Advertisement

Kalaburagi: ಕಾಂಗ್ರೆಸ್‌ನ ಒಳ ಜಗಳ ಸಾಬೀತುಪಡಿಸಿದ ಸಮಾವೇಶ: ವಿಜಯೇಂದ್ರ

02:24 PM Dec 04, 2024 | Team Udayavani |

ಕಲಬುರಗಿ: ಡಿಸೆಂಬರ್ 5 ರಂದು ಹಾಸನದಲ್ಲಿ ಶಕ್ತಿ ಪ್ರದರ್ಶನ ಎನ್ನುವ ನಿಟ್ಟಿನಲ್ಲಿ ನಡೆಯುವ ಸಿಎಂ ಸ್ವಾಭಿಮಾನ ಸಮಾವೇಶ ಇಲ್ಲವೋ ಜನ ಕಲ್ಯಾಣ ಸಮಾವೇಶವೋ ಅಥವಾ ಕಾಂಗ್ರೆಸ್ ಕಾರ್ಯಕರ್ತರ ಅಭಿನಂದನಾ ಸಮಾವೇಶದ ಹಗ್ಗ ಜಗ್ಗಾಟವು ಕಾಂಗ್ರೆಸ್ ಪಕ್ಷದೊಳಗಿನ ಒಳ ಜಗಳ ಸಾಬೀತುಪಡಿಸುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಟೀಕಿಸಿದರು.

Advertisement

ವಕ್ಫ್ ವಿರುದ್ಧರ ಹೋರಾಟದಲ್ಲಿ ಪಾಳ್ಗೊಳ್ಳಲು ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಸಿಎಂ ಸಿದ್ಧರಾಮಯ್ಯ ಸ್ವಾಭಿಮಾನ ಎಂಬುದಾಗಿ ಹೇಳಿ ತದನಂತರ ಅಭಿಮಾನಿಗಳ ಸಮಾವೇಶ ಹಾಗೂ ಜನಾಂದೋಲನ ಎನ್ನುತ್ತಿರುವುದು ಕಾಂಗ್ರೆಸ್ ಪಕ್ಷದಲ್ಲಿನ ಒಡಕು ತಿಳಿಯಪಡಿಸುತ್ತದೆ. ಇದು ಈಗ ಶುರುವಾಗಿದ್ದು, ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದ ಸ್ವರೂಪ ಪಡೆದುಕೊಳ್ಳಲಿದೆ ಎಂದು ಭವಿಷ್ಯ ನುಡಿದರು.

ಕಾನೂನಿಗೆ ಭಯ ಇಲ್ಲದಂತಾಗಿದೆ; ರಾಜ್ಯದಾದ್ಯಂತ ನಡೆಯುತ್ತಿರುವ ಅತ್ಯಾಚಾರ ಹಾಗೂ ಹಲವರ ದಬ್ಬಾಳಿಕೆ ನೋಡಿದರೆ ಕಾನೂನಿಗೆ ಜನರ ಭಯ ಇಲ್ಲ ಎನ್ನುವಂತಾಗಿದೆ. ಸೋಮವಾರ ಕಲಬುರಗಿ ಜಿಲ್ಲೆಯ ಯಡ್ರಾಮಿ ವ್ಯಾಪ್ತಿಯಲ್ಲಿ ೧೧ ವರ್ಷದ ಬಾಲಕಿ ಮೇಲಿನ ಅತ್ಯಾಚಾರವೇ ಇದಕ್ಕೆ ತಾಜಾ ಉದಾಹರಣೆ. ಕೆಲವರಿಗೆ ತಾವೇನು ಮಾಡಿದರೂ ಕಾನೂನು ಅನ್ವಯಿಸುವುದಿಲ್ಲ ಎಂಬ ಮನೋಧೋರಣೆಯೇ ಕಾನೂನು ಸುವ್ಯವಸ್ಥೆಗೆ ಸವಾಲಾಗಿ ಪರಿಣಮಿಸಿದೆ. ಹಲವು ಪ್ರಕರಣಗಳು ಜಾತಿ, ಧರ್ಮ ಎಂಬುದಾಗಿ ಲೆಕ್ಕ ಹಾಕದೇ ಕಠಿಣ ನಿರ್ಧಾರಕ್ಕೆ ಬನ್ನಿ ಎಂದು ಆಗ್ರಹಿಸಿದರು.

ಡಿ. 7ರ ಕೋರ್ ಕಮಿಟಿಯಲ್ಲಿ ಎಲ್ಲವೂ ಚರ್ಚೆ: ಶಾಸಕ ಬಸವನಗೌಡ ಪಾಟೀಲ್ ಪಕ್ಷದ ನಾಯಕತ್ವದ ವಿರುದ್ಧ ನಿರಂತರ ಬಹಿರಂಗೆ ಟೀಕೆ ಹಾಗೂ ಎಸ್.ಟಿ. ಸೋಮಶೇಖರ ಪಕ್ಷದಿಂದ ದೂರಾಗಿರುವುದು ಸೇರಿದಂತೆ ಇತರ ವಿಷಯಗಳ ಜತೆಗೆ ಬೆಳಗಾವಿ ಅಧಿವೇಶನದಲ್ಲಿ ಪಕ್ಷದ ಹೋರಾಟದ ಕುರಿತಾಗಿ ಡಿ.7 ರಂದು ನಿಗಧಿಯಾಗಿರುವ ಬಿಜೆಪಿ ಕೋರ್ ಸಮಿತಿ ಸಭೆಯಲ್ಲಿ ಚರ್ಚೆಯಾಗಿ ಎಲ್ಲದಕ್ಕೂ ಬ್ರೇಕ್ ಹಾಕುವ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ವಿಜಯೇಂದ್ರ ಇದೇ ಸಂದರ್ಭದಲ್ಲಿ ತಿಳಿಸಿದರು.

Advertisement

ಮನವಿ ಸಲ್ಲಿಸುವುದಿಲ್ಲ: ವಕ್ಪ್ ರದ್ದತಿ ವಿರುದ್ದ ಬಿಜೆಪಿ ಕೈಗೊಂಡಿರುವ ಪ್ರತಿಭಟನೆ ರಾಜ್ಯಾದಾದ್ಯಂತ ನಡೆಯುತ್ತಿದ್ದು, ಈಗಾಗಲೇ ಜಗದಾಂಬಿಕಾ ಪಾಲ್ ನೇತೃತ್ವದ ಸಂಸತ್ತಿನ ಜಂಟಿ ಸಮಿತಿಗೆ ಹಿರಿಯ ನಾಯಕ ಗೋವಿಂದ ಕಾರಜೋಳ ರಚಿತವಾಗಿರುವ ಸಮಿತಿ ಈಗಾಗಲೇ ವಕ್ಫ್ ಸಂಧಿಸಿದಂತೆ ಈಗಾಗಲೇ ದೂರನ್ನು ಸಲ್ಲಿಸಲಾಗಿದೆ. ಈಗ ಮತ್ತೊಮ್ಮೆ ದೂರು ಸಲ್ಲಿಸುವುದಿಲ್ಲ. ಯತ್ನಾಳ ಯಾಕೆ? ಜನ ಸಾಮಾನ್ಯರು ಬೇಕಾದರೂ ಸಮಿತಿಗೆ ದೂರು ಸಲ್ಲಿಸಬಹುದು. ದೊಡ್ಡವರ ಬಗ್ಗೆ ಮಾತನಾಡುವುದಿಲ್ಲ. ಎಲ್ಲವೂ ವರಿಷ್ಠರು ನೋಡಿಕೊಳ್ಳುತ್ತಾರೆ ಎಂದು ಜಾರಿಕೊಂಡರು.

ಮುಡಾ ಹಗರಣದಲ್ಲಿ ಸಿಎಂ ಒಬ್ಬರೇ ಇಲ್ಲ: ಮುಡಾ ಹಗರಣವು ಸಿಎಂ ಸಿದ್ಧರಾಮಯ್ಯ ಕುಟುಂಬವೊಂದಕ್ಕೆ ಮಾತ್ರ ಸಿಮೀತವಾಗಿಲ್ಲ. ಇದರಲ್ಲಿ ರಿಯಲ್ ಎಸ್ಟೇಟ್‌ದವರು ಸೇರಿ ಇತರರಿದ್ದಾರೆ ಎಂದು ಬಿಜೆಪಿ ಹೋರಾಟ ಮಾಡಿರುವುದನ್ನು ಈಗ ಇಡಿ ದಾಳಿ ಮೂಲಕ ಸಾಬೀತಾಗಿದೆ. ಆದರೆ ಇನ್ನೆರಡು ದಿನಗಳಲ್ಲಿ ಸಿಎಂ ಸಿದ್ಧರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್, ಕಾಂಗ್ರೆಸ್ ಶಾಸಕರನ್ನು ಟಾರ್ಗೆಟ್ ಮಾಡಿ ಇಡಿ ಬಳಸಿಕೊಳ್ಳಲಾಗುತ್ತಿದೆ ಎಂಬ ಟೀಕೆ ಹೊರಬಾರದೇ ಇರದು. ಪ್ರಮುಖವಾಗಿ ಕಾಂಗ್ರೆಸ್ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಪ್ರಮುಖವಾಗಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯುಷನ್‌ಗಾಗಿ ರಾಜ್ಯಪಾಲರಿಗೆ ಶಿಫಾರಸ್ಸು ಮಾಡುವ ಕುರಿತಾಗಿ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡಿರುವುದು ಇದಕ್ಕೆ ಬಲವಾದ ಸಾಕ್ಷಿ. ಯಡಿಯೂರಪ್ಪ ಅವರನ್ನು ಕಂಡರೆ ಭಯ. ಹೀಗಾಗಿ ರಾಜಕೀಯ ಪ್ರೇರಿತಕ್ಕೆ ಮುಂದಾಗಿದೆ ಎಂದು ವಿಜಯೇಂದ್ರ ಟೀಕಿಸಿದರು.

ಕಲ್ಯಾಣ ಕರ್ನಾಟಕ ಭಾಗಕ್ಕೆ ಕೃಷಿ ಸಚಿವರು ಭೇಟಿ ನೀ‌ಡಲಿ: ಕಲ್ಯಾಣ ಕರ್ನಾಟಕದ ಪ್ರಮುಖ ವಾಣಿಜ್ಯ ಬೆಳೆ ತೊಗರಿ ನೆಟೆರೋಗಕ್ಕೆ ಒಳಗಾಗಿ ಸಂಪೂರ್ಣ ಒಣಗಿದೆ. ಹೀಗಾಗಿ ಕೃಷಿ ಸಚಿವ ಚೆಲುವರಾಯ ಸ್ವಾಮಿ ಈಗಲಾದರೂ ಕಕ ಭಾಗಕ್ಕೆ ಭೇಟಿ ನೀಡಲಿ. ಅದಕ್ಕಿಂತ ಮೊದಲು ಪ್ರತಿ ಎಕರೆಗೆ ೨೫ರಿಂದ ೩೦ ಸಾವಿರ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.

ಶಾಸಕ ಬಸವರಾಜ ಮತ್ತಿಮಡು, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ, ನಗರಾಧ್ಯಕ್ಷ ಚಂದು ಪಾಟೀಲ್, ಮುಖಂಡರಾದ ಸುರೇಶ ಸಜ್ಜನ್, ಗೌತಮ ಪಾಟೀಲ್ ಸೇರಿದಂತೆ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next