ಹೊಸದಿಲ್ಲಿ: ಗುಜರಾತ್‌ನಲ್ಲಿರುವ ಕಾಕಾಪರ್ ಪರಮಾಣು ವಿದ್ಯುತ್ ಕೇಂದ್ರದ ಮೂರನೇ ಹಂತವು ಉತ್ಪಾದನೆಯಲ್ಲಿ ನಿಖರತೆಯನ್ನು ಸಾಧಿಸಿದ್ದಕ್ಕಾಗಿ ಪ್ರಧಾನಿ ಮೋದಿ, ಭಾರತೀಯ ಪರಮಾಣು ವಿಜ್ಞಾನಿಗಳನ್ನು ಕೊಂಡಾಡಿದ್ದಾರೆ. ಇದು ‘ಮೇಕ್ ಇನ್ ಇಂಡಿಯಾ’ ಯೋಜನೆಯ ಜ್ವಲಂತ ಉದಾಹರಣೆ ಎಂದು ಅವರು ಹೇಳಿದ್ದಾರೆ.
ತಮ್ಮ ಅಭಿನಂದನೆಯನ್ನು ಟ್ವಿಟರ್ ಮೂಲಕ ಹೇಳಿರುವ ಅವರು, ‘ಕಾಕ್ರಾಪರ್ ಪರಮಾಣು ಕೇಂದ್ರದಲ್ಲಿ ಸ್ಥಾಪಿತವಾಗಿದ್ದ 700 ಎಂಡಬ್ಲ್ಯೂಇ ಕೆಎಪಿಪಿ-3 ರಿಯಾಕ್ಟರ್ ತನ್ನ ಕಾರ್ಯಕ್ಷಮತೆಯಲ್ಲಿ ನಿಖರತೆಯನ್ನು ಸಾಧಿಸಿದೆ.
ಸ್ವದೇಶಿ ತಂತ್ರಜ್ಞಾನದಡಿ ನಿರ್ಮಿಸಲಾಗಿದ್ದ ಈ ರಿಯಾಕ್ಟರ್, ಉತ್ಪಾದನಾ ಕ್ಷಮತೆಯಲ್ಲಿ ನಿಖರತೆ ಸಾಧಿಸಿರುವುದು ನಿಜಕ್ಕೂ ಹೆಮ್ಮೆಯ ವಿಚಾರ. ಈ ಸಾಧನೆ, ‘ಮೇಕ್ ಇನ್ ಇಂಡಿಯಾ ಯೋಜನೆ’ಯ ಜ್ವಲಂತ ಉದಾಹರಣೆ. ಭಾರತೀಯ ಪರಮಾಣು ವಿದ್ಯುತ್ ಉತ್ಪಾದನಾ ಕ್ಷೇತ್ರದಲ್ಲಿ ಹೊಸ ಶಕೆಯನ್ನು ಆರಂಭಿಸಲಿದೆ” ಎಂದು ಹೇಳಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಟ್ವೀಟ್ ಮಾಡಿ ದೇಶದ ಪರ ಮಾಣು ಇಂಧನ ಕ್ಷೇತ್ರದಲ್ಲಿ ದೊಡ್ಡ ಸಾಧನೆ. ದೇಶೀಯ ತಾಂತ್ರಿಕತೆ ಬಳಕೆ ಮಾಡಿಕೊಂಡು 700 ಮೆಗಾವ್ಯಾಟ್ ಸಾಮರ್ಥ್ಯದ ಮೂರನೇ ಘಟಕ ಸಿದ್ಧಪಡಿಸಲಾಗಿದೆ. ಇಂಥ ಸಾಧನೆಗೆ ಕಾರಣರಾದವರನ್ನು ದೇಶ ಯಾವತ್ತೂ ಸ್ಮರಿಸಿಕೊಳ್ಳುತ್ತದೆ ಎಂದು ಅಭಿನಂದನೆ ಸಲ್ಲಿಸಿದ್ದಾರೆ.
ಕಾಕ್ರಾಪರ್ ಪರಮಾಣು ವಿದ್ಯುತ್ ಸ್ಥಾವರ, ಸೂರತ್‌ನಿಂದ ಸುಮಾರು 80 ಕಿ.ಮೀ. ದೂರದಲ್ಲಿದ್ದು, ತಪತಿ ನದಿಯ ದಂಡೆಯಲ್ಲಿದೆ. ಮೊದಲ ಹಂತದ ಅಣು ವಿದ್ಯುತ್ ಸ್ಥಾವರದ ಕಾಮಗಾರಿ 1984ರ ಡಿ.1ರಂದು ಶುರುವಾಗಿ 1993ರ ಮೇ 6ರಂದು ಕಾರ್ಯಾರಂಭ ಮಾಡಿತ್ತು.