ವಾತಾವರಣ ಹುಟ್ಟು ಹಾಕಿದ್ದರೆ, ವಲಸಿಗರನ್ನು ಕ್ವಾರಂಟೈನ್ ನಲ್ಲಿ ಹಿಡಿದಿಟ್ಟಿದ್ದ ಅಧಿಕಾರಿಗಳ ಶ್ರಮ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತಾಗಿದೆ. ಜತೆಗೆ ಅಧಿಕಾರಿಗಳು ಮತ್ತೊಂದು ಸವಾಲು ಎದುರಿಸುವಂತೆ ಆಗಿದೆ.
ಕಲ್ಯಾಣ ಕರ್ನಾಟಕ ಪ್ರದೇಶದಿಂದ ಮಹಾರಾಷ್ಟ್ರ ಮತ್ತು ತೆಲಂಗಾಣ ಮುಂತಾದ ಕಡೆಗಳಲ್ಲಿ ಗುಳೆ ಹೋಗಿದ್ದ ಸಾವಿರಾರು ಸಂಖ್ಯೆಯ ಕೂಲಿ ಕಾರ್ಮಿಕರು ರೈಲು, ಬಸ್, ಕಾಲ್ನಡಿಗೆ ಮೂಲಕ ವಾಪಸ್ ಆಗಿದ್ದಾರೆ. ಹೊರಗಡೆಯಿಂದ ಬಂದವರೆನ್ನಲ್ಲ ಕ್ವಾರಂಟೈನ್ ಕೇಂದ್ರಗಳಲ್ಲಿ ಇರಿಸಲಾಗಿತ್ತು. 14 ದಿನ ಕ್ವಾರಂಟೈನ್ ಮಾಡಿ, ಪ್ರತಿಯೊಬ್ಬರಿಗೂ ಗಂಟಲು ಮಾದರಿ ಪರೀಕ್ಷೆ ನಡೆಸಿಯೇ ಮನೆಗೆ ಬಿಡಬೇಕೆಂದು ಸರ್ಕಾರವೇ ಹೇಳಿತ್ತು. ಈಗ 7 ದಿನಕ್ಕೆ ಸಾಂಸ್ಥಿಕ ಕ್ವಾರಂಟೈನ್ ಅವಧಿ ಇಳಿಸಿ, 7 ದಿನಗಳಿಂದ ಕ್ವಾರಂಟೈನ್ ಇದ್ದವವರನ್ನು ಬಿಟ್ಟು ಬಿಡಿ ಎಂದು ಸರ್ಕಾರ ನಿಯಮ ಬದಲಿಸಿದೆ.
ಸರ್ಕಾರದ ಹೊಸ ನಿಯಮದಂತೆ ಜಿಲ್ಲಾಡಳಿತಗಳು ಕ್ವಾರಂಟೈನ್‌ನಲ್ಲಿ ಇದ್ದವರನ್ನು ಮನೆಗೆ ಕಳುಹಿಸುತ್ತಿವೆ. ಕಲಬುರಗಿಯಲ್ಲಿ ಕಳೆದ ನಾಲ್ಕು ದಿನದಲ್ಲಿ 29 ಸಾವಿರ ಜನರನ್ನು ಸಾಂಸ್ಥಿಕ ಕ್ವಾರಂಟೈನ್‌ನಿಂದ ಮುಕ್ತಿಗೊಳಿಸಲಾಗಿದೆ. ಇದರಲ್ಲಿ 7 ದಿನ ಕ್ವಾರಂಟೈನ್ ಮಾಡಿದವರಿಗೆ ಮಾತ್ರವೇ ಉಳಿದ 7 ದಿನದ ಹೋಂ ಕ್ವಾರಂಟೈನ್ ಮುದ್ರೆ ಹಾಕಿ ಮನೆಯಲ್ಲಿ ಇರುವಂತೆ ತಿಳಿಸಲಾಗಿದೆ. ಉಳಿದವರು ಮುಕ್ತವಾಗಿ ಹೊರಗಡೆ ಸುತ್ತಾಡುತ್ತಿದ್ದಾರೆ.
ಹೊಸ ಸವಾಲೇನು?: ಮಹಾರಾಷ್ಟ್ರದಿಂದ ಬಂದ ಬಹುತೇಕ ವಲಸೆ ಕಾರ್ಮಿಕರಲ್ಲಿ ಕೋವಿಡ್ ಪತ್ತೆಯಾಗಿದ್ದು, ಕಲಬುರಗಿ, ಬೀದರ್ ಮಾತ್ರವಲ್ಲದೇ ಎರಡು ತಿಂಗಳಿಂದ ಗ್ರೀನ್ ಝೋನ್‌ನಲ್ಲಿದ್ದ ಯಾದಗಿರಿ, ರಾಯಚೂರು ಜಿಲ್ಲೆಗಳು ಸಹ ಕೋವಿಡ್ ನಿಂದ ತತ್ತರಿಸುವಂತೆ ಆಗಿವೆ. ಬಳ್ಳಾರಿ, ಕೊಪ್ಪಳದಲ್ಲೂ ವಲಸಿಗರಿಗೆ ಕೋವಿಡ್ ಪತ್ತೆಯಾಗಿದೆ. ಈ ಹಿಂದೆ 14 ದಿನ ಕ್ವಾರಂಟೈನ್ ನಲ್ಲಿಟ್ಟು, ಎಲ್ಲರಿಗೂ ಕೋವಿಡ್ ಪರೀಕ್ಷೆ ಮಾಡಲಾಗುತ್ತಿತ್ತು. ಕೋವಿಡ್ ಲಕ್ಷಣಗಳೇ ಇಲ್ಲದವರಿಗೂ ಕೋವಿಡ್ ಪರೀಕ್ಷೆ ಮಾಡಲಾಗಿತ್ತು. ಹೀಗಾಗಿಯೇ ಅನೇಕರಿಗೆ ಪರೀಕ್ಷೆ ಮಾಡಿದಾಗ ಮಾತ್ರ ಕೋವಿಡ್ ಗೊತ್ತಾಗುತ್ತಿತ್ತು. ಆದರೆ, ಅವರೆಲ್ಲರೂ ಕ್ವಾರಂಟೈನ್ ಕೇಂದ್ರಗಳಲ್ಲಿ ಇರುವುದರಿಂದ ಜನತೆ ನೆಮ್ಮದಿಯಿಂದ ಇದ್ದರು. ಪಾಸಿಟಿವ್ ಬಂದವರನ್ನು ಸುಲಭವಾಗಿ ಅಧಿಕಾರಿಗಳು ಪತ್ತೆ ಹಚ್ಚಿ ಆಸ್ಪತ್ರೆಗೆ ಕಳುಹಿಸುತ್ತಿದ್ದರು. ಇದೀಗ ಕ್ವಾರಂಟೈನ್ ಕೇಂದ್ರದಲ್ಲಿ ಗಂಟಲು ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ರವಾನಿಸಿದವರನ್ನೂ ಮನೆಗೆ ಕಳುಹಿಸಲಾಗಿದೆ. ಹೀಗೆ ಮನೆಗೆ ಕಳುಹಿಸಿದ ಮೇಲೆ ಪ್ರಯೋಗಾಲಯದ ವರದಿ ಬರುತ್ತಿದ್ದು, ಗ್ರಾಮಕ್ಕೆ ತೆರಳಿ ಸೋಂಕಿತರನ್ನು ಪತ್ತೆ ಹೆಚ್ಚುವ ಕೆಲಸ ಅಧಿಕಾರಿಗಳು ಮಾಡಬೇಕಿದೆ.
ಒಂದೊಂದು ಜಿಲ್ಲೆಯಲ್ಲಿ ದಿನಕ್ಕೆ 50ಕ್ಕೂ ಜನರಲ್ಲಿ ಸೋಂಕು ಕಂಡು ಬರುತ್ತಿದ್ದು, ಆಸ್ಪತ್ರೆಗೆ ಕರೆತರಲು ಆಂಬ್ಯುಲೆನ್ಸ್‌ಗಳ ಸಮಸ್ಯೆ ಸಹ ಎದುರಾಗುವ ಸಂಭವವಿದೆ. ಮೇಲಾಗಿ ಕುಟುಂಬಸ್ಥರು ಹಾಗೂ ಗ್ರಾಮಸ್ಥರೊಂದಿಗೆ ಸೋಂಕಿತರು ಬೆರೆತು ಹೋಗುತ್ತಿದ್ದಾರೆ. ಹೀಗಾಗಿ ಸೋಂಕಿತ ಸಂಪರ್ಕಕ್ಕೆ ಬಂದವರನ್ನೂ ಗುರುತಿಸಿ ಕ್ವಾರಂಟೈನ್ ಮಾಡುವುದು, ಇಲ್ಲವೇ ಆಸ್ಪತ್ರೆಗೆ ಸೇರುವುದು ಜಿಲ್ಲಾಡಳಿತ ಮತ್ತು ಅಧಿಕಾರಿಗಳಿಗೆ ಸವಾಲಿನ ಕೆಲಸವೇ ಸರಿ.
ಚಿತ್ತಾಪುರ ತಾಲೂಕಿನ ದೇವಾಪುರ ತಾಂಡಾದಲ್ಲಿ ಇಬ್ಬರು ಸಹೋದರರ ನಡುವಿನ ಸಾಮ್ಯತೆಯಿಂದ ಅಧಿಕಾರಿಗಳೇ ಗೊಂದಲಕ್ಕೀಡಾಗಿ, ಕೋವಿಡ್ ಸೋಂಕಿತ ವ್ಯಕ್ತಿಯನ್ನು ಮನೆಯಲ್ಲಿ, ಸೋಂಕಿಲ್ಲದ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದ ಯಡವಟ್ಟಿನ ಪ್ರಸಂಗವೂ ನಡೆದು ಹೋಗಿದೆ.
ಇಂದಿನಿಂದ “ಮಹಾ’ ರೈಲು!
ಮಹಾರಾಷ್ಟ್ರದಿಂದ ಬಂದ ಕಾರ್ಮಿಕರು ಕೋವಿಡ್ ಹೊತ್ತು ತಂದು ತಲ್ಲಣ ಸೃಷ್ಟಿಸಿರುವ ನಡುವೆಯೇ ಜೂ.1ರಿಂದ ಮುಂಬೈ-ಬೆಂಗಳೂರು ನಡುವಿನ ಉದ್ಯಾನ್ ಎಕ್ಸ್‌ಪ್ರೆಸ್ ಆರಂಭವಾಗಲಿದೆ. ಈ ರೈಲು ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ, ಯಾದಗಿರಿ, ರಾಯಚೂರು ಮೂಲಕವೇ ಸಂಚರಿಸಲಿದ್ದು, ಮುಂಬೈನಿಂದ ಮತ್ತಷ್ಟು ಜನರು ಆಗಮಿಸುವ ಸಾಧ್ಯತೆ ಇದೆ. ಹೀಗಾಗಿ ಮತ್ತಷ್ಟು ಕೋವಿಡ್ ಆತಂಕ ಹೆಚ್ಚಾಗಿದೆ.
ಕಳೆದ ನಾಲ್ಕು ದಿನಗಳಲ್ಲಿ 29 ಸಾವಿರ ಜನರನ್ನು ಕ್ವಾರಂಟೈನ್ ಕೇಂದ್ರಗಳಿಂದ ಮನೆಗಳಿಗೆ ಕಳುಹಿಸಲಾಗಿದೆ. ಗಂಟಲು ಮಾದರಿ ಸಂಗ್ರಹಿಸಿದವರನ್ನು ಕಡ್ಡಾಯವಾಗಿ ಹೋಂ ಕ್ವಾರಂಟೈನ್ ಇರುವಂತೆ ಸೂಚಿಸಲಾಗಿದೆ. ಅಲ್ಲದೇ, ಅವರ ಮೇಲೆ ಸ್ಥಳೀಯ ಅಧಿಕಾರಿಗಳು ನಿಗಾ ವಹಿಸಲಿದ್ದಾರೆ. ರೈಲಿನ ಮೂಲಕ ಜಿಲ್ಲೆಗೆ ಆಗಮಿಸುವವರೆಗೆ ಕಡ್ಡಾಯವಾಗಿ 7 ದಿನ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗುತ್ತದೆ.
ಶರತ್ ಬಿ.,
ಜಿಲ್ಲಾಧಿಕಾರಿ