ಕಲಬುರಗಿ: ಕೊರೊನಾ ಸೋಂಕಿನ ಭಯ ಹಾಗೂ ಸೋಂಕನ್ನು ನಿಯಂತ್ರಿಸಲು ಜಿಲ್ಲಾಡಳಿತ ಹೇರಿದ ಬಿಗಿ ಕ್ರಮದಿಂದ ನಗರ ವಾಸಿಗಳು ಭಾನುವಾರ ಮನೆಗಳಿಂದ ಹೊರ ಬರಲಿಲ್ಲ. ಜನತೆ ರಸ್ತೆಗಿಳಿಯದ ಕಾರಣ ಇಡೀ ನಗರ ಬಿಕೋ ಎನ್ನುತ್ತಿತ್ತು.
ಕೊರೊನಾ ಭೀತಿಯಿಂದ ಐತಿಹಾಸಿಕ ಶರಣ ಬಸವೇಶ್ವರ ಜಾತ್ರೆ ತನ್ನ ವೈಭವ ಕಳೆದುಕೊಂಡಿದೆ. ಮಾ.13ರಂದು ನಡೆದ ರಥೋತ್ಸವದಲ್ಲಿ ಆತಂಕದಿಂದಲೇ ಸಾವಿರಾರು ಜನರು ಭಾಗಿಯಾಗಿದ್ದರು. ಆದರೆ, ನಂತರದ ಎರಡು ದಿನಗಳಿಂದ ಅಪ್ಪನ ಜಾತ್ರೆ ಕಳೆಗುಂದಿದೆ. ಜನರಿಲ್ಲದ ಪರಿಣಾಮ ಸಣ್ಣ-ಪುಟ್ಟ ವ್ಯಾಪಾರಸ್ಥರು ತಮ್ಮ ಮಳಿಗೆಗಳನ್ನು ಬಂದ್ ಮಾಡುತ್ತಿದ್ದಾರೆ.
347 ಬಸ್ ಟ್ರಿಪ್ ಕಡಿತ: ಸೋಂಕು ಹರಡುವುದನ್ನು ತಡೆಯಲು ಜಿಲ್ಲಾಡಳಿತ ಸಾರಿಗೆ ಬಸ್ ಸಂಚಾರ ಕಡಿತಗೊಳಿಸಿದೆ. ಭಾನುವಾರ ಕಲಬುರಗಿಯಿಂದ 345 ಟ್ರಿಪ್‌ಗ್ಳ ನಿರ್ಗಮನ ಸ್ಥಗಿತಗೊಳಿಸಲಾಗಿತ್ತು. ಬೆಂಗಳೂರು, ಹೈದ್ರಾಬಾದ್, ಸೊಲ್ಲಾಪುರ, ಲಾತೂರು ಮೊದಲಾದ ನಗರಗಳಿಗೆ ತೆರಳುವ ಬಸ್‌ಗಳ ಸಂಚಾರದಲ್ಲೂ ಕಡಿತ ಮಾಡಲಾಗಿತ್ತು.
ಕೇರಳದ ಗಡಿ ಪ್ರದೇಶಗಳಲ್ಲಿ ತಪಾಸಣೆ: ಕೊರೊನಾ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ರೈಲು, ರಸ್ತೆಗಳ ಮೂಲಕ ರಾಜ್ಯಕ್ಕೆ ಆಗಮಿಸುವವರ ಕಡ್ಡಾಯ ತಪಾಸಣೆಗೆ ಮುಂದಾಗಿರುವ ಕೇರಳ ಸರ್ಕಾರ, ಎಲ್ಲಾ ಗಡಿ ಪ್ರದೇಶಗಳಲ್ಲೂ ಸ್ಕ್ರೀನಿಂಗ್ ನಡೆಸುವುದಾಗಿ ಘೋಷಿಸಿದೆ.
ಕರ್ನಾಟಕ ಮತ್ತು ತಮಿಳುನಾಡಿನೊಂದಿಗೆ ಗಡಿ ಹಂಚಿಕೊಂಡಿರುವ ಕೇರಳ, ಈಗಾಗಲೇ 24 ಪ್ರದೇಶಗಳನ್ನು ಇದಕ್ಕಾಗಿ ಗುರುತಿಸಿದೆ. ಇಲ್ಲಿರುವ ವಿಶೇಷ ತಂಡ ರಾಜ್ಯದೊಳಕ್ಕೆ ಬರುವ ಪ್ರತಿಯೊಬ್ಬರನ್ನೂ ಸ್ಕ್ರೀನಿಂಗ್ ನಡೆಸಿಯೇ ಒಳ ಬಿಡಲಿವೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.