ಮುಂಬಯಿ: ನಮ್ಮೊಳಗೆ ಅನೇಕ ಪ್ರತಿಭೆಗಳು ಇದ್ದಾರೆ. ಆದರೆ ಅದನ್ನು ಗುರುತಿಸಿ ಪರ ಜಗತ್ತಿಗೆ ಪರಿಚಯಿಸುವ ಅಗತ್ಯವಿದೆ. ಈ ಕೆಲಸವನ್ನು ಕಲಾ ಸೌರಭವು ಮಾಡುತ್ತಿದೆ ಎಂದು ತಿಳಿದು ಸಂತೋಷವಾಗುತ್ತಿದೆ. ಪದ್ಮನಾಭ ಸಸಿಹಿತ್ಲು ಅವರ ನೇತೃತ್ವದ ಕಲಾ ಸೌರಭದ ಕೆಲಸ ಅಭಿನಂದನೀಯ, ಇಂತಹ ಸಂಘಟನೆಗಳು ಮುಂಬಯಿಯ ತುಳು ಕನ್ನಡಿಗರ ಮಧ್ಯೆ ಇದೆ ಎಂಬುವುದು ಮೆಚ್ಚುಗೆಯ ಕಾರ್ಯ ಎಂದು ಉದ್ಯಮಿ ಬಂಟರ ಸಂಘದ ಮಾಜಿ ಅಧ್ಯಕ್ಷ ಮನಮೋಹನ್ ಶೆಟ್ಟಿ ಅವರು ನುಡಿದರು.
ಅವರು ಕಲಾಸೌರಭ ಮುಂಬಯಿ ಇದರ ಬೆಳ್ಳಿಹಬ್ಬ ಸಂಭ್ರಮದ ಅಂಗವಾಗಿ ಆ. 12ರಂದು ಕುರ್ಲಾ ಪೂರ್ವದ ಬಂಟರ ಭವನದಲ್ಲಿ ನಡೆದ ಸಂಪೂರ್ಣ ದಿವ್ಯ ದರ್ಶನಂ ಮ್ಯೂಸಿಕ್ ಆಲ್ಬಂನ ಬಿಡುಗಡೆಗೊಳಿಸುವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು, ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಂಟರ ಸಂಘದ ಮಾಜಿ ಅಧ್ಯಕ್ಷ ಉದ್ಯಮಿ ವಿವೇಕ್ ಬಿ. ಶೆಟ್ಟಿ ಅವರು ಮಾತನಾಡಿ, ಕಲಾಸೌರಭದ ಈ ಕಲೆಯನ್ನು ಉಳಿಸುವ ಕಾರ್ಯಕ್ಕೆ ಇಲ್ಲಿಯ ತುಳು ಕನ್ನಡಿಗರು ಸಂಘ ಸಂಸ್ಥೆಗಳು ಮುಂಬಯಿಯ ಕನ್ನಡ ಪತ್ರಿಕೆಗಳು ಸದಾ ಸಹಕಾರವನ್ನು ನೀಡಬೇಕಾಗಿದೆ. ಅವರು ಇಂದು ಬಿಡುಗಡೆಗೊಳಿಸಿದ ಸಂಪೂರ್ಣ ದಿವ್ಯ ದರ್ಶನಂ ಮ್ಯೂಸಿಕ್ ಅಲ್ಬಂ ನಿಜವಾಗಿಯೂ ಒಂದು ವಿಶಿಷ್ಟವಾದ ಯೋಜನೆಯಾಗಿದೆ.
ಇದು ನಮಗೆ ಹಾಗೂ ಮಕ್ಕಳಿಗೆ ಸೇರಿದಂತೆ ಎಲ್ಲರಿಗೂ ಪ್ರಯೋಜನ ದೊರೆಯುವಂತದ್ದು, ಅವರ ಉದ್ದೇಶವನ್ನು ನಾಮವು ಗೌರವಿಸಬೇಕಾಗಿದೆ ಎಂದರು.
ಸಮಾರಂಭದಲ್ಲಿ ಆಶೀರ್ವಚನ ನೀಡಿದ ವಿದ್ವಾನ್ ಕೈರಬೆಟ್ಟು ವಿಶ್ವನಾಥ್ ಭಟ್ ಅವರು ಮಾತನಾಡಿ, ಪದ್ಮನಾಭ್ ಸಸಿಹಿತ್ಲು ತುಳು ಕನ್ನಡಿಗರ ನಡುವೆ ಇರುವ ಒಬ್ಬ ಪ್ರತಿಭಾವಂತ ಕಲಾವಿದ. ಅವರ ಪ್ರತಿಭೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುವಂಥದ್ದು, ಅವರಿಗೆ ಸರಿಯಾದ ಪ್ರೋತ್ಸಾಹ ಹಾಗೂ ಸಹಕಾರ ದೊರೆಯಬೇಕಾಗಿದೆ. ಅವರು ಇಂದು ಬಿಡುಗಡೆಗೊಳಿಸಿದ ಸಂಗೀತ ಆಲ್ಬಮ್ ತುಳುನಾಡಿನ ಹಾಗೂ ಭಾರತದ ಪ್ರಸಿದ್ಧ ಧಾರ್ಮಿಕ ಸ್ಥಳಗಳ ಪರಿಚಯದೊಂದಿಗೆ ಸಂಗೀತ ಹಾಗೂ ನೃತ್ಯಗಳನ್ನೊಳಗೊಂಡಿದ್ದು, ಇದೊಂದು ಅವರ ಅದ್ಭುತ ಕೊಡುಗೆಯಾಗಿದೆ. ಇದನ್ನು ನಾವು ಖರೀದಿಸಿ ಇತರರಿಗೆ ಉಡುಗೊರೆ ರೂಪದಲ್ಲೂ ಕೊಡಬಹುದಾಗಿದೆ.ಈ ಮೂಲಕ ಅವರನ್ನು ಹಾಗೂ ಅವರ ಸಂಸ್ಥೆ ಕಲಾಸೌರಭವನ್ನು ಪ್ರೋತ್ಸಾಹಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಉದ್ಯಮಿ ಕೃಷ್ಣ ಪಾಲೇಸ್ ಸಿಎಂಡಿ ಕೃಷ್ಣ ವೈ. ಶೆಟ್ಟಿ ದಂಪತಿ, ಬಿಲ್ಲವರ ಅಸೋಸಿಯೇಶನ್ ಮಾಜಿ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್, ಉದ್ಯಮಿ ರೋಹಿದಾಸ್ ಬಂಗೇರ, ಉದ್ಯಮಿ ಸದಾನಂದ ಗ್ರೂಪ್ ಆಫ್ ಹೊಟೇಲ್‌ನ ಮಾಲಿಕ ಸದಾನಂದ ಶೆಟ್ಟಿ ಪುಣೆ ಅವರಿಗೆ ರಾಷ್ಟ್ರೀಯರತ್ನ ಸೌರಭ ಪ್ರಶಸ್ತಿಯನ್ನು ಪ್ರದಾನಿಸಲಾಯಿತು. ಹಾಗೂ ಸದಾನಂದ ಕೆ. ಶೆಟ್ಟಿ ದಂಪತಿ, ಪೇಜಾವರ ಮಠ ಮುಂಬಯಿ ಇದರ ಪ್ರಬಂಧಕ ರಾಮ್‌ದಾಸ್ ಉಪಾಧ್ಯಾಯ ಇವರಿಗೆ ರಾಷ್ಟ್ರೀಯ ರಜತ ಸೌರಭ ಪ್ರಶಸ್ತಿಯನ್ನು ಪ್ರದಾನಿಸಲಾಯಿತು.
ವೇದಿಕೆಯಲ್ಲಿ ಉದ್ಯಮಿಗಳಾದ ಧರ್ಮಪಾಲ ದೇವಾಡಿಗ, ಬಾಲಕೃಷ್ಣ ಪಿ. ಭಂಡಾರಿ, ಪ್ರವೀಣ್ ಶೆಟ್ಟಿ ಪುಣೆ, ಹರೀಸ್ ಡಿ. ಸಾಲ್ಯಾನ್, ಡಾ| ಆರ್. ಕೆ. ಶೆಟ್ಟಿ, ಸಾಹಿತಿ ಡಾ| ಸುನೀತಾ ಎಂ. ಶೆಟ್ಟಿ, ಕನ್ನಡಿಗ ಕಲಾವಿದರ ಪರಿಷತ್ ಅಧ್ಯಕ್ಷ ಡಾ| ಸುರೇಂದ್ರ ಕುಮಾರ್ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.
ಪರಮಾನಂದ್ ಸಾಲ್ಯಾನ್ ಕಲಾಸೌರಭದ ಪರವಾಗಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಪದ್ಮನಾಭ ಸಸಿಹಿತ್ಲು ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ದಯಾಸಾಗರ ಚೌಟ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.