ಕಲಬುರಗಿ: ಕೋವಿಡ್ ಮಹಾಮಾರಿಗೆ ಶಹಾಬಾದ್ ತಾಲೂಕಿನ ಮರತೂರ ಗ್ರಾಮ ಪಂಚಾಯಿತಿಯ 58 ವರ್ಷದ ಪಿಡಿಒ ಶನಿವಾರ ಬಲಿಯಾಗಿದ್ದಾರೆ.
ಕಲಬುರಗಿ ತಾಲೂಕಿನ ಹತಗುಂದಾ ಗ್ರಾಮದ ನಿವಾಸಿಯಾಗಿದ್ದ ಪಿಡಿಒ ಅನಾರೋಗ್ಯದ ಕಾರಣದಿಂದ ಜ.16ರಿಂದ ರಜೆ ಮೇಲೆ ಇದ್ದರು. ಜು.18ರಂದು ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದರು. ಕೋವಿಡ್ ಪಾಸಿಟಿವ್ ಎಂದು ವರದಿ ಬಂದಿತ್ತು. ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಶನಿವಾರ ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ಶಹಾಬಾದ್ ತಾಲೂಕ ಪಂಚಾಯಿತಿ ಇಓ ಶೃಂಗೇರಿ ತಿಳಿಸಿದ್ದಾರೆ.
ಕಳೆದ 7 ವರ್ಷಗಳಿಂದ ಮರತೂರು ಪಿಡಿಒ ಆಗಿದ್ದ ಅವರು, ಹೊನಗುಂಟ ಪಂಚಾಯಿತಿಯ ಪ್ರಭಾರಿಯಾಗಿಯೂ ಕಾರ್ಯ ನಿರ್ವಹಿಸುತ್ತಿದ್ದರು ಎಂದೂ ಇಓ ಮಾಹಿತಿ ನೀಡಿದರು.
ಮಹಾರಾಷ್ಟ್ರದಿಂದ ಮರಳಿದ ವಲಸಿಗರಿಗಾಗಿ ತೆರೆದ ಕ್ವಾರಂಟೈನ್ ಕೇಂದ್ರದ ಉಸ್ತುವಾರಿಯನ್ನು ಅವರು ನಿಭಾಯಿಸಿದ್ದರು. ಎರಡು ವಾರಗಳ ಹಿಂದೆ ಹೊರ ರಾಜ್ಯಗಳಿಂದ ಬಂದ ವಲಸಿಗರಿಗಾಗಿ ಶಾಲೆಯಲ್ಲಿ ತಾತ್ಕಾಲಿಕ ಕ್ವಾರಂಟೈನ್ ಕೇಂದ್ರವನ್ನು ಪಿಡಿಒ ತೆರೆದಿದ್ದರು.
ಉದ್ಯೋಗ ಖಾತ್ರಿ ಯೋಜನೆಯ ಕೆಲಸಗಳು ಆರಂಭವಾದ ಮೇಲೆ ಪ್ರತಿ ದಿನ ಜನರೊಂದಿಗೆ ಹೆಚ್ಚು ಸಂಪರ್ಕಕ್ಕೆ ಬಂದಿದ್ದರು. ಹೊನಗುಂಟ ಪಂಚಾಯಿತಿಯಲ್ಲಿ ಒಂಭತ್ತು ಹಾಗೂ ಮರತೂರಿನಲ್ಲಿ ಹನ್ನೊಂದು ಸಿಬ್ಬಂದಿಯೊಂದಿಗೆ ಅವರು ಬೆರೆತು ಕೆಲಸ ಮಾಡಿದ್ದಾರೆ. ಆದರೆ, ಯಾರಲ್ಲೂ ಕೋವಿಡ್ ಲಕ್ಷಣಗಳು ಕಂಡುಬಂದಿಲ್ಲ ಎಂದು ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಸಹ ಕಾರ್ಯದರ್ಶಿ ಶಿವಾನಂದ ತಿಳಿಸಿದ್ದಾರೆ.