ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳು ಹಿಂದುಳಿಯಲು ದುಡಿಯುವ ಜನರು ಗುಳೆ ಹೋಗುವುದೇ ಪ್ರಮುಖ ಕಾರಣವಾಗಿದೆ. ಜನರ ವಲಸೆ ತಪ್ಪಿಸಲು ಸಮಗ್ರ ಯೋಜನೆ ರೂಪಿಸಬೇಕೆಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯ ಉಪಾಧ್ಯಕ್ಷ, ಚಿಂತಕ ಜಿ.ಎನ್.ನಾಗರಾಜ ಆಗ್ರಹಿಸಿದರು.
ನಗರದ ಕನ್ನಡ ಭವನದಲ್ಲಿ ಮಂಗಳವಾರ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರ ಸಂಘದ ಏಳನೇ ರಾಜ್ಯ ಸಮ್ಮೇಳನದ ಸ್ವಾಗತ ಸಮಿತಿ ಹಮ್ಮಿಕೊಂಡಿದ್ದ “ವಲಸೆ-ಉದ್ಯೋಗ ಖಾತ್ರಿ’ ವಿಚಾರ ಸಂಕಿರಣದಲ್ಲಿ ಕೃಷಿ ಕೂಲಿಕಾರರ ಹಕ್ಕೊತ್ತಾಯಗಳ ಕುರಿತು ಅವರು ವಿಚಾರ ಮಂಡಿಸಿದರು.
ವಿಭಾಗೀಯ ಕೇಂದ್ರವಾಗಿರುವ ಕಲಬುರಗಿ ಸೇರಿದಂತೆ ಈ ಭಾಗದ ಆರು ಜಿಲ್ಲೆಗಳಲ್ಲಿ ಕೃಷಿ ಕೂಲಿಕಾರರು ಅಧಿಕವಾಗಿದ್ದಾರೆ. ಮಂಗಳೂರು ಭಾಗದಲ್ಲಿ ಶೇ.20ರಷ್ಟು ಕೂಲಿಕಾರರು ಇದ್ದರೆ, ಈ ಪ್ರದೇಶದಲ್ಲಿ ಶೇ.40ಕ್ಕಿಂತ ಅಧಿಕ ಕೂಲಿಕಾರರು ಇದ್ದಾರೆ. ಆದರೆ, ಅವರಿಗೆ ದುಡಿಯಲು ಸರಿಯಾದ ಕೆಲಸ ಸಿಗುತ್ತಿಲ್ಲ. ಹೀಗಾಗಿ ಬೆಂಗಳೂರಿನಂತಹ ಮಹಾನಗರಗಳಲ್ಲಿ ಕಟ್ಟಡ, ರಸ್ತೆ ನಿರ್ಮಾಣಕ್ಕೆ ಶ್ರಮಿಸುತ್ತಿದ್ದಾರೆ. ಈಗ ಮಂಗಳೂರು, ಕೇರಳಕ್ಕೂ ಜನತೆ ಕೆಲಸ ಅರಸಿ ವಲಸೆ ಹೋಗುತ್ತಿದ್ದಾರೆ ಎಂದು ಖೇದ ವ್ಯಕ್ತಪಡಿಸಿದರು.
ಮುಖ್ಯವಾಗಿ ಈ ಭಾಗ ಹಿಂದುಳಿಯಲು ಮತ್ತು ಜನರ ವಲಸೆಗೆ ರಾಜಕೀಯ ಇಚ್ಛಾಶಕ್ತಿ ಕೊರತೆಯೇ ಕಾರಣವಾಗಿದೆ. ಭೂಸುಧಾರಣೆ ಕಾಯ್ದೆ ಇಲ್ಲಿ ಸದುಪಯೋಗಕ್ಕಿಂತ ದುರುಪಯೋಗವಾಗಿದ್ದೇ ಹೆಚ್ಚು. ಈ ಭಾಗದಲ್ಲಿ ಆ ಕಾಯ್ದೆ ಸರಿಯಾಗಿ ಅನುಷ್ಠಾನಗೊಂಡಿಲ್ಲ. ಒಂದು ವೇಳೆ ಅಂದು ಕಾಯ್ದೆ ಸರಿಯಾಗಿ ಜಾರಿಗೊಂಡಿದ್ದರೆ, ಇಂದು ಕೂಲಿಕಾರರು ರೈತರಾಗಿರುತ್ತಿದ್ದರು. ಅದು ಹಾಗೆ ಆಗಲೇ ಇಲ್ಲ. ಪರಿಣಾಮ ಗೇಣಿದಾರರೇ ಈಗ ಕೂಲಿಕಾರರಾಗಿದ್ದಾರೆ. ಪ್ರತಿಯೊಂದು ಕುಟುಂಬ ಸ್ವಲ್ಪ-ಸ್ವಲ್ಪ ಸ್ವಂತ ಜಮೀನು ಹೊಂದಿದ್ದರೂ, ಅವರು ಇಲ್ಲೇ ಇದ್ದು ಕೃಷಿ ಮಾಡುತ್ತಾ ಜೀವನ ಸಾಗಿಸುತ್ತಿದ್ದರು. ಬಡಿಗ, ಕುಂಬಾರ ಸೇರಿದಂತೆ ಕುಲಕಸಬುದಾರರಿಗೂ ಕೆಲಸ ಸಿಗುತ್ತಿತ್ತು ಎಂದು ವಿಶ್ಲೇಷಿಸಿದರು.
ಗುಳೆ ತಡೆಗೆ ಕಸರತ್ತು ಮಾಡಿ: ದೇವರಾಜ ಅರಸು ಮುಖ್ಯಮಂತ್ರಿ ಆಗಿದ್ದಾಗ ಕಲಬುರಗಿಯಿಂದ ಇಂದಿರಾಗಾಂಧಿ ಆಪ್ತ ಸಿ.ಎಂ. ಸ್ಟೀಫನ್ ಚುನಾವಣೆಗೆ ಸ್ಪರ್ಧಿಸಿದ್ದರು. ಸ್ಟೀಫನ್ ಕಲಬುರಗಿ ಜನತೆಗೆ ಯಾರೆಂದು ಗೊತ್ತಿರಲಿಲ್ಲ. ಅಂತಹ ಸಂದರ್ಭದಲ್ಲಿ ಗುಳೆ ಹೋಗುವ ಜನರನ್ನು ಇಲ್ಲೇ ಉಳಿಸಿ ಸ್ಟೀಫನ್ ಅವರನ್ನು ಗೆಲ್ಲಿಸಲು ಸರ್ಕಾರ ಅನೇಕ ಕಸರಸ್ತು ಮಾಡಿತು. ಆಗ ಶಿವಮೊಗ್ಗದ ಜಿಲ್ಲಾಧಿಕಾರಿಯಾಗಿದ್ದ ಬಾಲಸುಬ್ರಮಣ್ಯನ್ ಅವರನ್ನು ಇಲ್ಲಿಗೆ ವರ್ಗಾಯಿಸಿ ಜನರಿಗೆ ಕೆಲಸ ಕೊಡಿಸಿ ಸರ್ಕಾರದ ಮೇಲೆ ವಿಶ್ವಾಸ ಮೂಡಿಸಲಾಯಿತು. ಅದೇ ರೀತಿಯಾಗಿ ಈಗಲೂ ದುಡಿಯುವ ಕೈಗಳಿಗೆ ಕೆಲಸ ಕೊಟ್ಟು ಗುಳೆ ತಡೆಗಟ್ಟಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಪಿ. ರಾಜಾ ಮಾತನಾಡಿ, ಗ್ರಾಮೀಣ ಪ್ರದೇಶದ ಜನರಿಗೆ ಕೆಲಸ ಕೊಡಲು ಹಾಗೂ ಗುಳೆ ತಪ್ಪಿಸಲೆಂದೇ ಸರ್ಕಾರ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಕಾಯ್ದೆ ಜಾರಿಗೆ ತಂದಿದೆ. ಇದು ಗ್ರಾಮೀಣ ಜನರ ಉದ್ಯೋಗ ಹಕ್ಕಾಗಿದೆ ಎಂದರು.
ನರೇಗಾ ಯೋಜನೆ ಲಾಭವನ್ನು ಕೃಷಿ ಕಾರ್ಮಿಕರು ಪಡೆದುಕೊಳ್ಳಬೇಕು. ಈ ಮೂಲಕ ಬಡತನದಿಂದ ಮುಕ್ತರಾಗಲು ಶ್ರಮಿಸಬೇಕು. ಅಲ್ಲದೇ ಖಾತ್ರಿ ಅನುಷ್ಠಾನದಲ್ಲಿ ಕೆಲ ತಾಂತ್ರಿಕ ದೋಷಗಳಾಗುತ್ತಿದ್ದು, ಅವುಗಳನ್ನು ಸರಿಪಡಿಸಲಾಗುವುದು. ಬೇಡಿಕೆಗೆ ತಕ್ಕಂತೆ ಉದ್ಯೋಗ ಮತ್ತು ಕೂಲಿ ಮೊತ್ತದ ಹೆಚ್ಚಳದ ಬಗ್ಗೆ ಸರ್ಕಾರ ಹಾಗೂ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯುವುದಾಗಿ ತಿಳಿಸಿದರು.
ಸಮ್ಮೇಳನ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಮೇಘರಾಜ ಕಠಾರೆ ಮಾತನಾಡಿ, ಕಲಬುರಗಿಯಲ್ಲಿ ಡಿ.13ರಿಂದ ಮೂರು ದಿನ ಕೂಲಿಕಾರರ ರಾಜ್ಯ ಸಮ್ಮೇಳನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ವಿಚಾರ ಸಂಕಿರಣ ಆಯೋಜಿಸಲಾಗಿದೆ. ಕೃಷಿ ಕೂಲಿಕಾರರ ಸಮಸ್ಯೆಗಳನ್ನು ಸಮ್ಮೇಳನದಲ್ಲಿ ಮಂಡಿಸಿ ಮುಂದಿನ ದಿನಗಳಲ್ಲಿ ಹೋರಾಟ ಕೈಗೆತ್ತಿಕೊಳ್ಳಲಾಗುವುದು.
ನರೇಗಾ ಯೋಜನೆ ದುರುಪಯೋಗ ಮತ್ತು ಯಂತ್ರಗಳ ಬಳಕೆಗೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದರು. ಇದೇ ವೇಳೆ ಕೂಲಿ ಕಾರ್ಮಿಕರ ಹಕ್ಕೊತ್ತಾಯ ಪತ್ರ ಬಿಡುಗಡೆ ಮಾಡಲಾಯಿತು. ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷೆ ಕೆ. ನೀಲಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖಂಡ ಭೀಮಶೆಟ್ಟಿ ಯಂಪಳ್ಳಿ, ಪವಿತ್ರಾ ವಸ್ತ್ರದ, ಶ್ರೀಮಂತ ಬಿರಾದಾರ, ಚಂದಮ್ಮ ಹಾವನೂರ, ಜಗದೇವಿ ಚಂದನಕೇರಾ, ನಂದಾದೇವಿ ಮನಗುಂಡೆ, ಜಯಶ್ರೀ ಬೆಣ್ಣೂರ ಪಾಲ್ಗೊಂಡಿದ್ದರು.