ಜೇವರ್ಗಿ: ಕಳೆದ ಜೂನ್‌ನಲ್ಲಿಯೆ ಬಹುತೇಕ ರೈತರು ಪ್ರಮುಖ ವಾಣಿಜ್ಯ ಬೆಳೆಗಳಾದ ತೊಗರಿ, ಹತ್ತಿ ಸೇರಿದಂತೆ ವಿವಿಧ ಬೆಳೆಗಳು ಬಿತ್ತನೆ ಮಾಡಿದ್ದರು. ಆಗ ಸಮರ್ಪಕ ಮಳೆಯಾಗಿರಲಿಲ್ಲ. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಬಾಡಿ ಹೋಗುತ್ತಿದ್ದ ಬೆಳೆಗಳಿಗೆ ಜೀವ ಕಳೆ ತುಂಬಿದಂತಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಕಳೆದ ಜೂನ್‌ನಲ್ಲಿ ವಾಡಿಕೆಯಂತೆ ಮಳೆಯಾಗದೇ ಇರುವುದರಿಂದ ಬಂದ ಅಲ್ಪ ಸ್ವಲ್ಪ ಮಳೆಯಲ್ಲಿಯೆ ಅಲ್ಪಾವಧಿ ಬೆಳೆಗಳಾದ ಹೆಸರು, ಎಳ್ಳು, ಉದ್ದು ಬೆಳೆಗಳನ್ನು ರೈತರು ಬಿತ್ತನೆ ಮಾಡಿದ್ದರು. ನಂತರ ಬಾರದ ಮಳೆಯಿಂದ ಅಲ್ಪಾವಧಿ ಬೆಳೆಗಳು
ನೆಲಕಚ್ಚಿದ್ದವು. ಪ್ರಸಕ್ತ ಬಿತ್ತನೆ ಮಾಡಿದ ಪ್ರಮುಖ ವಾಣಿಜ್ಯ ಬೆಳೆಗಳಾದ ಹತ್ತಿ, ತೊಗರಿ ಬೆಳೆಗಳಿಗೆ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಜಿಟಿ ಜಿಟಿ ಮಳೆ ಆಸರೆ ಕಲ್ಪಿಸಿದೆ.
ರಾಷ್ಟ್ರೀಯ ಹೆದ್ದಾರಿ ಬಸವೇಶ್ವರ ಚೌಕ್ ಹತ್ತಿರ ಇತ್ತಿಚೆಗೆ ನಿರ್ಮಿಸಿದ ರಸ್ತೆಗೆ ಗುಂಡಿಗಳು ಬಿದ್ದಿವೆ. ಈ ರಸ್ತೆಯಲ್ಲಿ ಅವೈಜ್ಞಾನಿಕ ಚರಂಡಿ ನಿರ್ಮಿಸಿದರಿಂದ ಜನರು ಯಾವ ಕಡೆ ಹೋಗಬೇಕು ಎನ್ನುವಂತಾಗಿದೆ. ಇತ್ತ ಪಟ್ಟಣದ ವಿದ್ಯಾನಗರ, ಕಾಖಾ ಕಾಲೋನಿ, ಲಕ್ಕಪ್ಪ ಲೇಔಟ್, ಬಸವೇಶ್ವರ ಕಾಲೋನಿ, ಓಂನಗರ ಬಡಾವಣೆಯಲ್ಲಿ ರಸ್ತೆಗಳು ಸಂಪೂರ್ಣ ಹಾಳಾಗಿವೆ.
ಇತ್ತ ವಿಜಯಪುರ ರಸ್ತೆಯಲ್ಲಿರುವ ಜೋಪಡಪಟ್ಟಿ ಬಡಾವಣೆಯಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿದೆ. ಪುರಸಭೆ ಅಧಿಕಾರಿಗಳು ಹಾಗೂ ಲೋಕೋಪಯೋಗಿ ಇಲಾಖೆ ಅ ಧಿಕಾರಿಗಳು ಇತ್ತ ಗಮನ ಹರಿಸಬೇಕಾಗಿದೆ. ಜನವರಿ ತಿಂಗಳಿಂದ ಜುಲೈ 19ರ ವರೆಗೆ 258.80ಎಂಎಂ ಸರಾಸರಿ ಮಳೆಯಾಗಬೇಕಿತ್ತು. ಸೆ. 2ರಂದು ಜೇವರ್ಗಿ 28.4ಎಂ.ಎಂ, ಆಂದೋಲಾ 46.8ಎಂ.ಎಂ, ನೆಲೋಗಿ 32.4ಎಂ.ಎಂ, ಜೇರಟಗಿ 25.8ಎಂ.ಎಂ, ಯಡ್ರಾಮಿ 31.2ಎಂ.ಎಂ, ಇಜೇರಿ 54.2ಎಂ.ಎಂ ಮಳೆಯಾಗಿದೆ.
ಸೆ.3ಜೇವರ್ಗಿ 37.8ಎಂ.ಎಂ, ಆಂದೋಲಾ 54.2 ಎಂಎಂ, ನೆಲೋಗಿ 24.6ಎಂ.ಎಂ, ಜೇರಟಗಿ 15.8ಎಂ. ಎಂ, ಯಡ್ರಾಮಿ 38.2ಎಂ.ಎಂ, ಇಜೇರಿ 11ಎಂ.ಎಂ ಮಳೆಯಾಗಿದೆ.
ಕಳೆದ ಸಾಲಿನಲ್ಲಿ ಅತಿವೃಷ್ಟಿ ಹಾಗೂ ನೆಟೆರೋಗದಿಂದ ತೊಗರಿ ಬೆಳೆ ಹಾನಿಗೊಳಗಾಗಿ ರೈತರು ಸಂಕಷ್ಟದಲ್ಲಿ ಸಿಲುಕಿದ್ದರು.
ರಾಜ್ಯ ಸರ್ಕಾರದಿಂದ ನೆಟೆ ರೋಗದ ಪರಿಹಾರ ಬಂದಿದ್ದರೂ ಸಮರ್ಪಕವಾಗಿ ಬಿಡುಗಡೆ ಮಾಡಿಲ್ಲ. ಎರಡನೇ ಹಾಗೂ ಮೂರನೇ ಹಂತದ ಪರಿಹಾರ ರೈತರ ಖಾತೆಗೆ ಜಮಾ ಆಗದೇ ಇರುವುದರಿಂದ ಆರ್ಥಿಕವಾಗಿ ತೊಂದರೆಯಾಗಿದೆ. ಆದ್ದರಿಂದ ಕೂಡಲೆ ರೈತರಿಗೆ ಪರಿಹಾರ ಜಮಾ ಮಾಡಬೇಕು.
ಪ್ರಕಾಶ ಬಿರೆದಾರ, ರೈತ, ಹರನೂರ
*ಪುನೀತ ಡಿ. ಕುಲಕರ್ಣಿ