ಕಲಬುರಗಿ: ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಬೇಕು. ಅವರು ಸಮಾಜದಲ್ಲಿ ಸ್ವಾಭಿಮಾನಿಗಳಾಗಿ ಹೊರಹೊಮ್ಮಿ ದೇಶದ ಸಂಸ್ಕೃತಿ ಎತ್ತಿ ಹಿಡಿಯುವಂತೆ ಆಗಬೇಕೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಹೇಳಿದರು.
ತಾಲೂಕಿನ ತಾಡ ತೆಗನೂರ ಗ್ರಾಮದಲ್ಲಿ ರವಿವಾರ ಹಮ್ಮಿಕೊಂಡಿದ್ದ ರಾಮಕೃಷ್ಣ ವಿವೇಕಾನಂದ ಆಶ್ರಮದ ವಿವೇಕಾನಂದ ವಿದ್ಯಾಪೀಠದ ಸಂಸ್ಕೃತಿ ಭವನದ ಅಡಿಗಲ್ಲು ಸಮಾರಂಭ, ಅಲೆಮಾರಿ-ಅರೆ ಅಲೆಮಾರಿ ವಿದ್ಯಾರ್ಥಿಗಳ ದಶಮಾನೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಮನುಷ್ಯನಿಗೆ ಅರಿವು ಮೂಡಿಸುವುದೇ ನಿಜವಾದ ಶಿಕ್ಷಣ. ಸ್ವಾಭಿಮಾನಿ, ಸ್ವಾವಲಂಬಿ ಮತ್ತು ಸಮಾಜಮುಖೀಯಾಗಿ ವಿದ್ಯಾರ್ಥಿಗಳನ್ನು ಪರಿವರ್ತನೆ ಮಾಡುವುದೇ ಪರಿಪೂರ್ಣ ಶಿಕ್ಷಣ. ಅಲ್ಲದೇ ಈಗಿನ ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಆದರ್ಶ ವ್ಯಕ್ತಿಯನ್ನಾಗಿ ರೂಪಿಸಬೇಕು. ಈ ನಿಟ್ಟಿನಲ್ಲಿ ವಿವೇಕಾನಂದ ವಿದ್ಯಾ ಸಂಸ್ಥೆ ಪ್ರಯತ್ನಿಸುತ್ತಿದೆ ಎಂದರು.
ರಾಮಕೃಷ್ಣ ವಿವೇಕಾನಂದ ಆಶ್ರಮದ ಮಹೇಶ್ವರಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಸಂಸ್ಥೆ ನಡೆದು ಬಂದ ದಾರಿಯನ್ನು ಮೆಲಕು ಹಾಕಿದರು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಬೀದರ್‌ನ ಅಲ್ಲಮಪ್ರಭು ಚಟ್ನಳ್ಳಿ ಮಠದ ಸಿದ್ದೇಶ್ವರಾನಂದ ಮಹಾಸ್ವಾಮೀಜಿ, ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಜಿ.ಪಂ ಸದಸ್ಯ ರೇವಣಸಿದ್ದ, ಬಿಜೆಪಿ ಯುವ ಮುಖಂಡ ರವಿ ಬಿರಾದಾರ, ನಿವೃತ್ತ ಪ್ರಾಂಶುಪಾಲ ನರೇಂದ್ರ ಬಡಶೇಸಿ, ಸಂತೋಷ ನರೋಣ ಹಾಗೂ ವಿವೇಕಾನಂದ ವಿದ್ಯಾ ಪೀಠದ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.