Advertisement

ಕಲಾ ಸೌರಭ ಮುಂಬಯಿ ಇದರ ಬೆಳ್ಳಿಹಬ್ಬ ಸಂಭ್ರಮಕ್ಕೆ ಅದ್ದೂರಿ ಚಾಲನೆ

01:53 PM Aug 15, 2018 | Team Udayavani |

ಮುಂಬಯಿ: ಕಲಾ ಸೌರಭ ಮುಂಬಯಿ ಇದರ ಬೆಳ್ಳಿಹಬ್ಬ ಸಂಭ್ರಮಕ್ಕೆ ಆ. 12ರಂದು ಅಪರಾಹ್ನ ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಹಿರಿಯ ಉದ್ಯಮಿ ವಾಮನ್‌ ಡಿ. ಪೂಜಾರಿ ಅವರು ದೀಪಪ್ರಜ್ವಲಿಸಿ ಚಾಲನೆ ನೀಡಿದರು.

Advertisement

ಈ ಸಂದರ್ಭದಲ್ಲಿ ಭಂಡಾರಿ ಸೇವಾ ಸಂಘ ಮುಂಬಯಿ ಮಾಜಿ ಅಧ್ಯಕ್ಷ ಬಾಲಕೃಷ್ಣ ಭಂಡಾರಿ ಪುತ್ತೂರು, ವಸಾಯಿಯ ಅಶೋಕ್‌ ಇಂಡಸ್ಟ್ರೀಸ್‌ನ ಮಾಲಕ ಅಶೋಕ್‌ ಶೆಟ್ಟಿ ಪೆರ್ಮುದೆ, ತಾಳಮದ್ದಳೆಯ ಅರ್ಥದಾರಿ ಕೆ. ಕೆ. ಶೆಟ್ಟಿ, ಯಕ್ಷ ಮಾನಸದ ಪ್ರವರ್ತಕ ಶೇಖರ್‌ ಆರ್‌. ಶೆಟ್ಟಿ ಇನ್ನ, ಉದ್ಯಮಿ ತೋನ್ಸೆ ನವೀನ್‌ ಶೆಟ್ಟಿ ಹಾಗೂ ಕಲಾ ಸೌರಭದ ರೂವಾರಿಗಳಾದ ಪದ್ಮನಾಭ ಸಸಿಹಿತ್ಲು, ಶೇಖರ್‌ ಸಸಿಹಿತ್ಲು ಉಪಸ್ಥಿತರಿದ್ದರು.

ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ವಾಮನ್‌ ಡಿ. ಪೂಜಾರಿ ಅವರು, ಸತತ 25 ವರ್ಷಗಳಿಂದ ಸಂಗೀತ ಹಾಗೂ ಕಲಾಕ್ಷೇತ್ರದಲ್ಲಿ ತನ್ನದೇ ರೀತಿಯಲ್ಲಿ ಸೇವೆಯನ್ನು ಸಲ್ಲಿಸುತ್ತಾ, ಅನೇಕ ಪ್ರತಿಭೆಗಳನ್ನು ಬೆಳಕಿಗೆ ತಂದ ಶ್ರೇಯಸ್ಸು ಕಲಾ ಸೌರಭಕ್ಕೆ ಲಭಿಸುತ್ತದೆ. ಪದ್ಮನಾಭ ಸಸಿಹಿತ್ಲು ಅವರಿಂದ ಇನ್ನಷ್ಟು ಕಲಾ ಸೇವೆಗೈದು, ಪ್ರತಿಭೆಗಳು ಬೆಳಕಿಗೆ ಬರುವಂತಾಗಲಿ. ಅವರ ಮುಂದಿನ ಯೋಜನೆ-ಯೋಚನೆಗಳಿಗೆ ಎಲ್ಲರ ಸಹಕಾರ, ಪ್ರೋತ್ಸಾಹ ಸದಾಯಿರಲಿ ಎಂದು ನುಡಿದರು.

ಪ್ರಾರಂಭದಲ್ಲಿ ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ಆಯೋಜಿತ ತಂಡಗಳಿಂದ ಮತ್ತು ಕಲಾ ಸೌರಭದ ಕಲಾವಿದರಿಂದ ಸ್ವಾಗತಾಭ್ಯಂ ಎಂಬ ಪಾರಂಪರಿಕ ನೃತ್ಯ ನರ್ತನ ಜರಗಿತು. ಅಂತಾರಾಷ್ಟ್ರೀಯ ಖ್ಯಾತಿಯ ಯುವ ಪ್ರತಿಭೆ ಭಕ್ತಿ ಸಂಗೀತ ಗಾಯಕಿ ಸೂರ್ಯ ಗಾಯತ್ರಿ ಬಳಗದವರಿಂದ ಭಕ್ತಿಪುಷ್ಪಾಂಜಲಿ ಸಂಗೀತ ರಸಮಂಜರಿಯನ್ನು ಆಯೋಜಿಸಲಾಗಿತ್ತು.

ಲಾಂಛನ ಬಿಡುಗಡೆ
ಸಮಾರಂಭದಲ್ಲಿ ವರ್ಷವಿಡೀ ಜರಗಲಿರುವ ಕಾರ್ಯಕ್ರಮಗಳ ಸಂಸ್ಕಾರ-2018 ಎಂಬ ಲಾಂಛನ ವನ್ನು ಬಾಲಕೃಷ್ಣ ಭಂಡಾರಿ ಅವರು ಬಿಡುಗಡೆಗೊಳಿಸಿದರು. ಸಾಂಸ್ಕೃತಿಕ ಸಮಾವೇಶ ಎಂಬ ಕಾರ್ಯಕ್ರಮದಲ್ಲಿ ಮುಂಬಯಿಯಲ್ಲಿ ಪ್ರಥಮ ಬಾರಿಗೆ ಯಕ್ಷಗಾಯನ, ಭಾವಗಾಯನ, ನಾಟ್ಯ ನರ್ತನದ ಅಪೂರ್ವ ಸಂಗಮ ಮಧುರ ಸಂಗೀತ ಮಿನದನ ಎಂಬ ಜುಗಲ್‌ಬಂಧಿ ಕಾರ್ಯಕ್ರಮ ನಡೆಯಿತು.

Advertisement

ತೆಂಕು-ಬಡಗು ತಿಟ್ಟಿನ ಯಕ್ಷಗಾನವು ಕರ್ನಾಟಕದ ಪ್ರತಿಭಾವಂತ ಕಲಾವಿದರಾದ ಪುಷ್ಕಲ್‌ ಕುಮಾರ್‌ ತೋನ್ಸೆ ಅವರಿಂದ ಪ್ರದರ್ಶನಗೊಂಡಿತು. 

ಭಾವಸಂಗೀತದಲ್ಲಿ ಸತೀಶ್‌ ಸುರತ್ಕಲ್‌ ಹಾಗೂ ಶೇಖರ್‌ ಸಸಿಹಿತ್ಲು ಅವರು ಭಾಗವಹಿಸಿದ್ದರು. ಮಧುರ ಸಂಗೀತದಲ್ಲಿ ಕಲಾವತಿ ದಯಾನಂದ್‌, ಉಡುಪಿಯ ಮಾಲಿನಿ ಕೇಶವ್‌ ಪ್ರಸಾದ್‌, ಜಗದೀಶ್‌ ಆಚಾರ್ಯ ಪುತ್ತೂರು, ರಾಜ್‌ಕುಮಾರ್‌ ಸೇರಿದಂತೆ ಕಲಾ ಸೌರಭದ ಗಾಯಕಿಯರು ಭಾಗವಹಿಸಿದ್ದರು. ವಿಜಯ ಶೆಟ್ಟಿ ಮತ್ತು ಅಮೃತಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. 

ಪದ್ಮನಾಭ ಸಸಿಹಿತ್ಲು ಪ್ರಾಸ್ತಾವಿಕ ವಾಗಿ ಮಾತನಾಡಿ ಸಂಸ್ಥೆಯ ಸಿದ್ಧಿ-ಸಾಧನೆಗಳನ್ನು ವಿವರಿಸಿ, ಮುಂದಿನ ಯೋಜನೆಗಳಿಗೆ ಎಲ್ಲರ ಸಹಕಾರವನ್ನು ಬಯಸಿದರು.

 ಚಿತ್ರ-ವರದಿ: ಸುಭಾಷ್‌ ಶಿರಿಯಾ

Advertisement

Udayavani is now on Telegram. Click here to join our channel and stay updated with the latest news.

Next